CAA ಅರ್ಜಿದಾರರಿಗೆ ಗುಡ್‌ನ್ಯೂಸ್: ಹಿಂದೂ, ಸಿಖ್, ಜೈನ ನಿರಾಶ್ರಿತರಿಗೆ 6 ತಿಂಗಳಲ್ಲಿ ಭಾರತೀಯ ಪೌರತ್ವ- Amit shah
ಧಾರ್ಮಿಕ ಹಿಂಸೆಯಿಂದಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಅರ್ಹ ಹಿಂದೂ, ಸಿಖ್ ಮತ್ತು ಜೈನ ನಿರಾಶ್ರಿತರಿಗೆ ಮುಂದಿನ ಆರು ತಿಂಗಳೊಳಗೆ ಭಾರತೀಯ ಪೌರತ್ವ ನೀಡಲಾಗುವುದು..

ಸಿಲಿಗುರಿ: ಮಹತ್ವದ ಬೆಳವಣಿಗೆಯಲ್ಲಿ CAA ಅರ್ಜಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಹಿಂದೂ, ಸಿಖ್, ಜೈನ ನಿರಾಶ್ರಿತರಿಗೆ 6 ತಿಂಗಳಲ್ಲಿ ಭಾರತೀಯ ಪೌರತ್ವ ನೀಡಲಾಗುವುದು ಎಂದು ಘೋಷಣೆ ಮಾಡಿದೆ.
ಈ ಕುರಿತು ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದು, 'ಧಾರ್ಮಿಕ ಹಿಂಸೆಯಿಂದಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಅರ್ಹ ಹಿಂದೂ, ಸಿಖ್ ಮತ್ತು ಜೈನ ನಿರಾಶ್ರಿತರಿಗೆ ಮುಂದಿನ ಆರು ತಿಂಗಳೊಳಗೆ ಭಾರತೀಯ ಪೌರತ್ವ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಶುಕ್ರವಾರ ನಡೆದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನ ಕುರಿತ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿಯಲ್ಲಿ ಅರ್ಹರಾಗಿರುವ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗುವುದು ಎಂದು ಹೇಳಿದರು.
“ಬಾಂಗ್ಲಾದೇಶದಿಂದ ಬಲವಂತವಾಗಿ ಹೊರಬರಬೇಕಾದ ಪರಿಸ್ಥಿತಿ ಎದುರಿಸಿದ ಎಲ್ಲ ಹಿಂದೂ, ಸಿಖ್ ಮತ್ತು ಜೈನ ನಿರಾಶ್ರಿತರಿಗೆ ಭಾರತದಲ್ಲಿ ಗೌರವದಿಂದ ಪೌರತ್ವ ನೀಡಲಾಗುವುದು. ಮುಂದಿನ ಆರು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ,” ಎಂದು ಶಾ ಹೇಳಿದ್ದಾರೆ.
8 ಜಿಲ್ಲಾಧಿಕಾರಿಗಳಿಗೆ ಅಧಿಕಾರ
ಪಶ್ಚಿಮ ಬಂಗಾಳದಲ್ಲಿ CAA ಅಡಿಯಲ್ಲಿ ಪೌರತ್ವ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಅಂತಿಮಗೊಳಿಸಲು ಎಂಟು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯ ರಾಜ್ಯ ಆಡಳಿತದೊಂದಿಗೆ ಈ ಬಗ್ಗೆ ಸಮನ್ವಯ ಸಾಧಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.
CAA ಅಡಿಯಲ್ಲಿ ಯಾರಿಗೆ ಅವಕಾಶ?
2019ರ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಧಾರ್ಮಿಕ ಹಿಂಸೆ ಎದುರಿಸಿ ಭಾರತಕ್ಕೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯಗಳಿಗೆ, ಕಾಯ್ದೆಯ ನಿಗದಿತ ಷರತ್ತುಗಳನ್ನು ಪೂರೈಸಿದಲ್ಲಿ, ಭಾರತೀಯ ಪೌರತ್ವ ಪಡೆಯಲು ವೇಗದ ಮಾರ್ಗ ಕಲ್ಪಿಸಲಾಗಿದೆ. ಈ ಕಾಯ್ದೆಯಡಿ ಅರ್ಹರಾಗಲು ಸಂಬಂಧಪಟ್ಟವರು 2014ರ ಡಿಸೆಂಬರ್ 31ರೊಳಗೆ ಭಾರತಕ್ಕೆ ಬಂದಿರಬೇಕು ಎಂಬ ಪ್ರಮುಖ ಷರತ್ತು ಇದೆ.
‘ಅಕ್ರಮ ವಲಸಿಗರನ್ನು ಗುರುತಿಸಿ ಹೊರಹಾಕುತ್ತೇವೆ’
ಇದೇ ವೇಳೆ ಅಕ್ರಮ ವಲಸಿಗರ ವಿಚಾರದಲ್ಲೂ ಕೇಂದ್ರ ಸರ್ಕಾರ ಕಠಿಣ ನಿಲುವು ಹೊಂದಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಪ್ರತಿಯೊಬ್ಬ ಅಕ್ರಮ ವಲಸಿಗನನ್ನೂ ಗುರುತಿಸಿ, ಮತದಾರರ ಪಟ್ಟಿಯಿಂದ ತೆಗೆದುಹಾಕಿ, ದೇಶದಿಂದ ಹೊರಹಾಕುವ ನೀತಿಯನ್ನು ಸರ್ಕಾರ ಅನುಸರಿಸಲಿದೆ ಎಂದಿ ಹೇಳಿದರು.
ಹೀಗಾಗಿ CAA ಅಡಿಯಲ್ಲಿ ಅರ್ಹ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆ ವೇಗಗೊಳ್ಳುವ ಜೊತೆಗೆ, ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವೂ ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



