ಶ್ರೀನಗರಕ್ಕೆ ಭಾರತದಲ್ಲಿನ US ರಾಯಭಾರಿ ಸೆರ್ಗಿಯೊ ಮೊದಲ ಭೇಟಿ: ಕಾಶ್ಮೀರದ ಸೌಂದರ್ಯಕ್ಕೆ ಫಿದಾ; ಅಮೆರಿಕದ ಪ್ರಯಾಣ ಸಲಹೆ ಬದಲಾವಣೆಯ ಸುಳಿವು!
ಶ್ರೀನಗರದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಭೇಟಿಯಾದ ನಂತರ ಮಾತನಾಡಿದ ಗೋರ್, ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಭಾರತ ಮತ್ತು ಅಮೆರಿಕ ಎರಡಕ್ಕೂ ಪ್ರಯೋಜನಕಾರಿಯಾಗುವ ಅವಕಾಶಗಳನ್ನು ಸೃಷ್ಟಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಿದರು.

ಶ್ರೀನಗರ: ಕೇಂದ್ರಾಡಳಿತ ಪ್ರದೇಶಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಬುಧವಾರ ಭೇಟಿ ನೀಡಿದ ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್, ಜಮ್ಮು ಮತ್ತು ಕಾಶ್ಮೀರವನ್ನು 'ಭಾರತದ ಪ್ರಮುಖ ಭಾಗ" ಎಂದು ಬಣ್ಣಿಸಿದ್ದಾರೆ. ಇದು ಈ ಪ್ರದೇಶದ ಬಗ್ಗೆ ಅಮೆರಿಕ ಹೊಂದಿರುವ ಗಮನಾರ್ಹ ಬದಲಾವಣೆಯ ಸುಳಿವು ಆಗಿದೆ.
ಶ್ರೀನಗರದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಭೇಟಿಯಾದ ನಂತರ ಮಾತನಾಡಿದ ಗೋರ್, ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಭಾರತ ಮತ್ತು ಅಮೆರಿಕ ಎರಡಕ್ಕೂ ಪ್ರಯೋಜನಕಾರಿಯಾಗುವ ಅವಕಾಶಗಳನ್ನು ಸೃಷ್ಟಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಿದರು.
ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ಕ್ರಮವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗ್ಬೇಡಿ ಎಂಬ ಅಮೆರಿಕ ತನ್ನ ಪ್ರಜೆಗಳಿಗೆ ನೀಡಿರುವ ಸಲಹೆಯನ್ನು ಮರುಪರಿಶೀಲಿಸಬಹುದು ಎಂದು ಅವರು ಸುಳಿವು ನೀಡಿದ್ದಾರೆ.
ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ತಮ್ಮ ಮೊದಲ ಭೇಟಿ ನೀಡಿದ ಗೋರ್ ಶ್ರೀನಗರದಲ್ಲಿ ಒಮರ್ ಅಬ್ದುಲ್ಲಾ ಅವರನ್ನು ಭೇಟಿಯಾಗಿದ್ದು, ದ್ವಿಪಕ್ಷೀಯ ಸಭೆ ನಡೆದಿದೆ.
