'ಯಾರು ಏನು ಧರಿಸಬೇಕು ಎಂಬುದನ್ನು ಕೋರ್ಟ್ ನಿರ್ಧರಿಸಬಾರದು': ಹಿಜಾಬ್ ವಿವಾದದ ಕುರಿತು BJP ನಾಯಕ Syed Zafar Islam ಆಕ್ಷೇಪ
ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಇಸ್ಲಾಂ ಅವರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಇಂತಹ ಆದೇಶಗಳು ಹೊರಬಂದರೆ ಹಲವು ಸಂಕೀರ್ಣ ಸಮಸ್ಯೆಗಳು ಎದುರಾಗಬಹುದು ಹಾಗೂ ವಿವಿಧ ಧರ್ಮಗಳಿಗೆ ಸಂಬಂಧಿಸಿ..

ಲಖನೌ: ಶಾಲೆಗಳಲ್ಲಿ ಹಿಜಾಬ್ ಧರಿಸುವ ಕುರಿತ ಅಲಹಾಬಾದ್ ಹೈಕೋರ್ಟ್‌ನ ಇತ್ತೀಚಿನ ಅಭಿಪ್ರಾಯಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಯಾರು ಏನು ಧರಿಸಬೇಕು ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸುವುದು ಸರಿಯಲ್ಲ ಎಂದು ಹೇಳಿದೆ.
ಶಾಲೆಗಳಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದ ನಿರ್ಧಾರವನ್ನು ಆಯಾ ಶಾಲಾ ಆಡಳಿತಕ್ಕೆ ಬಿಡಬೇಕು ಎಂದು ಬಿಜೆಪಿ ತಿಳಿಸಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಇಸ್ಲಾಂ ಅವರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಇಂತಹ ಆದೇಶಗಳು ಹೊರಬಂದರೆ ಹಲವು ಸಂಕೀರ್ಣ ಸಮಸ್ಯೆಗಳು ಎದುರಾಗಬಹುದು ಹಾಗೂ ವಿವಿಧ ಧರ್ಮಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಗೊಂದಲ ಸೃಷ್ಟಿಯಾಗಬಹುದು ಎಂದು ಹೇಳಿದ್ದಾರೆ.
‘ನಂಬಿಕೆ ಎನ್ನುವುದು ಬಹಳ ದೊಡ್ಡ ವಿಚಾರ. ನ್ಯಾಯಾಲಯ ಇಂತಹ ಆದೇಶಗಳನ್ನು ನೀಡಿದರೆ ಹಲವು ಸಂಕೀರ್ಣ ಸಮಸ್ಯೆಗಳು ಉದ್ಭವಿಸಬಹುದು’ ಎಂದು ಅವರು ಹೇಳಿದ್ದಾರೆ.
ಹಿಜಾಬ್ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್
ಆಗಸ್ಟ್ 21ರಂದು ಅಲಹಾಬಾದ್ ಹೈಕೋರ್ಟ್ ಶಾಲೆಯ ಸಮವಸ್ತ್ರದ ಜೊತೆಗೆ ತಲೆಗೆ ಸ್ಕಾರ್ಫ್ ಧರಿಸಲು ಅನುಮತಿ ನೀಡುವಂತೆ ಶಾಲಾ ಆಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.
ತೀರ್ಪಿನ ವೇಳೆ ನ್ಯಾಯಾಲಯ, ಮಹಿಳೆಯೊಬ್ಬರು ತಲೆಗೆ ಸ್ಕಾರ್ಫ್ ಧರಿಸುವುದು ಇಸ್ಲಾಮಿಕ್ ಧರ್ಮದ ಅತ್ಯಗತ್ಯ ಭಾಗವಲ್ಲ; ಅದನ್ನು ಧರಿಸದಿದ್ದರೆ ಆಕೆಯ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಈ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ಜಫರ್ ಇಸ್ಲಾಂ, ಒಂದು ಧರ್ಮವನ್ನು ಮಾತ್ರ ಪ್ರತ್ಯೇಕವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ. ‘ಗ್ರಾಮೀಣ ಪ್ರದೇಶಗಳಲ್ಲಿಯೂ ಮಹಿಳೆಯರು ಪರ್ಡಾ ಪಾಲಿಸುತ್ತಾರೆ. ಇದು ನಮ್ಮ ಸಂಸ್ಕೃತಿ ಮತ್ತು ಸಾಮಾಜಿಕ ನಡವಳಿಕೆಯ ಭಾಗವಾಗಿದೆ. ವ್ಯಕ್ತಿಯೊಬ್ಬರು ತಮ್ಮ ವೈಯಕ್ತಿಕ ಜೀವನವನ್ನು ಹೇಗೆ ನಡೆಸಬೇಕು ಎಂಬುದು ನ್ಯಾಯಾಲಯ ನಿರ್ಧರಿಸುವ ವಿಚಾರವಲ್ಲ’ ಎಂದು ಅವರು ಹೇಳಿದ್ದಾರೆ.
