ಹೊಸ PMO ಕಚೇರಿ 'ಸೇವಾ ತೀರ್ಥ' ಕಟ್ಟಡಕ್ಕೆ ಪ್ರಧಾನಿ ಮೋದಿ ಸ್ಥಳಾಂತರ: ಮೊದಲ ದಿನವೇ ಹಲವು ಪ್ರಮುಖ ನಿರ್ಧಾರ!
1931 ರಲ್ಲಿ ನವದೆಹಲಿ ಆಧುನಿಕ ಭಾರತದ ರಾಜಧಾನಿಯಾಗಿ ಅಧಿಕೃತವಾಗಿ ಉದ್ಘಾಟನೆಯಾಗಿ 95 ವರ್ಷಗಳು ಪೂರೈಸಿದ ದಿನವಾದ ಇಂದು ಪ್ರಧಾನ ಮಂತ್ರಿ ಕಚೇರಿಯೂ ಸ್ಥಳಾಂತರವಾಗಿದೆ.

ನವದೆಹಲಿ: ಆಡಳಿತದಲ್ಲಿ ದಕ್ಷತೆ ಹಾಗೂ ಆಧುನಿಕ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ನೂತನ ಪ್ರಧಾನ ಮಂತ್ರಿ ಕಚೇರಿ (PMO) ಮತ್ತಿತರ ಸರ್ಕಾರದ ಕಚೇರಿ ಇರುವ 'ಸೇವಾ ತೀರ್ಥ ' ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು. ದಶಕಗಳ ಕಾಲ ರಾಷ್ಟ್ರಪತಿ ಭವನದ ಬಳಿ ಸೌತ್ ಬ್ಲಾಕ್ ನಲ್ಲಿದ್ದ ಪ್ರಧಾನ ಮಂತ್ರಿ ಕಚೇರಿಯನ್ನು ಪ್ರಧಾನಿ ಮೋದಿ ಶುಕ್ರವಾರ ಸೇವಾ ತೀರ್ಥದ ನೂತನ ಕಚೇರಿಗೆ ಸ್ಥಳಾಂತರಿಸಿದರು.
1931 ರಲ್ಲಿ ನವದೆಹಲಿ ಆಧುನಿಕ ಭಾರತದ ರಾಜಧಾನಿಯಾಗಿ ಅಧಿಕೃತವಾಗಿ ಉದ್ಘಾಟನೆಯಾಗಿ 95 ವರ್ಷಗಳು ಪೂರೈಸಿದ ದಿನವಾದ ಇಂದು ಪ್ರಧಾನ ಮಂತ್ರಿ ಕಚೇರಿಯೂ ಸ್ಥಳಾಂತರವಾಗಿದೆ. ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ಜಿತೇಂದ್ರ ಸಿಂಗ್ ಮತ್ತಿತರ ಪ್ರಧಾನ ಮಂತ್ರಿ ಕಾರ್ಯಾಲಯದ ಅತ್ಯುನ್ನತ ಅಧಿಕಾರಿಗಳೊಂದಿಗೆ ಪ್ರಧಾನ ಮಂತ್ರಿ ಸೇವಾ ತೀರ್ಥ ಸಂಕೀರ್ಣ ತಲುಪಿದರು.
ನೂತನ ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಷ್ಟ್ರೀಯ ಭದ್ರತಾ ಸೆಕ್ರಟರಿಯಟ್ ಮತ್ತು ಕ್ಯಾಬಿನೆಟ್ ಸೆಕ್ರೆಟರಿಯಟ್ ಇದೆ. ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಗಣೇಶ ವಿಗ್ರಹಕ್ಕೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಮಹಿಳೆಯರು, ರೈತರು ಹಾಗೂ ಯುವ, ದುರ್ಬಲ ನಾಗರಿಕರ ಕಲ್ಯಾಣಕ್ಕಾಗಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, PMO ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಪಿ ಕೆ ಮಿಶ್ರಾ ಮತ್ತು ಶಕ್ತಿಕಾಂತ ದಾಸ್ ಮತ್ತಿತರ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿ ನಾಗರಿಕನ ಜೀವ ಉಳಿಸುವ ರಕ್ಷಣೆಯನ್ನು ವಿಸ್ತರಿಸುವ ಮತ್ತು ಲಕ್ಷಪತಿ ದೀದಿಗಳ ಸಂಖ್ಯೆಯನ್ನು ಆರು ಕೋಟಿಗೆ ದ್ವಿಗುಣಗೊಳಿಸುವ ಪಿಎಂ ರಾಹತ್ ಯೋಜನೆಗೆ ಅನುಮೋದನೆ ನೀಡುವ ಕಡತಗಳಿಗೆ ಪ್ರಧಾನಿ ಸಹಿ ಹಾಕಿದರು. PM Rahat ಯೋಜನೆಯಡಿ ಅಪಘಾತ ಸಂತ್ರಸ್ತರಿಗೆ ರೂ 1.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಸಿಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇವಾ ತೀರ್ಥʼ ಪ್ರಧಾನ ಮಂತ್ರಿಗಳ ಕಚೇರಿಯಾಗಿದ್ದು, ಇದರಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ಸಂಪುಟ ಸಚಿವಾಲಯ ಇರಲಿದೆ. ಇವೆಲ್ಲವೂ ಈ ಹಿಂದೆ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
ಕರ್ತವ್ಯ ಭವನ-1 & 2ನೇ ಕಟ್ಟಡದಲ್ಲಿ ಹಣಕಾಸು ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳು ಇರಲಿವೆ.
ಎರಡೂ ಕಟ್ಟಡ ಸಂಕೀರ್ಣಗಳು ಡಿಜಿಟಲ್ ಸಂಯೋಜಿತ ಕಚೇರಿಗಳು, ರಚನಾತ್ಮಕ ಸಾರ್ವಜನಿಕ ಒಡನಾಟ ವಲಯಗಳು ಮತ್ತು ಕೇಂದ್ರೀಕೃತ ಸ್ವಾಗತ ಕೇಂದ್ರ ಸೌಲಭ್ಯಗಳನ್ನು ಹೊಂದಿವೆ. 4-ಸ್ಟಾರ್ ʻಗೃಹʼ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ಕಟ್ಟಡ ಸಂಕೀರ್ಣ, ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಜಲ ಸಂರಕ್ಷಣಾ ಕ್ರಮಗಳು, ತ್ಯಾಜ್ಯ ನಿರ್ವಹಣಾ ಪರಿಹಾರಗಳು ಮತ್ತು ಉನ್ನತ ಕಾರ್ಯಕ್ಷಮತೆಯ ಕಟ್ಟಡ ಪರಿಸರವನ್ನು ಒಳಗೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