ಬಳಿಕ ವರದಿಗಾರರೊಂದಿಗೆ ಮಾತನಾಡಿದ ಗೋರ್, ತುಂಬಾ ಒಳ್ಳೆಯ ರೀತಿಯಲ್ಲಿ ಸಭೆ ನಡೆದಿದೆ. ವಾಷಿಂಗ್ಟನ್ ಮತ್ತು ನವದೆಹಲಿಯಲ್ಲಿ ಮುಂದಿನ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ಕಾಶ್ಮೀರದ ನೈಸರ್ಗಿಕ ಸೌಂದರ್ಯವನ್ನು ಶ್ಲಾಘಿಸಿದರು, ಇದನ್ನು "ಅದ್ಭುತವಾದ ಸುಂದರವಾದ ಸ್ಥಳ" ಎಂದು ಕರೆದರು ಮತ್ತು ಮೊದಲ ಬಾರಿಗೆ ಈ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳನ್ನು ವಾಷಿಂಗ್ಟನ್ ಬದಲಿಗೆ ಭಾರತದ ಕೇಂದ್ರ ಸರ್ಕಾರವೇ ಬಗೆಹರಿಸಬೇಕೆಂದು ಅಬ್ದುಲ್ಲಾ ಈ ಮೊದಲೇ ಸ್ಪಷ್ಟಪಡಿಸಿದ್ದರು. ತಾವು ರಾಯಭಾರಿಯೊಂದಿಗೆ ಈ ಕೇಂದ್ರಾಡಳಿತ ಪ್ರದೇಶದ ಕುರಿತು ಚರ್ಚಿಸಿದ್ದೇನೆ. ಆದರೆ ಅದರ ಆಂತರಿಕ ಸಮಸ್ಯೆಗಳಿಗೆ ಪರಿಹಾರವನ್ನು ವಿದೇಶಿ ಸರ್ಕಾರದಿಂದ ಕೋರುವುದಿಲ್ಲ ಎಂದು ಅವರು ಹೇಳಿದರು.
ಗೋರ್ ಅವರ ಭೇಟಿಯಿಂದ ಹೊರಹೊಮ್ಮಿದ ಮತ್ತೊಂದು ಪ್ರಮುಖ ಅಂಶವೆಂದರೆ ಅಮೆರಿಕದ ಪ್ರಯಾಣ ಸಲಹಾ ಸೂಚನೆಯ (travel advisory) ಪರಿಶೀಲನೆಯ ಸಾಧ್ಯತೆ. ಭಯೋತ್ಪಾದನೆ ಮತ್ತು ನಾಗರಿಕ ಅಶಾಂತಿಯ ಕಾರಣದಿಂದಾಗಿ, ಪೂರ್ವ ಲಡಾಖ್ ಮತ್ತು ಲೇಹ್ ಪ್ರದೇಶಗಳನ್ನು ಹೊರತುಪಡಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸದಂತೆ ಅಮೆರಿಕದ ಪ್ರಜೆಗಳಿಗೆ ಅಲ್ಲಿನ ಪ್ರಸ್ತುತ ಸಲಹಾ ಸೂಚನೆಯು ಎಚ್ಚರಿಕೆ ನೀಡುತ್ತದೆ.
ವಿದೇಶಿ ಪ್ರವಾಸಿಗರನ್ನು ಹೆಚ್ಚು ಅವಲಂಬಿಸಿರುವ ಕಾಶ್ಮೀರದ ಪ್ರವಾಸೋದ್ಯಮ ವಲಯಕ್ಕೆ ಈ ಪ್ರಯಾಣ ಸಲಹಾ ಸೂಚನೆಯು ದೀರ್ಘಕಾಲದಿಂದ ಕಳವಳದ ವಿಷಯವಾಗಿದೆ. ಪ್ರವಾಸೋದ್ಯಮವನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಪ್ರತಿಪಾದಿಸಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಇತ್ತೀಚೆಗೆ ಗೋರ್ ಅವರಿಗೆ ಈ ಎಚ್ಚರಿಕೆಯ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಕೋರಿದ್ದರು.
ಗೋರ್ ಅವರು ಲಡಾಖ್‌ಗೂ ಭೇಟಿ ನೀಡುವ ನಿರೀಕ್ಷೆಯಿದ್ದು, ಅಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಅಮೆರಿಕ-ಭಾರತ ಸಂಬಂಧಗಳನ್ನು ವಿಸ್ತರಿಸುವ ಪ್ರಯತ್ನಗಳ ನಡುವೆ ಅವರ ಈ ಭೇಟಿ ನಡೆಯುತ್ತಿದ್ದು, ಇದು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅಮೆರಿಕದ ಹೆಚ್ಚಿನ ಆರ್ಥಿಕ ಮತ್ತು ರಾಜತಾಂತ್ರಿಕ ಆಸಕ್ತಿಯ ಸಂಕೇತ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



