ಸಚಿವ ಸತೀಶ್ ಜಾರಕಿಹೊಳಿ ನಿವಾಸ ಮೇಲೆ ದಾಳಿ ಏಕೆ; ED ಹೇಳಿದ್ದೇನು? Video
ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ನಿವಾಸ, ಸರ್ಕಾರಿ ವಸತಿ ಗೃಹಗಳು ಹಾಗೂ ಬೆಳಗಾವಿ ಮತ್ತು ಗೋಕಾಕ್‌ನಲ್ಲಿರುವ ಆಸ್ತಿಗಳ ಮೇಲೂ ಶೋಧ ನಡೆಸಲಾಗಿದೆ.

ಬೆಳಗಾವಿ: ಲೋಕೋಪಯೋಗಿ ಇಲಾಖೆ (PWD) ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ, ಅಬಕಾರಿ ಇಲಾಖೆಯ ಜಂಟಿ ಆಯುಕ್ತ ವೈ. ಮಂಜುನಾಥ್ ಅವರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಹಲವು ಕಡೆ ದಾಳಿ ನಡೆಸಿದ ಕೆಲವೇ ವಾರಗಳ ಬಳಿಕ, ಇದೀಗ ಸ್ವತಃ ಸತೀಶ್ ಜಾರಕಿಹೊಳಿಗೆ ಸಂಬಂಧಿಸಿದ ಸುಮಾರು 18 ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಇಂದು ಬುಧವಾರ ಬೆಳಗ್ಗೆ ಶೋಧ ನಡೆಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಸಚಿವರ ನಿವಾಸ, ಸರ್ಕಾರಿ ವಸತಿ ಗೃಹಗಳು ಹಾಗೂ ಬೆಳಗಾವಿ ಮತ್ತು ಗೋಕಾಕ್‌ನಲ್ಲಿರುವ ಆಸ್ತಿಗಳ ಮೇಲೂ ಶೋಧ ನಡೆಸಲಾಗಿದೆ. ಬಾರ್ ಲೈಸೆನ್ಸ್‌ಗಳ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಇಂದು ಮುಂಜಾನೆಯಿಂದ ಆರಂಭವಾದ ಶೋಧ ಕಾರ್ಯಾಚರಣೆಯನ್ನು ಸಚಿವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಇತರ ಸ್ಥಳಗಳಲ್ಲೂ ನಡೆಸಲಾಗಿದೆ.
ಜಾರಕಿಹೊಳಿ ಅವರ ಆಪ್ತ ಮೂಲಗಳ ಪ್ರಕಾರ, ಮಹಾರಾಷ್ಟ್ರದಲ್ಲಿರುವ ಕೆಲವು ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ED ನಡೆಸುತ್ತಿರುವ ತನಿಖೆಯ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. 18 ಬಾರ್ ಲೈಸೆನ್ಸ್‌ಗಳ ವಿತರಣೆಯಲ್ಲಿ ನಡೆದಿರುವ ಎನ್ನಲಾದ ಅಕ್ರಮಗಳು ಮತ್ತು ಅಕ್ರಮ ಹಣದ ವಹಿವಾಟಿನ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸತೀಶ್ ಜಾರಕಿಹೊಳಿ ಅವರು ತಮ್ಮ ಪ್ರಭಾವವನ್ನು ಬಳಸಿಕೊಂಡು ಈ ಬಾರ್ ಲೈಸೆನ್ಸ್‌ಗಳನ್ನು ಕೊಡಿಸಲು ನೆರವಾಗಿದ್ದಾರೆಯೇ ಹಾಗೂ ಅಕ್ರಮಗಳಿಂದ ಬಂದಿದೆ ಎನ್ನಲಾದ ಹಣವನ್ನು ಬಳಿಕ ವಿದೇಶಕ್ಕೆ ವರ್ಗಾಯಿಸಲಾಗಿದೆಯೇ ಅಥವಾ ವಿದೇಶದಲ್ಲಿ ಹೂಡಿಕೆ ಮಾಡಲಾಗಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮಂಜುನಾಥ್ ಅವರ ಆಸ್ತಿಗಳ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ನಗದು, ಚಿನ್ನ ಮತ್ತು ವಿದೇಶಿ ಕರೆನ್ಸಿ ಪತ್ತೆಯಾಗಿತ್ತು ಎಂದು ವರದಿಯಾಗಿದೆ. ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಅನುಮಾನಾಸ್ಪದ ಅಕ್ರಮ ವಿದೇಶಿ ಹಣದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಆರೋಪಿತ ಹಣದ ವಹಿವಾಟಿನ ಜಾಡು ಪತ್ತೆಹಚ್ಚಲು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಪಾತ್ರವನ್ನು ನಿರ್ಧರಿಸಲು ಇಡಿ ಅಧಿಕಾರಿಗಳು ದಾಖಲೆಗಳು, ಹಣಕಾಸು ವ್ಯವಹಾರಗಳ ವಿವರಗಳು ಮತ್ತು ಎಲೆಕ್ಟ್ರಾನಿಕ್ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಸಚಿವರ ಆಪ್ತ ಸಹಚರರಾದ ಗೋಕಾಕ್‌ನ ರಾಜು ದರಗಶೆಟ್ಟಿ, ಬೆಳಗಾವಿಯ ಡಾ. ಗಿರೀಶ್ ಸೋನವಾಲ್ಕರ್ ಮತ್ತು ವಿಠ್ಠಲ ಪರಸನ್ನನವರ್ ಅವರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಡಿ ಹೇಳುವುದೇನು?
