Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ- ಶೇಖ್ ಹಸೀನಾ
ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರು ಇದೇ ಮೊದಲ ಬಾರಿಗೆ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ.

ನವದೆಹಲಿ: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ದಂಗೆಯ ನಂತರ ಭಾರತಕ್ಕೆ ಬಂದು ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು, ತಾವು ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರೂ ಬಾಂಗ್ಲಾದೇಶಕ್ಕೆ ಮರಳುವುದಾಗಿ ಪ್ರತಿಜ್ಞೆಬುಧವಾರ ಮಾಡಿದರು.
ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರು ಇದೇ ಮೊದಲ ಬಾರಿಗೆ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು, ಜುಲೈ-ಆಗಸ್ಟ್ 2024ರಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳು ತಮ್ಮ ಸರ್ಕಾರವನ್ನು ಉರುಳಿಸಲು ರೂಪಿಸಲಾದ ಪಿತೂರಿಯ ಭಾಗವಾಗಿದ್ದವು ಎಂದು ಆರೋಪಿಸಿದರು.
ಮಧ್ಯಂತರ ಆಡಳಿತದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರೇ ಆ ಪಿತೂರಿಯ ಸತ್ಯವನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದ ಅವರು, ತಮ್ಮ ಸರ್ಕಾರ ಆರಂಭಿಸಿದ್ದ ಹಿಂಸಾಚಾರದ ತನಿಖೆಯನ್ನು ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಹೇಳಿದ್ದಾರೆ.
ನವದೆಹಲಿಯಿಂದ ವರ್ಚುವಲ್ ಮೂಲಕ ವರದಿಗಾರರನ್ನುದ್ದೇಶಿಸಿ ಮಾತನಾಡಿದ ಹಸೀನಾ, ತಮ್ಮ ಚುನಾಯಿತ ಸರ್ಕಾರವನ್ನು ಉರುಳಿಸಲು ಉಗ್ರಗಾಮಿ ಮತ್ತು ವಿದೇಶಿ ಬೆಂಬಲಿತ ಪಡೆಗಳು, ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಹೈಜಾಕ್ ಮಾಡಿವೆ ಎಂದು ಆರೋಪಿಸಿದರು.
"ನಾನು ವಾಪಸ್ ನನ್ನ ದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ. ನನಗೆ ಏನೇ ಆದರೂ ಪರವಾಗಿಲ್ಲ. ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ. ನನ್ನ ಜನರ ಬಳಿಗೆ ಹಿಂತಿರುಗುತ್ತೇನೆ. ನನ್ನ ಪ್ರೀತಿಯ ದೇಶಬಂಧುಗಳು ಕಷ್ಟಪಡುತ್ತಿರುವಾಗ ನಾನು ದೂರ ಉಳಿಯಲು ಸಾಧ್ಯವಿಲ್ಲ. ಡಿಸೆಂಬರ್ ತಿಂಗಳಲ್ಲಿ ಹಿಂತಿರುಗಲು ಬಯಸುತ್ತೇನೆ, ಶೀಘ್ರದಲ್ಲೇ ದಿನಾಂಕವನ್ನ ಘೋಷಣೆ ಮಾಡುವೆ” ಎಂದು ಅವರು ಹೇಳಿದ್ದಾರೆ. ತಮ್ಮ ಹಿಂತಿರುಗುವಿಕೆಯ ಏಕೈಕ ಉದ್ದೇಶ ಜನರ ಪಕ್ಕದಲ್ಲಿ ನಿಂತು ಅವರ ಜೀವನವನ್ನು ಸುಧಾರಿಸಲು ಸಹಾಯ ಮಾಡುವುದು" ಎಂದು ಅವರು ತಿಳಿಸಿದ್ದಾರೆ.
ಮೀಸಲಾತಿ ಸುಧಾರಣೆ ಚಳವಳಿಯನ್ನು ತಮ್ಮ ಸರ್ಕಾರವು ಮಾತುಕತೆ, ಕಾನೂನು ಪ್ರಕ್ರಿಯೆ ಮತ್ತು ತಾಳ್ಮೆಯ ಮೂಲಕ ಬಗೆಹರಿಸಲು ಸತತ ಪ್ರಯತ್ನ ನಡೆಸಿತ್ತು. ಆದರೆ ಸಂಘಟಿತ ಗುಂಪುಗಳು ಈ ಚಳವಳಿಯನ್ನು ತಮ್ಮ ರಾಜಕೀಯ ದುರುದ್ದೇಶ ಸಾಧನೆಗೆ ದುರ್ಬಳಕೆ ಮಾಡಿಕೊಂಡವು.
ನನ್ನ ಪದಚ್ಯುತಿಯ ನಂತರ, ಸಾವಿರಾರು ಅವಾಮಿ ಲೀಗ್ ನಾಯಕರು, ಕಾರ್ಮಿಕರು ಮತ್ತು ಬೆಂಬಲಿಗರು, ಪೊಲೀಸ್ ಸಿಬ್ಬಂದಿ, ಪತ್ರಕರ್ತರು, ವಕೀಲರು, ನ್ಯಾಯಾಧೀಶರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರನ್ನು ಬಂಧಿಸಿ, ಚಿತ್ರಹಿಂಸೆ ನೀಡಲಾಗಿದೆ ಎಂದು ಹಸೀನಾ ಆರೋಪಿಸಿದರು. 2024 ರ ಚಳುವಳಿ ಅಂತಿಮವಾಗಿ "ಸಂವಿಧಾನದ ಮೇಲಿನ ಸಂಘಟಿತ ದಾಳಿ"ಯಾಗಿ ಮಾರ್ಪಟ್ಟಿತು ಎಂದಿದ್ದಾರೆ.
ಇದೇ ವೇಳೆ, ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯ ಕುರಿತು ತೀವ್ರ ಕಳವಳ ಮತ್ತು ನೋವನ್ನು ತೋಡಿಕೊಂಡ ಮಾಜಿ ಪ್ರಧಾನಿ, ಕಳೆದ ಎರಡು ವರ್ಷಗಳಿಂದ ನನ್ನ ಪ್ರೀತಿಯ ಬಾಂಗ್ಲಾದೇಶ ಅನುಭವಿಸುತ್ತಿರುವ ಸಂಕಷ್ಟವನ್ನು ನಾನು ನೋಡುತ್ತಿದ್ದೇನೆ. ಇದು ನಾವು ಕಟ್ಟಿದ ಬಾಂಗ್ಲಾದೇಶವಲ್ಲ ಹಾಗೂ 1971 ರ ವಿಮೋಚನಾ ಸಂಗ್ರಾಮದಲ್ಲಿ 30 ಲಕ್ಷ ಜನರು ತಮ್ಮ ಪ್ರಾಣತ್ಯಾಗ ಮಾಡಿದ್ದು ಈ ರೀತಿಯ ದೇಶಕ್ಕಾಗಿ ಅಲ್ಲ ಎಂದು ಹಸೀನಾ ಭಾವುಕರಾಗಿ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



