ಕಾಲಿನ ಕೆಳಗೆ ಶ್ರೀರಾಮನ ಫೋಟೋ? ಸಂಸತ್ ಆವರಣದಲ್ಲಿ 'ಚಂದ ಚೋರಿ' ಸ್ಕಿಟ್ ಮಾಡಿದ ರಾಹುಲ್, ಇತರ ಇಬ್ಬರು ಸಂಸದರ ವಿರುದ್ಧ ಕೇಸ್
ರಾಹುಲ್ ಗಾಂಧಿ, ಪಪ್ಪು ಯಾದವ್ ಮತ್ತು ಅವಧೇಶ್ ಪ್ರಸಾದ್ ಅವರು ಸಂಸತ್ ಆವರಣದಲ್ಲಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕೆಲವು ಮಠಾಧೀಶರು ಕೊತ್ವಾಲಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ನವದೆಹಲಿ: ಸಂಸತ್ ಆವರಣದಲ್ಲಿ ನಡೆದ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ಸನಾತನ ಧರ್ಮವನ್ನು ಅವಮಾನಿಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ವಾರಣಾಸಿ ಪೊಲೀಸರು ಶನಿವಾರ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಇಬ್ಬರು ಸಂಸದರ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಹುಲ್ ಗಾಂಧಿ, ಪಪ್ಪು ಯಾದವ್ ಮತ್ತು ಅವಧೇಶ್ ಪ್ರಸಾದ್ ಅವರು ಸಂಸತ್ ಆವರಣದಲ್ಲಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕೆಲವು ಮಠಾಧೀಶರು ಕೊತ್ವಾಲಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಕಾಶಿ ವಲಯ ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸ್ವಾಲ್ ಅವರು ಹೇಳಿದ್ದಾರೆ.
ಪಪ್ಪು ಯಾದವ್ ಎಂದು ಜನಪ್ರಿಯವಾಗಿರುವ ರಾಜೇಶ್ ರಂಜನ್ ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದರಾಗಿದ್ದರೆ, ಅವಧೇಶ್ ಪ್ರಸಾದ್ ಉತ್ತರ ಪ್ರದೇಶದ ಫೈಜಾಬಾದ್ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದರಾಗಿದ್ದಾರೆ.
ಪಪ್ಪು ಯಾದವ್ ಅವರು ಸದನದಲ್ಲಿ ಭಗವಾನ್ ರಾಮ ಮತ್ತು ಸನಾತನ ಧರ್ಮವನ್ನು ಅವಮಾನಿಸಿದ ರೀತಿ ಕ್ಷಮಿಸಲಾಗದು ಎಂದು ಜಗದ್ಗುರು ಬಾಲಕ ದಾಸ್ ಅವರು ಹೇಳಿದ್ದಾರೆ.
"ಸನಾತನ ಧರ್ಮದ ಯಾವುದೇ ಅನುಯಾಯಿ ಈ ಕೃತ್ಯವನ್ನು ಮರೆಯಲು ಸಾಧ್ಯವಿಲ್ಲ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಆದ್ದರಿಂದ ಪ್ರಕರಣ ದಾಖಲಿಸಬೇಕೆಂದು ನಾವು ಒತ್ತಾಯಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಬ್ಲಾಕ್ ಸಂಸದರು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ಮತ್ತು ಜುಲೈ 20 ರ ಸಂಸತ್ ಮೆರವಣಿಗೆಯಲ್ಲಿ ವಿದ್ಯಾರ್ಥಿ ಚಳವಳಿಗಾರರ ವಿರುದ್ಧ ಪೊಲೀಸ್ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ವಿರೋಧ ಪಕ್ಷದ ಸಂಸದರು ರಾಮ ಮಂದಿರದ ದೇಣಿಗೆ ಕಳ್ಳತನವನ್ನು ಎತ್ತಿ ತೋರಿಸಲು ಒಂದು ಕಿರುನಾಟಕವನ್ನು ಪ್ರದರ್ಶಿಸಿದರು. ಇದರ ಭಾಗವಾಗಿ, ಸಂಸತ್ತಿನ ಮಕರ ದ್ವಾರಕ್ಕೆ ಹೋಗುವ ಮೆಟ್ಟಿಲುಗಳ ಮುಂದೆ ದೇಣಿಗೆ ಪೆಟ್ಟಿಗೆಗಳನ್ನು ಇರಿಸಿದರು. ರಾಹುಲ್ ಗಾಂಧಿ ಸೇರಿದಂತೆ ಸಂಸದರು ಪೆಟ್ಟಿಗೆಗಳಿಗೆ ಹಣವನ್ನು ಹಾಕಿದರು. ಆದರೆ ಪೆಟ್ಟಿಗೆಗಳ ಬಳಿ ಕುಳಿತಿದ್ದ ಕೇಸರಿ ಬಟ್ಟೆ ಧರಿಸಿದ ಪಪ್ಪು ಯಾದವ್ ಅದನ್ನು ತಮ್ಮ ಜೇಬಿಗೆ ಹಾಕಿಕೊಂಡರು.
ಕಾಲಿನ ಕೆಳಗೆ ಶ್ರೀರಾಮನ ಫೋಟೋ?
ಈ ಸಂಬಂಧ ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದ್ದು, ಸೂರ್ಯ ಮೈಥಿಲ್ ಎಂಬುವರು ಸಹ ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಸೂರ್ಯ ಮೈಥಿಲ್, ಪಪ್ಪು ಯಾದವ್ ಸಂಸತ್ತಿನ ಹೊರಗೆ ಕೇಸರಿ ವಸ್ತ್ರ ಮತ್ತು ಧಾರ್ಮಿಕ ಚಿಹ್ನೆಗಳಿಗೆ ಅವಮಾನಿಸಿದ್ದಾರೆ. ರಾಹುಲ್ ಗಾಂಧಿ, ಡಿಂಪಲ್ ಯಾದವ್, ಅವಧೇಶ್ ಪ್ರಸಾದ್ ಸೇರಿದಂತೆ ಇಂಡಿಯಾ ಒಕ್ಕೂಟದ ಹಲವು ಸಂಸದರು ಈ ನಾಟಕಕ್ಕೆ ಬೆಂಬಲ ನೀಡಿದ್ದಾರೆ. ಪ್ರತಿಭಟನೆ ವೇಳೆ ಪಪ್ಪು ಯಾದವ್ ಶ್ರೀರಾಮನ ರೇಖಾಚಿತ್ರವನ್ನು ತಮ್ಮ ಕಾಲುಗಳ ಕೆಳಗೆ ಇಟ್ಟುಕೊಂಡಿದ್ದರು. ಇದು ಸನಾತನಿಗಳ ಭಾವನೆಗೆ ತೀವ್ರ ನೋವುಂಟುಮಾಡಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



