'ನಮ್ ವಿಷ್ಯಾ ಗೊತ್ತಾಗಿದೆ.. ಆಕ್ಸಿಡೆಂಟ್ ಮಾಡಿ ಗಂಡನ ಕೊಂದು ಹಾಕು': ಪೊಲೀಸ್ ಮೊರೆ ಹೋದ ಪತಿ ಮಹಾಶಯ, WhatsApp Chat ವೈರಲ್!
2016ರಲ್ಲಿ ಸೂರ್ಯಾಪೇಟೆ ಜಿಲ್ಲೆಯ ಮೋತೆ ಮಂಡಲದ ರಾಘವಾಪುರಂ ಗ್ರಾಮದ ಯುವತಿ ಭವಾನಿ ಎಂಬುವವರೊಂದಿಗೆ ಅವರ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಹೈದರಾಬಾದ್: ವೇದಮಂತ್ರಗಳ ಸಮ್ಮುಖದಲ್ಲಿ ಏಳು ಹೆಜ್ಜೆ ಹಾಕಿ, ಅಗ್ನಿ ಸಾಕ್ಷಿಯಾಗಿ ವಿವಾಹವಾದ ಪತ್ನಿಯೇ ತನ್ನ ಪತಿಯ ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎನ್ನಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪತಿಯನ್ನು ಅಪಘಾತದ ರೂಪದಲ್ಲಿ ಕೊಲೆ ಮಾಡಬೇಕು, ಇಲ್ಲವಾದರೆ ತಾನೇ ಸಾಯುವುದಾಗಿ ಆಕೆ ಕಳುಹಿಸಿದ್ದಾಳೆ ಎನ್ನಲಾದ ಸಂದೇಶಗಳನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ತೆಲಂಗಾಣದ ಮೆಹಬೂಬಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಡೋರ್ನಕಲ್ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಿಐ ಚಂದ್ರಮೌಳಿ ನೀಡಿದ ಮಾಹಿತಿ ಪ್ರಕಾರ, ಡೋರ್ನಕಲ್ ಮಂಡಲದ ಚಿಲುಕೋಡು ಗ್ರಾಮದ ನಿವಾಸಿ ಗಾಡೆ ರಾಜೇಶ್ವರರಾವ್ ಎಂಬ ವ್ಯಕ್ತಿ ಖಮ್ಮಂ ಜಿಲ್ಲೆಯ ಏದುಲಾಪುರಂ ಮುನ್ಸಿಪಾಲಿಟಿಯ ಸಾಯಿಪ್ರಭಾತ್‌ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಖಮ್ಮಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
2016ರಲ್ಲಿ ಸೂರ್ಯಾಪೇಟೆ ಜಿಲ್ಲೆಯ ಮೋತೆ ಮಂಡಲದ ರಾಘವಾಪುರಂ ಗ್ರಾಮದ ಯುವತಿ ಭವಾನಿ ಎಂಬುವವರೊಂದಿಗೆ ಅವರ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಕಳೆದ ತಿಂಗಳ 27ರಂದು ಮಧ್ಯಾಹ್ನ ಊಟ ಮಾಡಲು ರಾಜೇಶ್ವರರಾವ್ ಮನೆಗೆ ತೆರಳಿದಾಗ, ತಮ್ಮ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯವಾಗಿರುವುದನ್ನು ಗಮನಿಸಿದ್ದರು ಎನ್ನಲಾಗಿದೆ.
