ಅಕಾಲಿ ದಳ ಮುಖ್ಯಸ್ಥ ಸುಖ ಬೀರ್ ಸಿಂಗ್ ಮೇಲೆ 'ಕಿರ್ಪಾನ್' ನಿಂದ ದಾಳಿ: ಗುರುದ್ವಾರದ ಸೇವಕನಿಂದಲೇ ಕೃತ್ಯ! ಆರೋಪಿ ವಶಕ್ಕೆ
ದಾಳಿಕೋರನನ್ನು 62 ವರ್ಷದ ಜಸ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ನಿಹಂಗ್ ಸಿಖ್ ಆಗಿದ್ದು, ಕಳೆದ ಎರಡು ವರ್ಷಗಳಿಂದ ನಾಂದೇಡ್‌ನ ಆ ಗುರುದ್ವಾರದಲ್ಲಿ ಸೇವಕರಾಗಿ (ಸೇವದಾರ್) ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ನಾಂದೇಡ್: ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಗುರುದ್ವಾರವೊಂದರಲ್ಲಿ ಗುರುವಾರ ಮಧ್ಯಾಹ್ನ ಶಿರೋಮಣಿ ಅಕಾಲಿ ದಳ (SAD) ಮುಖ್ಯಸ್ಥ ಮತ್ತು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ ಬೀರ್ ಸಿಂಗ್ ಬಾದಲ್ ಅವರ ಮೇಲೆ ನಡೆದ ದಾಳಿಯ ನಂತರ ನಿಹಂಗ್ ಸಿಖ್ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬಾದಲ್ ಅವರು 'ಮಾತಾ ಸಾಹಿಬ್ ಗುರುದ್ವಾರ'ಕ್ಕೆ ಭೇಟಿ ನೀಡುತ್ತಿದ್ದಾಗ ಈ ಘಟನೆ ನಡೆದಿದೆ.
ದಾಳಿಕೋರನನ್ನು 62 ವರ್ಷದ ಜಸ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ನಿಹಂಗ್ ಸಿಖ್ ಆಗಿದ್ದು, ಕಳೆದ ಎರಡು ವರ್ಷಗಳಿಂದ ನಾಂದೇಡ್‌ನ ಆ ಗುರುದ್ವಾರದಲ್ಲಿ ಸೇವಕರಾಗಿ (ಸೇವದಾರ್) ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಮೂಲತಃ ಪುಣೆಯ ನಿವಾಸಿಯಾಗಿರುವ ಮತ್ತು ಹಿಂದೆ ವಕೀಲರಾಗಿ ಕೆಲಸ ಮಾಡುತ್ತಿದ್ದ ಸಿಂಗ್, ಬಾದಲ್ ಅವರ ಬಳಿ ತೆರಳಿ 'ಕಿರ್ಪಾನ್'ನಿಂದ ಅವರ ಹೊಟ್ಟೆಗೆ ಇರಿಯಲು ಪ್ರಯತ್ನಿಸಿದನೆಂದು ಆರೋಪಿಸಲಾಗಿದೆ. ದಾಳಿಯ ತಕ್ಷಣವೇ ಆತನನ್ನು ನಿಯಂತ್ರಿಸಿ ವಶಕ್ಕೆ ಪಡೆಯಲಾಯಿತು ಮತ್ತು ಸದ್ಯ ತನಿಖೆ ನಡೆಯುತ್ತಿದೆ. ಈ ಘಟನೆಯಲ್ಲಿ ದಾಳಿಕೋರನಿಗೂ ಗಾಯವಾಗಿದ್ದು, ಬಾದಲ್ ಅವರ ಕೈಗೂ ಗಾಯವಾಗಿದೆ ಎಂದು ವರದಿಯಾಗಿದೆ.
ಪಂಜಾಬ್‌ನಲ್ಲಿನ ಮಾದಕವಸ್ತು ಸಮಸ್ಯೆಯ ಬಗ್ಗೆ ತನಗೆ ಬೇಸರವಿತ್ತು ಎಂದು ಸಿಂಗ್ ಆರಂಭದಲ್ಲಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಗಿ ನಾಂದೇಡ್ ಎಸ್‌ಪಿ ಡಾ. ನಿಲಾಭ್ ರೋಹನ್ ಹೇಳಿದ್ದಾರೆ. ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಗ್ಯಾಂಗ್ ಅಥವಾ ಸಂಘಟನೆಯೊಂದಿಗೆ ಆತನ ಸಂಪರ್ಕವಿರುವುದು ಕಂಡುಬಂದಿಲ್ಲ ಮತ್ತು ಕೃತ್ಯದ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಆತನನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ರೋಹನ್ ತಿಳಿಸಿದ್ದಾರೆ.
