BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು; ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!
ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ (BPSC) ಉದ್ಯೋಗಾಕಾಂಕ್ಷಿಗಳು ಮತ್ತು ಇತರ ವಿದ್ಯಾರ್ಥಿಗಳು ಪಾಟ್ನಾದ ಗಾಂಧಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಡಾಕ್ ಬಂಗಲೆ ವೃತ್ತವನ್ನು ತಲುಪಿದಾಗ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಪಾಟ್ನಾ: ಬಿಹಾರದಲ್ಲಿ ನೇಮಕಾತಿ ಮತ್ತು ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮಂಗಳವಾರ ಪಾಟ್ನಾದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದತ್ತ ಮುನ್ನುಗುತ್ತಿದ್ದಾಗ ಪೊಲೀಸ್ ಬ್ಯಾರಿಕೇಡ್ ಗಳನ್ನು ಮುರಿದಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ವಾಟರ್ ಕ್ಯಾನನ್‌ಗಳನ್ನು ಬಳಸಿದ್ದಾರೆ. ಇದರಿಂದಾಗಿ ಕೆಲವರು ಜಲಧಾರೆಯಲ್ಲೇ ಕುಣಿದಾಡಲು (Rain dance)ಪ್ರಾರಂಭಿಸಿದ್ದಾರೆ.
ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ (BPSC) ಉದ್ಯೋಗಾಕಾಂಕ್ಷಿಗಳು ಮತ್ತು ಇತರ ವಿದ್ಯಾರ್ಥಿಗಳು ಪಾಟ್ನಾದ ಗಾಂಧಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಡಾಕ್ ಬಂಗಲೆ ವೃತ್ತವನ್ನು ತಲುಪಿದಾಗ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಬಂದಿದ್ದ ಹಲವು ಪ್ರತಿಭಟನಾಕಾರರು, ಬ್ಯಾರಿಕೇಡ್ ಮುರಿಯುವ ಮುನ್ನ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಬಳಿಕ ಪೊಲೀಸರು ವಾಟರ್ ಕ್ಯಾನನ್‌ಗಳನ್ನು ಬಳಸಿದ್ದು, ಪ್ರತಿಭಟನಾಕಾರರು ಹಿಂದೆ ಸರಿಯುವ ಬದಲು ನೀರಿನಲ್ಲೇ ಕುಣಿಯಲು ಆರಂಭಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಡಾಕ್ ಬಂಗಲೆ ವೃತ್ತದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಮತ್ತು Rapid ಆಕ್ಷನ್ ಫೋರ್ಸ್ (RAF) ಸಿಬ್ಬಂದಿ ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಪಾಟ್ನಾದ ಗರ್ದಾನಿಬಾಗ್ ಪ್ರದೇಶದಲ್ಲಿ ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
BPSC-TRE 4 ಪರೀಕ್ಷೆಯನ್ನು ಏಕ-ಹಂತದಲ್ಲಿ (single-tier) ನಡೆಸಬೇಕು, ನೇಮಕಾತಿಯಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕು, ಬಿಹಾರ ಸಿಬ್ಬಂದಿ ಆಯ್ಕೆ ಆಯೋಗದಿಂದ (BSSC) ನೇಮಕಾತಿ ಪರೀಕ್ಷೆಗಳನ್ನು ನಡೆಸಬೇಕು ಮತ್ತು ಹಿಂದಿ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶಗಳನ್ನು ನೀಡಬೇಕು ಎಂಬುದು ಅವರ ಬೇಡಿಕೆಗಳಾಗಿವೆ. ಅಲ್ಲದೆ, ಅಕ್ರಮಗಳು ನಡೆದಿವೆ ಎಂದು ಆರೋಪಿಸಿ 70ನೇ BPSC ಪರೀಕ್ಷೆಯನ್ನು ರದ್ದುಗೊಳಿಸುವಂತೆಯೂ ಅವರು ಆಗ್ರಹಿಸಿದ್ದಾರೆ.
ಈ ಮಧ್ಯೆ BPSC ಆಕಾಂಕ್ಷಿಗಳ ಪ್ರತಿಭಟನೆಯ ವೇಳೆ ಎತ್ತಲಾದ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಪರಿಹರಿಸಿದೆ ಮತ್ತು ಮಾತುಕತೆಗೆ ಮುಕ್ತವಾಗಿದೆ ಎಂದು ಬಿಹಾರ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಹೇಳಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯು ಸರ್ಕಾರದ ಕ್ರಮಗಳಿಗೆ ಏಕೈಕ ಕಾರಣವಲ್ಲ ಎಂದು ಪ್ರತಿಪಾದಿಸಿದ ಅವರು, ರಾಜ್ಯದ ಯುವಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇದಕ್ಕೆ ಪ್ರತಿಭಟನೆಯೇ ಏಕೈಕ ಕಾರಣವಲ್ಲ; ನಮ್ಮ ಯುವಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸುವುದು ಸರ್ಕಾರದ ಉದ್ದೇಶವೇ ಆಗಿದೆ. ಯುವಕರು ಎತ್ತಿದ ಪ್ರತಿಯೊಂದು ಸಮಸ್ಯೆಯನ್ನೂ ನಾವು ಪರಿಶೀಲಿಸಿ ಕ್ರಮ ಕೈಗೊಂಡಿದ್ದೇವೆ ಎಂದು ತಿವಾರಿ ಹೇಳಿದ್ದಾರೆ.
ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸಲು ಮಾಸಿಕ 'ವಿದ್ಯಾರ್ಥಿ ಸಹಯೋಗ ಶಿಬಿರ'ಗಳನ್ನು (ವಿದ್ಯಾರ್ಥಿ ಬೆಂಬಲ ಶಿಬಿರಗಳು) ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಘೋಷಿಸಿದ ಬೆನ್ನಲ್ಲೇ ಮಂಗಳವಾರ ಈ ಪ್ರತಿಭಟನೆ ನಡೆದಿದೆ.
ವಿದ್ಯಾರ್ಥಿಗಳ ಕುಂದುಕೊರತೆಗಳ ತ್ವರಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಬಿಹಾರ ಸರ್ಕಾರವು ಇಂದಿನಿಂದ 'ವಿದ್ಯಾರ್ಥಿ ಸಹಯೋಗ ಶಿಬಿರ'ಗಳನ್ನು ಪ್ರಾರಂಭಿಸುತ್ತಿದೆ. ಪ್ರತಿ ತಿಂಗಳ ನಾಲ್ಕನೇ ಮಂಗಳವಾರದಂದು ಶಿಕ್ಷಣ ಸಂಸ್ಥೆಗಳಲ್ಲಿ ಈ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಚೌಧರಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಶಿಬಿರಗಳು ವಿದ್ಯಾರ್ಥಿಗಳಿಗೆ ತಮ್ಮ ಕುಂದುಕೊರತೆಗಳನ್ನು ನೇರವಾಗಿ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ಮುಂದೆ ಮಂಡಿಸಲು ಅವಕಾಶ ಕಲ್ಪಿಸುತ್ತವೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ದೂರುಗಳನ್ನು ದಾಖಲಿಸಲು ಹಾಗೂ ಪೋರ್ಟಲ್ ಮತ್ತು ಸಹಾಯವಾಣಿ 1100 ಮೂಲಕ ಅವುಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಚೌಧರಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



