ನೇಪಾಳದಲ್ಲಿ ಪ್ರವಾಹ: ಸಂಕಷ್ಟಕ್ಕೆ ಸಿಲುಕಿದ ಭಾರತೀಯರು; ರಕ್ಷಣೆಗೆ ಕರ್ನಾಟಕ ಸೇರಿ 4 ರಾಜ್ಯಗಳಿಂದ ಸಮರೋಪಾದಿ ಕಾರ್ಯಾಚರಣೆ..!
ಅಗತ್ಯವಿದ್ದರೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರನ್ನು ಅಥವಾ ಸಚಿವರೊಬ್ಬರನ್ನು ಕಠ್ಮಂಡುವಿಗೆ ಕಳುಹಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲಾಗುವುದು.

ನವದೆಹಲಿ: ನೇಪಾಳದಲ್ಲಿ ಭೀಕರ ಪ್ರವಾಹದಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರವಾಸಕ್ಕೆ ಹಾಗೂ ಯಾತ್ರೆಗೆ ತೆರಳಿದ್ದ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದರ ಬೆನ್ನಲ್ಲೇ ತಮ್ಮ ರಾಜ್ಯದ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕರೆತರಲು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳ ಸರ್ಕಾರಗಳು ಕೇಂದ್ರದೊಂದಿಗೆ ಸಮನ್ವಯ ಸಾಧಿಸಿ, ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿವೆ.
ನೇಪಾಳದಲ್ಲಿರುವ ಯಾತ್ರಾರ್ಥಿಗಳ ರಕ್ಷಣಾ ಕಾರ್ಯ ಹಾಗೂ ಅವರ ಸ್ಥಿತಿಗತಿಗಳನ್ನು ತಮಿಳುನಾಡು ಸರ್ಕಾರ ಗಂಟೆಗೊಮ್ಮೆ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಸಚಿವ ಎ. ರಾಜಮೋಹನ್ ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.
ತಮಿಳುನಾಡು ಮತ್ತು ಪುದುಚೇರಿಯಿಂದ ಒಟ್ಟು 106 ಮಂದಿ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. ಇವರಲ್ಲಿ 57 ಮಂದಿ ಕುಂಭಕೋಣಂ ಮೂಲದ ‘ಸೂಪರ್ ಯಾತ್ರಾ’ ಸಂಸ್ಥೆ ಆಯೋಜಿಸಿದ್ದ ತಂಡದಲ್ಲಿದ್ದರೆ, ಉಳಿದ 49 ಮಂದಿಯನ್ನು ಚೆನ್ನೈ ಮೂಲದ ‘ಮಹಾದೇವ ಕೈಲಾಸ ಯಾತ್ರಾ’ ಪ್ರವಾಸ ಸಂಸ್ಥೆ ಕರೆದೊಯ್ದಿತ್ತು.
ಈ ಪೈಕಿ 20 ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದ್ದು, ಅವರು ತಿಮುರೆ ಪ್ರದೇಶದ ಸಶಸ್ತ್ರ ಪೊಲೀಸ್ ಪಡೆ ಶಿಬಿರದಲ್ಲಿ ಸುರಕ್ಷಿತವಾಗಿದ್ದಾರೆ. ಉಳಿದವರನ್ನೂ ಸುರಕ್ಷಿತವಾಗಿ ಕರೆತರಲು ಪ್ರಯತ್ನಗಳು ನಡೆಯುತ್ತಿವೆ. ಇನ್ನುಳಿದ 49 ಮಂದಿಯ ಸ್ಥಳ ಹಾಗೂ ಅವರ ಪ್ರಯಾಣದ ವಿವರಗಳನ್ನು ಪತ್ತೆಹಚ್ಚುವ ಕಾರ್ಯವೂ ಮುಂದುವರಿದಿದೆ.
ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿ ನೀಡಲು ತಮಿಳುನಾಡು ಸರ್ಕಾರ ನವದೆಹಲಿಯಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿ ಹಾಗೂ ಸಹಾಯವಾಣಿ ಆರಂಭಿಸಿದೆ.
ಮಹಾರಾಷ್ಟ್ರದ ಸುಮಾರು 80 ಪ್ರವಾಸಿಗರು ನೇಪಾಳದಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಮಾಹಿತಿ ಪರಿಶೀಲನೆ ನಡೆಯುತ್ತಿರುವುದರಿಂದ ಈ ಸಂಖ್ಯೆ ಬದಲಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
57 ಮಂದಿ ಪ್ರವಾಸ ಸಂಸ್ಥೆಯ ಮೂಲಕ ನೇಪಾಳಕ್ಕೆ ತೆರಳಿದ್ದರೆ, ಉಳಿದವರು ಸ್ವತಂತ್ರವಾಗಿ ಪ್ರಯಾಣಿಸಿದ್ದರು. ಈವರೆಗೆ ಮಹಾರಾಷ್ಟ್ರದ ನಾಲ್ವರು ಸುರಕ್ಷಿತವಾಗಿರುವುದಾಗಿ ವರದಿಯಾಗಿದೆ.