ಘರ್ಷಣೆಯ ಸಮಯದಲ್ಲಿ ಸಿಂಗ್ ಅವರ ಪೇಟ (ತಲೆಬಟ್ಟೆ) ಕೆಳಗೆ ಬಿದ್ದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಸಿಖ್ ಸಂಪ್ರದಾಯದಲ್ಲಿ ಪೇಟಕ್ಕೆ ಇರುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಅಧಿಕಾರಿಗಳು ಆತನನ್ನು ಕರೆದೊಯ್ಯುವ ಮೊದಲು ಸ್ಥಳದಲ್ಲಿದ್ದ ಜನರು ಅದನ್ನು ಮತ್ತೆ ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ. ನಾಂದೇಡ್ ಸಿಖ್ ಧರ್ಮದ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾಗಿದ್ದು, ಈ ಧರ್ಮದ ಐದು 'ತಖ್ತ್'ಗಳಲ್ಲಿ (ಪವಿತ್ರ ಪೀಠಗಳಲ್ಲಿ) ಒಂದಾದ 'ತಖ್ತ್ ಸಚ್‌ಖಂಡ್ ಶ್ರೀ ಹಜೂರ್ ಸಾಹಿಬ್' ಇಲ್ಲಿಯೇ ಇದೆ. ಗುರು ಗೋವಿಂದ ಸಿಂಗ್ ತಮ್ಮ ಜೀವನದ ಅಂತಿಮ ದಿನಗಳನ್ನು ಇಲ್ಲಿಯೇ ಕಳೆದರು ಮತ್ತು 'ಗುರು ಗ್ರಂಥ ಸಾಹಿಬ್' ಅನ್ನು ಶಾಶ್ವತ ಗುರು ಎಂದು ಘೋಷಿಸಿದ್ದಾಗಿ ಹೇಳಲಾಗುತ್ತದೆ.
ನಗರದ ಹೊರವಲಯದಲ್ಲಿರುವ ಈ ಗುರುದ್ವಾರವು ದಟ್ಟ ಅರಣ್ಯದಿಂದ ಕೂಡಿದ್ದು, ಈ ಗುರುದ್ವಾರದ ನಿರ್ವಹಣೆಯನ್ನು 'ನಿಹಂಗ್ ಸಂಪ್ರದಾಯ'ದವರು ನೋಡಿಕೊಳ್ಳುತ್ತಾರೆ ಮತ್ತು ನಾಂದೇಡ್ ಸಾಹಿಬ್‌ನ ಮುಖ್ಯ ಗುರುದ್ವಾರವನ್ನು ನಿರ್ವಹಿಸುವ ಮಂಡಳಿಯು ಇದರ ಉಸ್ತುವಾರಿ ವಹಿಸುವುದಿಲ್ಲ. ಈ ದಾಳಿಯು ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಘಟನೆಯನ್ನು ಖಂಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರ ಪತ್ನಿ ಹರ್‌ಸಿಮ್ರತ್ ಕೌರ್ ಬಾದಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಬಾದಲ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸಾರ್ವಜನಿಕವಾಗಿ ಬಾದಲ್ ಅವರ ಮೇಲೆ ದಾಳಿ ನಡೆದಿರುವುದು ಇದು ಎರಡನೇ ಬಾರಿ. ಈ ಹಿಂದೆ ಡಿಸೆಂಬರ್ 2024ರಲ್ಲಿ ಅಮೃತಸರದ ಸ್ವರ್ಣ ದೇವಾಲಯದ (ಗೋಲ್ಡನ್ ಟೆಂಪಲ್) ಹೊರಗೆ ನಡೆದ ಹತ್ಯೆಯ ಪ್ರಯತ್ನವೊಂದರಿಂದ ಬಾದಲ್ ಪಾರಾಗಿದ್ದರು.
ಮಾಜಿ ಖಲಿಸ್ತಾನಿ ಉಗ್ರಗಾಮಿ ನಾರಾಯಣ್ ಸಿಂಗ್ ಚೌರಾ ಅವರ ಮೇಲೆ ದಾಳಿ ನಡೆಸಿದ್ದನು. ಈ ಘಟನೆಯಲ್ಲಿ ಬಾದಲ್ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಭದ್ರತಾ ಸಿಬ್ಬಂದಿ ತಕ್ಷಣವೇ ಚೌರಾನನ್ನು ವಶಕ್ಕೆ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