ಪತ್ನಿಯ ವರ್ತನೆಯ ಬಗ್ಗೆ ಅನುಮಾನಗೊಂಡ ಅವರು ಮರುದಿನ, ಅಂದರೆ ಕಳೆದ ತಿಂಗಳ 28ರಂದು ಚಿಲುಕೋಡಿನಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಲು ಮುಂದಾಗಿದ್ದರು. ಇದಕ್ಕಾಗಿ ಚಿಲುಕೋಡು ಸಮೀಪದ ಸಂಕೇಸ ಅಥವಾ ತಾಳ್ಳಸಂಕೇಸ ಗ್ರಾಮದಲ್ಲಿದ್ದ ತಮ್ಮ ಸಹೋದರ ಗಾಡೆ ಶ್ರೀನಿವಾಸ್ ಅವರನ್ನು ಕರೆತರಲು ತೆರಳುತ್ತಿದ್ದಾಗ, ತಮ್ಮ ಪತ್ನಿಯೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದ ವ್ಯಕ್ತಿ ಹಿಂದಿನಿಂದಲೇ ತಮ್ಮನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದರು. ಆತನನ್ನು ಹಿಡಿಯಲು ಯತ್ನಿಸಿದಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
'ನಮ್ ವಿಷ್ಯಾ ಗೊತ್ತಾಗಿದೆ.. ಆಕ್ಸಿಡೆಂಟ್ ಮಾಡಿ ಗಂಡನ ಕೊಂದು ಹಾಕು'
ಬಳಿಕ ಚಿಲುಕೋಡಿಗೆ ಹಿಂದಿರುಗಿದ ರಾಜೇಶ್ವರರಾವ್, ಪತ್ನಿ ಭವಾನಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದ್ದಾರೆ. ಪತಿಯನ್ನು ದಾರಿಗೆ ಅಡ್ಡಿಯಾಗದಂತೆ ಮಾಡಲು ಆಕೆ ತನ್ನ ಪ್ರಿಯಕರ ಪುರಿಮೆಟ್ಲ ಸೈದುಲುಗೆ ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಹಲವು ಸಂದೇಶಗಳನ್ನು ಕಳುಹಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಪತಿಯನ್ನು ಮನೆಯೊಳಗೆ ಕೊಲೆ ಮಾಡಬಾರದು. ಹೊರಗೆ ಯಾರಾದರೂ ವಾಹನದಿಂದ ಅಪಘಾತ ಮಾಡಿಸಿ ಕೊಲೆ ಮಾಡಬೇಕು ಎಂದು ಆಕೆ ಒತ್ತಡ ಹೇರಿದ್ದಳು ಎನ್ನಲಾಗಿದೆ. ಅಲ್ಲದೆ ನೀನು ಆತನನ್ನು ಕೊಂದು ಹಾಕದಿದ್ದರೆ ನಾನೇ ಆತನನ್ನು ಕೊಲ್ಲುತ್ತೇನೆ ಎಂದು ಪತ್ನಿ ಮೆಸೇಜ್ ಮಾಡಿದ್ದಾಳೆ ಎಂದು ಪತಿ ಚಾಟಿಂಗ್ ತೋರಿಸಿದ್ದಾನೆ. ಪತ್ನಿ ತನ್ನ ಪ್ರಿಯಕರನಿಗೆ ಕಳುಹಿಸಿದ್ದ ಚಾಟ್‌ಗಳ ನಕಲು ಪ್ರತಿಗಳನ್ನು ರಾಜೇಶ್ವರರಾವ್ ಪೊಲೀಸರಿಗೆ ಸಲ್ಲಿಸಿದ್ದಾರೆ.
ಪತ್ನಿಯೇ ಕೊಲ್ಲುತ್ತಾಳೆ, ನನ್ನ ರಕ್ಷಿಸಿ ಎಂದು ಪೊಲೀಸ್ ಮೊರೆ ಹೋದ ಪತಿ
ತಮ್ಮೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಪತ್ನಿ ಹಾಗೂ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಆಕೆಯ ಪ್ರಿಯಕರ ಪುರಿಮೆಟ್ಲ ಸೈದುಲು ಸೇರಿಕೊಂಡು ತನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಮಾತ್ರವಲ್ಲದೇ ತನ್ನ ಇಬ್ಬರು ಹೆಣ್ಣು ಮಕ್ಕಳಿಗೂ ಪ್ರಾಣಭೀತಿ ಇದೆ. ಹೀಗಾಗಿ ತಮಗೆ ಹಾಗೂ ಮಕ್ಕಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ರಾಜೇಶ್ವರರಾವ್ ಮನವಿ ಮಾಡಿದ್ದಾರೆ. ಅಲ್ಲದೆ ಇಬ್ಬರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ತಿಂಗಳ 1ರಂದು ಡೋರ್ನಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಝೀರೋ ಎಫ್‌ಐಆರ್ ದಾಖಲಿಸಿ ಪ್ರಕರಣವನ್ನು ಖಮ್ಮಂ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಸಂತ್ರಸ್ತ ರಾಜೇಶ್ವರರಾವ್ ಗುರುವಾರ ಖಮ್ಮಂ ಗ್ರಾಮೀಣ ಠಾಣೆಯಲ್ಲೂ ಮತ್ತೊಮ್ಮೆ ದೂರು ನೀಡಿದ್ದಾರೆ. ಈ ಕುರಿತು ಖಮ್ಮಂ ಗ್ರಾಮೀಣ ಸಿಐ ಮುಷ್ಕರಾಜು ಅವರನ್ನು ಸಂಪರ್ಕಿಸಿದಾಗ, ದೂರು ಸ್ವೀಕರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಡಿಜಿಟಲ್ ಸಾಕ್ಷ್ಯಗಳ ನೈಜತೆ ಮತ್ತು ಅವುಗಳ ಸಂದರ್ಭವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ ಭವಾನಿ ಮತ್ತು ಸೈದುಲು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