57 ಮಂದಿಯ ಪ್ರವಾಸವನ್ನು ಆಯೋಜಿಸಿದ್ದ ‘ರಿಚಾ ಟೂರ್ಸ್ ಪ್ರೈವೇಟ್ ಲಿಮಿಟೆಡ್’ ಹಾಗೂ ನವದೆಹಲಿಯ ಕೇಂದ್ರ ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿ-ತುರ್ತು ಪ್ರತಿಕ್ರಿಯಾ ವ್ಯವಸ್ಥೆಯೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಸಂಗ್ರಹಿಸಲಾಗುತ್ತಿರುವ ಪಟ್ಟಿಗಳಲ್ಲಿ ಕೆಲವರ ಹೆಸರುಗಳು ಒಂದಕ್ಕಿಂತ ಹೆಚ್ಚು ಬಾರಿ ಕಾಣಿಸಿಕೊಂಡಿರುವುದರಿಂದ ಅಂತಿಮ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಕರ್ನಾಟಕದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಬೆಂಗಳೂರಿನಿಂದ ನೇಪಾಳಕ್ಕೆ ತೆರಳಿದ್ದ ಐವರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಅವರನ್ನು ಸಂಪರ್ಕಿಸಿ ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಅಗತ್ಯವಿದ್ದರೆ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರನ್ನು ಅಥವಾ ಸಚಿವರೊಬ್ಬರನ್ನು ಕಠ್ಮಂಡುವಿಗೆ ಕಳುಹಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನೇಪಾಳದಲ್ಲಿ ಸಿಲುಕಿರುವ ಕರ್ನಾಟಕದ ನಿವಾಸಿಗಳು ಹಾಗೂ ಅವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಟೋಲ್‌ಫ್ರೀ ಸಹಾಯವಾಣಿಯನ್ನೂ ಆರಂಭಿಸಿದೆ.
ಇನ್ನು ಕೇರಳದ 53 ಮಂದಿ ನೇಪಾಳದಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ನೋರ್ಕಾ ರೂಟ್ಸ್ ತಿಳಿಸಿದೆ. ಇವರಲ್ಲಿ ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಮತ್ತು ವಯಸ್ಕರು ಸೇರಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ ಹಾಗೂ ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ಬಂದ 17 ಮಾಹಿತಿಗಳ ಆಧಾರದಲ್ಲಿ ಈ 53 ಮಂದಿಯನ್ನು ಗುರುತಿಸಲಾಗಿದೆ ಎಂದು ಸಿಇಒ ರಾಜೇಶ್ ಮಾಧವನ್ ತಿಳಿಸಿದ್ದಾರೆ.
ಎಲ್ಲ 53 ಮಂದಿಯ ಸಂಪರ್ಕ ಸಂಖ್ಯೆಗಳು ಸಂಸ್ಥೆಯ ಬಳಿ ಇದ್ದರೂ, ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅವರೊಂದಿಗೆ ನೇರ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಅವರ ಕೊನೆಯದಾಗಿ ತಿಳಿದಿರುವ ಸ್ಥಳಗಳನ್ನು ಪರಿಶೀಲಿಸಲಾಗುತ್ತಿದ್ದು, ಅವರನ್ನು ಪತ್ತೆಹಚ್ಚಲು ಭಾರತೀಯ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ.
ಸಿಲುಕಿರುವವರು ಸುರಕ್ಷಿತವಾಗಿದ್ದಾರೆ ಎಂಬ ಸಾಮಾನ್ಯ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಆದರೆ, ನೇರ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ ಎಂದು ಮಾಧವನ್ ಹೇಳಿದ್ದಾರೆ.
ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ನೇಪಾಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮುಂದುವರಿದಿದ್ದು, ಸಿಲುಕಿರುವ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳನ್ನು ಪತ್ತೆಹಚ್ಚಲು ನಾಲ್ಕೂ ರಾಜ್ಯಗಳು ಕೇಂದ್ರ ಸರ್ಕಾರ, ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ನೇಪಾಳದ ವಿವಿಧ ಸಂಸ್ಥೆಗಳೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



