ದೇಶ

ಯುವತಿ ಮೇಲೆ ಹರಿದ ದುಬಾರಿ Aston Martin ಕಾರು: Janasena ಪಾರ್ಟಿ ಸಂಸದನ ಪುತ್ರನ ವಿರುದ್ಧ ಹಿಟ್ ಅಂಡ್ ರನ್ ಕೇಸ್

ಹೈದರಾಬಾದ್ ನ ಇನಾರ್ಬಿಟ್ ಮಾಲ್ ಬಳಿ ರಸ್ತೆ ದಾಟುತ್ತಿದ್ದ 26 ವರ್ಷದ ಯುವತಿಗೆ Aston Martin ಕಾರು ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣದಲ್ಲಿ ಆಂಧ್ರಪ್ರದೇಶದ ರಾಜ್ಯಸಭಾ ಸದಸ್ಯ ಹಾಗೂ ಜನಸೇನಾ ಪಾರ್ಟಿ ನಾಯಕ..

ಯುವತಿ ಮೇಲೆ ಹರಿದ ದುಬಾರಿ Aston Martin ಕಾರು: Janasena ಪಾರ್ಟಿ ಸಂಸದನ ಪುತ್ರನ ವಿರುದ್ಧ ಹಿಟ್ ಅಂಡ್ ರನ್ ಕೇಸ್
ಚಿತ್ರ: HateDetectors
Published On :

ಹೈದರಾಬಾದ್: ಊಟ ತರಲು ಹೋಗಿದ್ದ ಯುವತಿ ಮೇಲೆ ದುಬಾರಿ Aston Martin ಕಾರು ಹರಿದು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಪ್ರಕರಣ ಸಂಬಂದ ಆಂಧ್ರ ಪ್ರದೇಶ ಸಂಸದನ ಪುತ್ರನ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ.

ಹೌದು.. ಹೈದರಾಬಾದ್ ನ ಇನಾರ್ಬಿಟ್ ಮಾಲ್ ಬಳಿ ರಸ್ತೆ ದಾಟುತ್ತಿದ್ದ 26 ವರ್ಷದ ಯುವತಿಗೆ Aston Martin ಕಾರು ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣದಲ್ಲಿ ಆಂಧ್ರಪ್ರದೇಶದ ರಾಜ್ಯಸಭಾ ಸದಸ್ಯ ಹಾಗೂ ಜನಸೇನಾ ಪಾರ್ಟಿ ನಾಯಕ ಲಿಂಗಮನೇನಿ ರಮೇಶ್ ಅವರ ಪುತ್ರ ಲಿಂಗಮನೇನಿ ಸಂಜುಷ್ (21) ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಸಂಜುಷ್‌ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಆಗಸ್ಟ್ 16ರಂದು ಹೈದರಾಬಾದ್‌ನ ಮಾಧಾಪುರದಲ್ಲಿರುವ ಇನಾರ್ಬಿಟ್ ಮಾಲ್ ಹೊರಭಾಗದಲ್ಲಿ ಈ ಭೀಕರ ಅಪಘಾತ ಸಂಭವಿಸಿತ್ತು. ಮೃತ ಯುವತಿಯನ್ನು ಭಾರತಿ ಮುಖಿ ಎಂದು ಗುರುತಿಸಲಾಗಿದೆ. ಅವರು ಇನಾರ್ಬಿಟ್ ಮಾಲ್‌ನಲ್ಲಿರುವ ಲೈಫ್‌ಸ್ಟೈಲ್ ಮಳಿಗೆಯಲ್ಲಿ ಸೇಲ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದರು.

