ಆರು ಕ್ಷೇತ್ರಗಳ ಚುನಾವಣಾ ಉಸ್ತುವಾರಿಗೆ ಅಣ್ಣಾಮಲೈ ರಾಜೀನಾಮೆ; ಕಾರಣವೇನು?
2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಎಂದು ಕೇಳಿದಾಗ, ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಣ್ಣಾಮಲೈ ಉತ್ತರಿಸಿದರು.

ಕೊಯಮತ್ತೂರು: 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಶಾಕ್ ನೀಡಿದ್ದು, ಕೊಯಮತ್ತೂರಿನ ಸಿಂಗನಲ್ಲೂರು ಸೇರಿದಂತೆ ಆರು ಕ್ಷೇತ್ರಗಳ ಚುನಾವಣಾ ಪ್ರವಾಸದ ಉಸ್ತುವಾರಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ. ಅಣ್ಣಾಮಲೈ ಅವರು ಸಿಂಗನಲ್ಲೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಎಐಎಡಿಎಂಕೆ ಜೊತೆಗಿನ ಮೈತ್ರಿಯ ಭಾಗವಾಗಿ ಬಿಜೆಪಿ ಸ್ಪರ್ಧಿಸಲು ಉದ್ದೇಶಿಸಿರುವ 41 ಕ್ಷೇತ್ರಗಳ ಉಸ್ತುವಾರಿಯಾಗಿ ಹಿರಿಯ ಬಿಜೆಪಿ ನಾಯಕರನ್ನು ನೇಮಿಸಲಾಗಿದೆ. ಅಣ್ಣಾಮಲೈ ಅವರನ್ನು ಸಿಂಗನಲ್ಲೂರು, ಮಧುರೈ ದಕ್ಷಿಣ, ವಿರುಗಂಪಕ್ಕಂ, ಕಾರೈಕುಡಿ, ಶ್ರೀವೈಕುಂಡಂ, ಪದ್ಮನಾಭಪುರಂ ಉಸ್ತುವಾರಿಯಾಗಿ ನೇಮಿಸಲಾಗಿತ್ತು.
ಇಂದು ಕೊಯಮತ್ತೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಂದೆಯ ಅನಾರೋಗ್ಯದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
"ನನ್ನ ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ನೋಡಿಕೊಳ್ಳಲು ನಾನು ಕೊಯಮತ್ತೂರಿನಲ್ಲಿಯೇ ಉಳಿದುಕೊಂಡಿದ್ದೇನೆ. ಇದು ನನ್ನ ಮೊದಲ ಕರ್ತವ್ಯ. ಆದ್ದರಿಂದ, ನನಗೆ ಮೂಲಭೂತ ಕೆಲಸಗಳನ್ನು ಕೈಗೊಳ್ಳಲು ಅಥವಾ ಹೆಚ್ಚು ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ನಾನು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂತಿರನ್ ಅವರಿಗೆ ಈ ಬಗ್ಗೆ ತಿಳಿಸಿದ್ದೇನೆ ಮತ್ತು ಕೊಯಂಬತ್ತೂರಿನಲ್ಲಿರುವ ಸಿಂಗನಲ್ಲೂರು ಕ್ಷೇತ್ರ ಸೇರಿದಂತೆ 6 ಕ್ಷೇತ್ರಗಳಿಗೆ ಬಿಜೆಪಿ ಹೊಸ ಉಸ್ತುವಾರಿಗಳನ್ನು ನೇಮಕ ಮಾಡಲಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಆದಾಗ್ಯೂ, ನಾನು ಪ್ರಚಾರದಲ್ಲಿ ಕೆಲಸ ಮಾಡಲು ಸಿದ್ಧನಿದ್ದೇನೆ ಮತ್ತು ನಾವು ಪಕ್ಷದೊಳಗೆ ಈ ಬಗ್ಗೆ ಚರ್ಚಿಸುತ್ತೇವೆ. ಪಕ್ಷದ ನಿರ್ದೇಶನದ ಆಧಾರದ ಮೇಲೆ, ನಾವು ಪಕ್ಷ, ಮೈತ್ರಿಕೂಟದ ಪಾಲುದಾರರು, ಅಭ್ಯರ್ಥಿಗಳೊಂದಿಗೆ ಕೆಲಸ ಮಾಡುತ್ತೇವೆ" ಎಂದು ಅವರು ತಿಳಿಸಿದ್ದಾರೆ.
2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಎಂದು ಕೇಳಿದಾಗ, ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಮತ್ತು ಪಕ್ಷದ ನಿರ್ಧಾರದ ನಂತರ ಅದನ್ನು ಪ್ರಕಟಿಸುವುದಾಗಿ ಅಣ್ಣಾಮಲೈ ಉತ್ತರಿಸಿದರು.
2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕೊಯಂಬತ್ತೂರು ಜನತೆಯ ಯಾವುದೇ ಮನವಿಗೆ ನಾನು ಸಿಗುವಂತಿರಬೇಕು. ಹೀಗಾಗಿ ಸದ್ಯ ಬಾಡಿಗೆ ಮನೆ ಮಾಡಿದ್ದೇನೆ. ಜನರ ಮನವಿಗಳು, ದೂರುಗಳಿಗೆ ಸ್ಪಂದಿಸಲು ಅನೂಕೂಲವಾಗುವಂತೆ ಬಾಡಿಗೆ ಮನೆ ಮಾಡಿದ್ದೇನೆ. ಪಕ್ಷದ ನಿರ್ಧಾರದ ಪ್ರಕಾರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



