ಹಲ್ದ್ವಾನಿ 'ಶುದ್ಧೀಕರಣ' ವಿವಾದ: ಕಾಂಗ್ರೆಸ್ ನಾಯಕರ ಮೌನಕ್ಕೆ ಮಲ್ಲಿಕಾರ್ಜುನ ಖರ್ಗೆ ಬೇಸರ; 'ನನಗೆ ನೋವಾಗಿದೆ' ಎಂದ ಅಧ್ಯಕ್ಷ..!
ಮಾಧ್ಯಮಗಳಲ್ಲಿ ಹೆಚ್ಚಿನ ಅವಕಾಶ ಪಡೆಯುವ ಕೆಲವು ‘ಚೆನ್ನಾಗಿ ಕಾಣುವ’ ನಾಯಕರು ಕೂಡ ಈ ವಿಚಾರದ ಬಗ್ಗೆ ಧ್ವನಿ ಎತ್ತದಿರುವುದಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಮ್ಮ ಭೇಟಿ ಬಳಿಕ ನಡೆದ ‘ಶುದ್ಧೀಕರಣ’ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ಪಕ್ಷದ ಹಲವು ನಾಯಕರು, ವಿಶೇಷವಾಗಿ ಮಾಧ್ಯಮಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವವರು, ಬಹಿರಂಗವಾಗಿ ಖಂಡನೆ ವ್ಯಕ್ತಪಡಿಸದಿರುವುದು ತಮ್ಮನ್ನು ನೋಯಿಸಿದೆ ಎಂದು ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಹಲ್ದ್ವಾನಿಗೆ ಖರ್ಗೆ ಭೇಟಿ ನೀಡಿದ ಬಳಿಕ ಅಲ್ಲಿ ‘ಶುದ್ಧೀಕರಣ ಹವನ’ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಹಿಂದೆ ಬಿಜೆಪಿಗೆ ಸಂಬಂಧಿಸಿದವರು ಇದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದು ಜಾತಿವಾದಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಆದರೆ, ಬಿಜೆಪಿ ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದೆ.
ಈ ವಿಚಾರವನ್ನು ಖರ್ಗೆ ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿದ್ದರು. ಈ ಘಟನೆ ತಮ್ಮನ್ನು ಅವಮಾನಕ್ಕೀಡು ಮಾಡಿದ್ದು, ಅಸ್ಪೃಶ್ಯತೆಯ ನೋವನ್ನು ಮತ್ತೆ ನೆನಪಿಸಿದೆ ಎಂದು ಅವರು ಹೇಳಿದ್ದರು.
ಇದನ್ನು ರಾಜಕೀಯ ವಿಚಾರವನ್ನಾಗಿ ಮಾಡಲು ನಾನು ಬಯಸುವುದಿಲ್ಲ. ನಾನು ದಲಿತ ಎಂದು ಹೇಳಿಕೊಂಡು ನನ್ನನ್ನು ರಕ್ಷಿಸಿ ಎಂದು ಯಾರ ಬಳಿಯೂ ಕೇಳಿಲ್ಲ. ಹೋರಾಡುವ ಶಕ್ತಿ ನನಗಿದೆ, ನಾನು ಹೋರಾಡುತ್ತೇನೆ. ಆದರೆ, ಹಲ್ದ್ವಾನಿಯಲ್ಲಿ ವೇದಿಕೆಯನ್ನು ಶುದ್ಧೀಕರಿಸಿದ ಘಟನೆ ನನಗೆ ಅಸ್ಪೃಶ್ಯತೆಯ ನೋವನ್ನು ಅನುಭವಿಸುವಂತೆ ಮಾಡಿತು ಮತ್ತು ಅವಮಾನಿಸಿತು,” ಎಂದು ಖರ್ಗೆ ರಾಜ್ಯಸಭೆಯಲ್ಲಿ ಹೇಳಿದ್ದರು.
ಶುದ್ಧೀಕರಣ ಕಾರ್ಯಕ್ರಮದಲ್ಲಿ ಭಾಗಿಯಾದವರ ವಿರುದ್ಧ ಅಸ್ಪೃಶ್ಯತೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದರು.
ಇದಕ್ಕೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಜೆ.ಪಿ. ನಡ್ಡಾ, ಈ ಘಟನೆ ದುರದೃಷ್ಟಕರ ಎಂದು ಹೇಳಿದ್ದರು. ಘಟನೆಯಲ್ಲಿ ಯಾವುದೇ ಬಿಜೆಪಿ ಸದಸ್ಯರು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದ ಅವರು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದರು.
ಈ ನಡುವೆ ಬುಧವಾರ ನಡೆದ CWC ಸಭೆಯಲ್ಲಿ ಖರ್ಗೆ, ಮಾಧ್ಯಮಗಳಲ್ಲಿ ಹೆಚ್ಚಿನ ಅವಕಾಶ ಪಡೆಯುವ ಕೆಲವು ‘ಚೆನ್ನಾಗಿ ಕಾಣುವ’ ನಾಯಕರು ಕೂಡ ಈ ವಿಚಾರದ ಬಗ್ಗೆ ಧ್ವನಿ ಎತ್ತದಿರುವುದಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಪಕ್ಷ ಈಗಾಗಲೇ ಈ ವಿಚಾರವನ್ನು ಪ್ರಸ್ತಾಪಿಸಿ ಖಂಡಿಸಿದೆ ಎಂದು ಖರ್ಗೆ ಅವರಿಗೆ ತಿಳಿಸಿದರು. ಆದರೆ, ಖರ್ಗೆ ಅವರ ದೇಹಭಾಷೆ ಅವರು ಈ ಉತ್ತರದಿಂದ ಸಂಪೂರ್ಣವಾಗಿ ತೃಪ್ತರಾಗಿಲ್ಲ ಎಂಬುದನ್ನು ಸೂಚಿಸಿತು ಎಂದು ನಾಯಕರು ಹೇಳಿದ್ದಾರೆ.
ಖರ್ಗೆ ಯಾವುದೇ ನಿರ್ದಿಷ್ಟ ನಾಯಕನ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಪಕ್ಷದ ನಿಲುವಿಗೆ ವಿರುದ್ಧವಾಗಿರುವ ರೀತಿಯಲ್ಲಿ ಕೆಲ ನಾಯಕರು ಹೇಳಿಕೆಗಳನ್ನು ನೀಡುವುದು ಹಾಗೂ ಲೇಖನಗಳನ್ನು ಬರೆಯುವುದು ಸರಿಯಲ್ಲ ಎಂದೂ ಅವರು ಸೂಚಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ಹಲ್ದ್ವಾನಿ ಘಟನೆ “ಸ್ವೀಕಾರಾರ್ಹವಲ್ಲ” ಮತ್ತು “ಖಂಡನೀಯ” ಎಂದು ಹೇಳಿದರು. ಈ ಘಟನೆಯು ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