ಮಾಧಾಪುರ ಪೊಲೀಸರು ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, TG 09 G 0666 ನೋಂದಣಿ ಸಂಖ್ಯೆಯ Aston Martin ಕಾರನ್ನು ಸಂಜುಷ್ ಚಾಲನೆ ಮಾಡುತ್ತಿದ್ದರು. ಕಾರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದಾಗ ರಸ್ತೆ ದಾಟುತ್ತಿದ್ದ ಭಾರತಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಊಟ ತರಲು ಹೋಗಿದ್ದ ಯುವತಿ

ಮೂಲಗಳ ಪ್ರಕಾರ ಆಗಸ್ಟ್ 16ರಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಭಾರತಿ ತಮ್ಮ ಸಹೋದ್ಯೋಗಿ ಪೂಜಾ ಅಶೋಕ್ ಅವರೊಂದಿಗೆ ITC ಕೊಹೆನೂರ್ ಪ್ರದೇಶಕ್ಕೆ ಊಟ ತರಲು ತೆರಳಿದ್ದರು. ಊಟ ಪಡೆದುಕೊಂಡು ಇನಾರ್ಬಿಟ್ ಮಾಲ್‌ಗೆ ವಾಪಸ್ ಬರುತ್ತಿದ್ದ ವೇಳೆ ಭಾರತಿ ರಸ್ತೆ ದಾಟಲು ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ Aston Martin ಕಾರು ಅವರಿಗೆ ಡಿಕ್ಕಿ ಹೊಡೆದಿದೆ ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.

ಅಪಘಾತದಲ್ಲಿ ಭಾರತಿಗೆ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಅದೇ ಕಾರಿನಲ್ಲಿ ಜುಬಿಲಿ ಹಿಲ್ಸ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಸಹೋದ್ಯೋಗಿಯಿಂದ ಮಾಹಿತಿ, ಪ್ರಕರಣ ದಾಖಲು

ಅಪಘಾತದ ಕುರಿತು ಪೂಜಾ ಅಶೋಕ್ ಅವರು ಲೈಫ್‌ಸ್ಟೈಲ್ ಮಳಿಗೆಯ ಮ್ಯಾನೇಜರ್ ಪಂಜಾಲ ಅಶ್ವಿನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು. ಬಳಿಕ ಅಶ್ವಿನ್ ಕುಮಾರ್ ಪೊಲೀಸರಿಗೆ ದೂರು ಸಲ್ಲಿಸಿದರು. ತನಿಖೆ ನಡೆಸಿದ ಪೊಲೀಸರು Aston Martin ಕಾರಿನ ಚಾಲಕನನ್ನು ಲಿಂಗಮನೇನಿ ಸಂಜುಷ್ ಎಂದು ಗುರುತಿಸಿ, ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 106(1) ಅಡಿಯಲ್ಲಿ ಅಜಾಗರೂಕ ಅಥವಾ ನಿರ್ಲಕ್ಷ್ಯದ ಕೃತ್ಯದಿಂದ ಸಾವು ಸಂಭವಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಸಂಸದನ ಪುತ್ರನ ಬಂಧನವಿಲ್ಲ ಏಕೆ?

ಇನ್ನು ಈ ಪ್ರಕರಣದಲ್ಲಿ ಪೊಲೀಸರು ಇದು ಜಾಮೀನು ನೀಡಬಹುದಾದ ಅಪರಾಧವಾಗಿದ್ದು, ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಹಿನ್ನೆಲೆಯಲ್ಲಿ ಸಂಜುಷ್ ಅವರನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಅಪಘಾತಕ್ಕೆ ಕಾರಣವಾದ Aston Martin ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಜುಷ್‌ಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಡ್ರಂಕ್ ಡ್ರೈವಿಂಗ್ ಪರೀಕ್ಷೆ ನಡೆಸಲಾಗಿದೆ. ಮಾದಕ ವಸ್ತು ಸೇವನೆ ಕುರಿತ ಪರೀಕ್ಷೆಯನ್ನೂ ನಡೆಸಲಾಗಿದೆ. ಇದಲ್ಲದೆ, ಸಂಜುಷ್ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಸೇರಿದಂತೆ ಇತರ ಸಾಕ್ಷ್ಯಾಧಾರಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.