ದೆಹಲಿಯಲ್ಲಿ ಭೀಕರ ಅಪಘಾತ: ಡಿವೈಡರ್ ದಾಟಿ SUVಗೆ ಕಾರು ಡಿಕ್ಕಿ; ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!
ಲಕ್ಷ್ಮೀನಗರದಿಂದ ಐಟಿಒ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ತಡೆಗೋಡೆ ದಾಟಿ ಎದುರಿನ ರಸ್ತೆಗೆ ನುಗ್ಗಿ, ಐಟಿಒದಿಂದ ಲಕ್ಷ್ಮೀನಗರದತ್ತ ಬರುತ್ತಿದ್ದ ಕರ್ನಾಟಕ ಸರ್ಕಾರ ಎಂಬ ಫಲಕ ಹೊಂದಿದ್ದ ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ.

ನವದೆಹಲಿ: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕವನ್ನು ದಾಟಿ ಮತ್ತೊಂದು ಎಸ್‌ಯುವಿ (SUV) ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ ಸೇರಿ ಒಟ್ಟು ಆರು ಮಂದಿ ಗಾಯಗೊಂಡಿರುವ ಘಟನೆ ದೆಹಲಿಯ ಐಟಿಒ (ITO) ಸಿಗ್ನಲ್ ಬಳಿ ಭಾನುವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಕರ್ನಾಟಕದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಮತ್ತು ದೆಹಲಿಯ ಕಿರಾರಿ ಕ್ಷೇತ್ರದ ಮಾಜಿ ಶಾಸಕ ಅನಿಲ್ ಝಾ ಸೇರಿದಂತೆ ಆರು ಜನರಿಗೆ ಗಾಯಗಳಾಗಿವೆ
ಗಾಯಗೊಂಡ ಎಲ್ಲರನ್ನು ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ, ರಾತ್ರಿ ಸುಮಾರು 9.30ಕ್ಕೆ ಹಳೆಯ ಪೊಲೀಸ್ ಪ್ರಧಾನ ಕಚೇರಿ ಎದುರಿನ ಪಿಡಬ್ಲ್ಯುಡಿ ಕಚೇರಿ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಲಕ್ಷ್ಮೀನಗರದಿಂದ ಐಟಿಒ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ತಡೆಗೋಡೆ ದಾಟಿ ಎದುರಿನ ರಸ್ತೆಗೆ ನುಗ್ಗಿ, ಐಟಿಒದಿಂದ ಲಕ್ಷ್ಮೀನಗರದತ್ತ ಬರುತ್ತಿದ್ದ ಕರ್ನಾಟಕ ಸರ್ಕಾರ ಎಂಬ ಫಲಕ ಹೊಂದಿದ್ದ ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ.
ಎಸ್‌ಯುವಿಯಲ್ಲಿ ದೆಹಲಿಯ ಕಿರಾರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಅನಿಲ್ ಝಾ ಹಾಗೂ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ.
ರಾತ್ರಿ ಸುಮಾರು 9.30ಕ್ಕೆ ರಸ್ತೆ ಅಪಘಾತದ ಕುರಿತು ಐಪಿ ಎಸ್ಟೇಟ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತಕ್ಕೀಡಾದ ಇನ್ನೋವಾ ಮತ್ತು ಸ್ವಿಫ್ಟ್ ಕಾರುಗಳಲ್ಲಿದ್ದ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ" ಎಂದು ದೆಹಲಿ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, 32 ವರ್ಷದ ಆಶುತೋಷ್ ಪಾಂಡೆ ಸ್ವಿಫ್ಟ್ ಕಾರು ಚಲಾಯಿಸುತ್ತಿದ್ದು, ಅವರೊಂದಿಗೆ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಪ್ರಯಾಣಿಸುತ್ತಿದ್ದರು.
"ಪಿಡಬ್ಲ್ಯುಡಿ ಕಚೇರಿ ಬಳಿ ಸ್ವಿಫ್ಟ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ತಡೆಗೋಡೆ ದಾಟಿ ಐಟಿಒದಿಂದ ಲಕ್ಷ್ಮೀನಗರದತ್ತ ಬರುತ್ತಿದ್ದ ಇನ್ನೋವಾಗೆ ಡಿಕ್ಕಿ ಹೊಡೆದಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಸ್ಥಳದಲ್ಲಿನ ದೃಶ್ಯಗಳಲ್ಲಿ ಇನ್ನೋವಾ ವಾಹನದ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿರುವುದು ಕಂಡುಬಂದಿದೆ.
ಎರಡೂ ವಾಹನಗಳಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಿಂದ ಐಟಿಒ ಮಾರ್ಗದಲ್ಲಿ ಸಂಚಾರಕ್ಕೂ ಅಡ್ಡಿಯಾಯಿತು. ಹಾನಿಗೊಳಗಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರ ಪುನಃಸ್ಥಾಪಿಸಲು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವು ಪಡೆಯಲಾಯಿತು.
ಯುವತಿ ಮೇಲೆ ಹರಿದ ದುಬಾರಿ Aston Martin ಕಾರು: Janasena ಪಾರ್ಟಿ ಸಂಸದನ ಪುತ್ರನ ವಿರುದ್ಧ ಹಿಟ್ ಅಂಡ್ ರನ್ ಕೇಸ್
ಸ್ವಿಫ್ಟ್ ಕಾರಿನಲ್ಲಿ ತಾಂತ್ರಿಕ ದೋಷ ಉಂಟಾಗಿ, ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿರಬಹುದು ಎಂಬ ವರದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ದೆಹಲಿ ಪೊಲೀಸರು ಇನ್ನೂ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ.
ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ವಿಧಿವಿಜ್ಞಾನ ತಂಡ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪ್ರತ್ಯಕ್ಷದರ್ಶಿಗಳ ವಿಚಾರಣೆಯನ್ನೂ ನಡೆಸಿದೆ.
ಕೇಂದ್ರ ಜಿಲ್ಲೆಯ ಡಿಸಿಪಿ ರೋಹಿತ್ ರಾಜ್ಬೀರ್ ಸಿಂಗ್ ಮಾತನಾಡಿ, ಅಪಘಾತದಲ್ಲಿ ಎರಡೂ ಕಾರಿನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತದ ಕಾರಣ ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ತಂಡ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪ್ರತ್ಯಕ್ಷದರ್ಶಿಗಳನ್ನೂ ವಿಚಾರಣೆ ಮಾಡಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


