ದೇಶ

ಮುಂಬೈನಲ್ಲಿ ವರುಣನ ಅಬ್ಬರ; ಜನಜೀವನ ಅಸ್ತವ್ಯಸ್ತ: IMD orange ಅಲರ್ಟ್ ಹಿನ್ನೆಲೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ..!

ಐಎಂಡಿ ಮುಂಬೈ ಮತ್ತು ಉಪನಗರಗಳಲ್ಲಿ ಮಂಗಳವಾರವೂ ಕೆಲವೆಡೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಗಂಟೆಗೆ 60ರಿಂದ 70 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ.

ಮುಂಬೈನಲ್ಲಿ ವರುಣನ ಅಬ್ಬರ; ಜನಜೀವನ ಅಸ್ತವ್ಯಸ್ತ: IMD orange ಅಲರ್ಟ್ ಹಿನ್ನೆಲೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ..!
ಜಾಹೀರಾತು ಫಲಕ ಕುಸಿದಿರುವುದು.
Published On :

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಧಾರಾಕಾರ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಭಾರತೀಯ ಹವಾಮಾನ ಇಲಾಖೆ (IMD) ನಗರಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಸೋಮವಾರ ಸುರಿದ ಭಾರೀ ಮಳೆಯಿಂದ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಹಲವು ಕಡೆ ಮರಗಳು ನೆಲಕ್ಕುರುಳಿದ್ದು, ಗೋಡೆಗಳು ಮತ್ತು ಜಾಹೀರಾತು ಫಲಕಗಳು ಕುಸಿದ ಘಟನೆಗಳೂ ವರದಿಯಾಗಿವೆ.

ನೆರೆಯ ಪಾಲ್ಘರ್ ಜಿಲ್ಲೆಯ ವಿರಾರ್–ವಸಾಯಿ ಮಾರ್ಗ ಜಲಾವೃತವಾಗಿದ್ದರೂ, ಮಳೆಯ ತೀವ್ರತೆ ಕಡಿಮೆಯಾದ ಬಳಿಕ ನೀರಿನ ಮಟ್ಟ ಇಳಿಮುಖವಾಗಿದೆ. ಮಂಗಳವಾರ ಮುಂಜಾನೆ 3.57ಕ್ಕೆ ವಿರಾರ್‌ನಿಂದ ಚರ್ಚ್‌ಗೇಟ್‌ಗೆ ಮೊದಲ ಸ್ಥಳೀಯ ರೈಲು ಸಂಚರಿಸಿದೆ.

ಆದರೆ, ಪಶ್ಚಿಮ ರೈಲ್ವೆಯ ಸ್ಥಳೀಯ ರೈಲುಗಳು 20 ರಿಂದ 25 ನಿಮಿಷ ಹಾಗೂ ಮಧ್ಯ ರೈಲ್ವೆಯ ರೈಲುಗಳು 10 ರಿಂದ 15 ನಿಮಿಷ ತಡವಾಗಿ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋ ಹಾಗೂ BEST ಬಸ್ ಸೇವೆಗಳು ಮಾತ್ರ ಸಾಮಾನ್ಯವಾಗಿವೆ.

ಈ ನಡುವೆ ಐಎಂಡಿ ಮುಂಬೈ ಮತ್ತು ಉಪನಗರಗಳಲ್ಲಿ ಮಂಗಳವಾರವೂ ಕೆಲವೆಡೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಗಂಟೆಗೆ 60ರಿಂದ 70 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ.

IMDಯ ನಾಲ್ಕು ಹಂತದ ಎಚ್ಚರಿಕೆ ವ್ಯವಸ್ಥೆಯಲ್ಲಿ ಆರೆಂಜ್ ಅಲರ್ಟ್ ಮೂರನೇ ಹಂತವಾಗಿದ್ದು, ತೀವ್ರ ಹವಾಮಾನ, ಸಾರಿಗೆ ವ್ಯತ್ಯಯ ಮತ್ತು ವಿದ್ಯುತ್ ವ್ಯತ್ಯಯಗಳ ಸಾಧ್ಯತೆಯನ್ನು ಸೂಚಿಸುತ್ತದೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಪ್ರಕಾರ, ಮಂಗಳವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳಲ್ಲಿ ದ್ವೀಪ ನಗರ ಪ್ರದೇಶದಲ್ಲಿ 46 ಮಿ.ಮೀ., ಪೂರ್ವ ಉಪನಗರಗಳಲ್ಲಿ 77 ಮಿ.ಮೀ. ಹಾಗೂ ಪಶ್ಚಿಮ ಉಪನಗರಗಳಲ್ಲಿ 78 ಮಿ.ಮೀ. ಮಳೆಯಾಗಿದೆ.

ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇಯ ಮಿಸ್ಸಿಂಗ್ ಲಿಂಕ್ ಸುರಂಗದ ಸಮೀಪ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ 18 ಗಂಟೆಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಸಂಚಾರವನ್ನು ಸುರಕ್ಷತಾ ಪರಿಶೀಲನೆಯ ಬಳಿಕ ಪುನರಾರಂಭಿಸಲಾಗಿದೆ.

ಇದೇ ವೇಳೆ, ಪುಣೆ ಜಿಲ್ಲೆಯಲ್ಲಿ ಮಳೆಗೆ ಸಂಬಂಧಿಸಿದ ಪ್ರತ್ಯೇಕ ಘಟನೆಗಳಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಭೂಕುಸಿತ ಮತ್ತು ಪ್ರವಾಹದಿಂದಾಗಿ 500ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.