ದೇಶ

ಪಶ್ಚಿಮ ಬಂಗಾಳ ಬಜೆಟ್: ವಿಧಾನಸಭಾ ಚುನಾವಣೆ ಮೇಲೆ ಕಣ್ಣು; ಮಹಿಳೆಯರ ಮಾಸಿಕ ಭತ್ಯೆ 1,500 ರೂ ಗೆ ಹೆಚ್ಚಳ

ರಾಜ್ಯ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಇಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದರು.

ಪಶ್ಚಿಮ ಬಂಗಾಳ ಬಜೆಟ್: ವಿಧಾನಸಭಾ ಚುನಾವಣೆ ಮೇಲೆ ಕಣ್ಣು; ಮಹಿಳೆಯರ ಮಾಸಿಕ ಭತ್ಯೆ 1,500 ರೂ ಗೆ ಹೆಚ್ಚಳ
ಮಮತಾ ಬ್ಯಾನರ್ಜಿ
Published On :

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಗುರುವಾರ ಜನಪ್ರಿಯ ಬಜೆಟ್ ಮಂಡಿಸಿದ್ದು, ಮಹಿಳೆಯರಿಗೆ ಮಾಸಿಕ ಭತ್ಯೆಯನ್ನು 500 ರೂ. ಹೆಚ್ಚಿಸುವುದಾಗಿ ಘೋಷಿಸಿದೆ.

ರಾಜ್ಯ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಇಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಒಟ್ಟು 4.06 ಲಕ್ಷ ಕೋಟಿ ರೂ.ಗಳ ಈ ಮಧ್ಯಂತರ ಬಜೆಟ್ ನಲ್ಲಿ ಪಶ್ಚಿಮ ಬಂಗಾಳ ಹಲವು ಘೋಷಣೆಗಳನ್ನು ಮಾಡಿದೆ.

2011 ರಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಆಡಳಿತವು ಪರಿಚಯಿಸಿದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಲಕ್ಷ್ಮಿರ್ ಭಂಡಾರ್ ಅಡಿಯಲ್ಲಿ, ಮಹಿಳಾ ಫಲಾನುಭವಿಗಳಿಗೆ ಅಸ್ತಿತ್ವದಲ್ಲಿರುವ 1000 ರೂ. ಮಾಸಿಕ ಭತ್ಯೆಯನ್ನು 1500 ರೂ.ಗಳಿಗೆ ಹೆಚ್ಚಾಗಲಿದೆ.

ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಸೇರಿದ ಮಹಿಳೆಯರ ಭತ್ಯೆಯನ್ನು 1200 ರೂ.ಗಳಿಂದ 1700 ರೂ.ಗಳಿಗೆ ಹೆಚ್ಚಿಸಲಾಗಿದೆ.

ಇನ್ನು 'ಬಾಂಗ್ಲಾರ್ ಯುವ ಸಾಥಿ' ಯೋಜನೆಯಡಿಯಲ್ಲಿ 21 ರಿಂದ 41 ವರ್ಷ ವಯಸ್ಸಿನ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವವರೆಗೆ ಅಥವಾ ಐದು ವರ್ಷಗಳವರೆಗೆ ಮಾಸಿಕ 1,500 ರೂ. ಭತ್ಯೆಯನ್ನು ನೀಡುವುದಾಗಿಯೂ ಬಜೆಟ್ ನಲ್ಲಿ ಘೋಷಿಸಲಾಗಿದೆ.

ಟಿಎಂಸಿ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ಆಗಸ್ಟ್ 15 ರಿಂದ 'ಬಾಂಗ್ಲಾರ್ ಯುವ ಸಾಥಿ' ಯೋಜನೆ ಜಾರಿಗೆ ತರಲಿದೆ. ಈ ಹಿಂದೆ ಬಂಗಾಳದಲ್ಲಿ ಆಗಿನ ಸಿಪಿಐಎಂ ನೇತೃತ್ವದ ಎಡರಂಗ ಸರ್ಕಾರವು 1978 ರಲ್ಲಿ ನಿರುದ್ಯೋಗ ಭತ್ಯೆಯನ್ನು ಪ್ರಾರಂಭಿಸಿತ್ತು. ಆದರೆ ಅದನ್ನು 1982 ರಲ್ಲಿ ನಿಲ್ಲಿಸಲಾಯಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ವಿಧಾನಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಲಕ್ಷ್ಮಿರ್ ಭಂಡಾರ್ ಅಡಿಯಲ್ಲಿ ಹೆಚ್ಚಿಸಲಾದ ಅನುದಾನವು ಈ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಹೇಳಿದರು.

ಈ ಘೋಷಣೆಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಬಿಜೆಪಿ ಏಪ್ರಿಲ್‌ನಲ್ಲಿ ಬಂಗಾಳದಲ್ಲಿ ಸರ್ಕಾರ ರಚಿಸಲಿದೆ ಮತ್ತು ಜೂನ್ 1 ರಿಂದ ಮಹಿಳೆಯರಿಗೆ ಮಾಸಿಕ 3000 ರೂ.ಗಳ ಅನುದಾನವನ್ನು ನೀಡಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.