‘ಎಲ್ಲರಿಗೂ ತಮ್ಮಿಷ್ಟದಂತೆ ಉಡುಪು ಧರಿಸುವ ಹಕ್ಕಿದೆ’
ಅರ್ಜಿದಾರ ವಿದ್ಯಾರ್ಥಿನಿಯನ್ನು ಹೊರತುಪಡಿಸಿ, ಅದೇ ಧಾರ್ಮಿಕ ಸಮುದಾಯಕ್ಕೆ ಸೇರಿದ ಇತರ ಯಾವುದೇ ವಿದ್ಯಾರ್ಥಿನಿಯೂ ತಲೆಗೆ ಸ್ಕಾರ್ಫ್ ಧರಿಸಿರಲಿಲ್ಲ ಎಂಬುದನ್ನೂ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಗಮನಿಸಿತ್ತು. ಶಾಲೆಯ ತರಗತಿಯಲ್ಲಿ ತಲೆಗೆ ಸ್ಕಾರ್ಫ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಸಮರ್ಪಕ ದಾಖಲೆ ಅಥವಾ ಅಧಿಕೃತ ಧಾರ್ಮಿಕ ಗ್ರಂಥದ ಆಧಾರವನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬ ಅರ್ಜಿದಾರರ ವಾದ ಕೇವಲ ಹೇಳಿಕೆಯಷ್ಟೇ ಎಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಾಫರ್ ಇಸ್ಲಾಂ, 'ಪ್ರತಿಯೊಂದು ಧರ್ಮದ ಜನರು ತಮ್ಮ ನಂಬಿಕೆಗಳಿಗೆ ಅನುಗುಣವಾಗಿ ಜೀವನ ನಡೆಸುತ್ತಾರೆ. ದೇಶದ ಸಂವಿಧಾನವೂ ಪ್ರತಿಯೊಬ್ಬರಿಗೂ ತಮ್ಮ ನಂಬಿಕೆಗಳನ್ನು ಪಾಲಿಸುವ ಹಕ್ಕನ್ನು ನೀಡಿದೆ' ಎಂದು ಹೇಳಿದ್ದಾರೆ.
‘ವ್ಯಕ್ತಿಯೊಬ್ಬರು ಏನು ಧರಿಸಬೇಕು ಅಥವಾ ಧರಿಸಬಾರದು ಎಂಬ ಬಗ್ಗೆ ನ್ಯಾಯಾಲಯ ಆದೇಶ ನೀಡಬಾರದು. ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಆಯ್ಕೆಯಂತೆ ಬದುಕುವ ಮತ್ತು ಉಡುಪು ಧರಿಸುವ ಹಕ್ಕಿದೆ. ದೇಶದ ಕಾನೂನುಗಳನ್ನು ಉಲ್ಲಂಘಿಸಬಾರದು ಎಂಬುದೊಂದೇ ಷರತ್ತು’ ಎಂದು ಅವರು ಹೇಳಿದ್ದಾರೆ.
‘ಶಾಲೆಯ ವಿಚಾರದಲ್ಲಿ ಆಡಳಿತವೇ ನಿರ್ಧರಿಸಲಿ’
ಆದರೆ ಶಾಲೆಯ ವಾತಾವರಣ ವಿಭಿನ್ನವಾಗಿದ್ದು, ಅಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ನಿರ್ದಿಷ್ಟ ಸಮವಸ್ತ್ರವಿರುತ್ತದೆ ಎಂದು ಬಿಜೆಪಿ ವಕ್ತಾರ ಹೇಳಿದ್ದಾರೆ.
‘ಶಾಲೆಯಲ್ಲಿ ಯಾವ ಉಡುಪು ಧರಿಸಬೇಕು, ಯಾವುದನ್ನು ಧರಿಸಬಾರದು ಎಂಬ ನಿರ್ಧಾರವನ್ನು ಶಾಲಾ ಆಡಳಿತಕ್ಕೆ ಬಿಡಬೇಕು. ಇದು ಶಾಲಾ ಆಡಳಿತ ನಿರ್ವಹಿಸಬೇಕಾದ ವಿಚಾರವೇ ಹೊರತು ನ್ಯಾಯಾಲಯ ನಿರ್ಧರಿಸಬೇಕಾದ ವಿಷಯವಲ್ಲ’ ಎಂದು ಜಫರ್ ಇಸ್ಲಾಂ ಸ್ಪಷ್ಟಪಡಿಸಿದ್ದಾರೆ.
ಸಮಾಜವನ್ನು ವಿಭಜಿಸುವುದೇ ಓವೈಸಿ ಕೆಲಸ
ಇದೇ ವೇಳೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿಕೆಗೂ ತಿರುಗೇಟು ನೀಡಿರುವ ಜಾಫರ್, 'ಓವೈಸಿ ಅವರು ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದ ಜಫರ್ ಇಸ್ಲಾಂ, ‘ಸಮಾಜವನ್ನು ವಿಭಜಿಸುವುದೇ ಓವೈಸಿ ಅವರ ಏಕೈಕ ಕೆಲಸ’ ಎಂದು ಟೀಕಿಸಿದ್ದಾರೆ.
ಇನ್ನು ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ವಾಗ್ವಾದ ತೀವ್ರಗೊಂಡಿದ್ದು, ಜಫರ್ ಇಸ್ಲಾಂ ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