ಇಂದು ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ನಡೆದ ದಾಳಿಗೂ ಕೆಲ ವಾರಗಳ ಹಿಂದೆ ಮಂಜುನಾಥ್ ಅವರ ನಿವಾಸದ ಮೇಲೆ ನಡೆದ ದಾಳಿಗೂ ಸಂಬಂಧವಿಲ್ಲ, ಇಂದಿನ ದಾಳಿಗೆ ಸಚಿವ ಸತೀಶ್ ಜಾರಕಿಹೊಳಿಯವರ ಅಕ್ರಮ ಹಣ ವರ್ಗಾವಣೆ ಕೇಸು ಕಾರಣ ಎಂದು ಸ್ಪಷ್ಟಪಡಿಸಿದೆ.
ಈ ದಾಳಿಗೂ ಅವರ ಬಾಮೈದ ಮಂಜುನಾಥ್ ವಿರುದ್ಧದ ಅಬಕಾರಿ ಅಕ್ರಮ ಆರೋಪಕ್ಕೂ ಸಂಬಂಧ ಇಲ್ಲ. ವಿದೇಶಗಳಲ್ಲಿ ಮಾಡಿದ ಹೂಡಿಕೆಯ ಕುರಿತಾದ ಆರೋಪಗಳಿಗೆ ಸಂಬಂಧಿಸಿ ಈ ದಾಳಿ ನಡೆದಿದೆ ಎಂದು ಇಡಿ ತಿಳಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ಇಡಿ ಶೋಧ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA)–1999ರ ಅಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ನಿವಾಸಗಳು ಮತ್ತು ಅವರ ಆಪ್ತರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ. ವಿದೇಶಗಳಲ್ಲಿ ನಡೆದಿರುವ ಎನ್ನಲಾದ ಅಕ್ರಮ ಹೂಡಿಕೆಗಳು ಹಾಗೂ ಹಣಕಾಸು ವಹಿವಾಟುಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾ, ಉಗಾಂಡದಲ್ಲಿ ಹೂಡಿಕೆಗಳ ಪರಿಶೀಲನೆ
ಸತೀಶ್ ಜಾರಕಿಹೊಳಿ ಅವರ ಮೇಲಿನ ದಾಳಿ FEMA–1999ರ ಅಡಿಯಲ್ಲಿ ನಡೆಯುತ್ತಿರುವ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಇಡಿ ತಿಳಿಸಿದೆ. ದಕ್ಷಿಣ ಆಫ್ರಿಕಾ, ಉಗಾಂಡ ಸೇರಿದಂತೆ ವಿವಿಧ ದೇಶಗಳಲ್ಲಿ ಅಕ್ರಮವಾಗಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಈ ಹೂಡಿಕೆಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಕಡೆಯಿಂದ ಹಣ ಅಥವಾ ಹೂಡಿಕೆ ನಡೆದಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಹೀಗಾಗಿ ಸಚಿವರ ನಿವಾಸಗಳಲ್ಲಿ ವಿದೇಶಿ ಹೂಡಿಕೆ, ಹಣ ವರ್ಗಾವಣೆ, ಆಸ್ತಿ ಹಾಗೂ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




