ಕಿಶ್ತ್ವಾರ್ ನಲ್ಲಿ ಮೇಘಸ್ಫೋಟ: ಭಾರಿ ಮಳೆ-ಪ್ರವಾಹ, ವ್ಯಾಪಕ ಹಾನಿ, ಹೆದ್ದಾರಿ ಬಂದ್
ಮೇಘಸ್ಫೋಟದ ಪರಿಣಾಮ ಚತ್ರೂ ಭಾಗದ ಪ್ರಮುಖ ಹೆದ್ದಾರಿಯಲ್ಲಿ ಭೂಕುಸಿತ ಹಾಗೂ ಮಣ್ಣು-ಕಲ್ಲುಗಳು ಹರಿದು ಬಂದ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕಿಶ್ತ್ವಾರ್: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚತ್ರೂ ಪ್ರದೇಶದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಮೇಘಸ್ಫೋಟದಿಂದ ವ್ಯಾಪಕ ಪ್ರವಾಹ ಉಂಟಾಗಿ ಭಾರಿ ಹಾನಿ ಸಂಭವಿಸಿದೆ.
ಕಿಶ್ತ್ ವಾರ್ ನ ಹಲವು ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳು ಹಾನಿಗೊಳಗಾಗಿವೆ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಮೇಘಸ್ಫೋಟದ ವರದಿ ಬಂದ ತಕ್ಷಣ ಕಿಶ್ತ್ವಾರ್ ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಶರ್ಮಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ತಿಳಿಸಿದ್ದಾರೆ.
"ಇದುವರೆಗೆ ಯಾವುದೇ ಜೀವಹಾನಿ ವರದಿಯಾಗಿಲ್ಲ. ಕೆಲವು ವಾಣಿಜ್ಯ ಮಳಿಗೆಗಳು ಮತ್ತು ಅಂಗಡಿಗಳು ಹಾನಿಗೊಳಗಾಗಿದ್ದು, ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು," ಎಂದು ಅವರು ಹೇಳಿದ್ದಾರೆ.
ಮುನ್ನೆಚ್ಚರಿಕೆ ವ್ಯವಸ್ಥೆ ಬಲಪಡಿಸಿದ ಕೇಂದ್ರ ಸರ್ಕಾರ
ಕಳೆದ ವರ್ಷ ಚಸೋಟಿ (Chasoti) ಪ್ರದೇಶದಲ್ಲಿ ಸಂಭವಿಸಿದ್ದ ಮೇಘಸ್ಫೋಟದ ಅನುಭವದ ಬಳಿಕ, ಭೂ ವಿಜ್ಞಾನ ಸಚಿವಾಲಯವು ಕಿಶ್ತ್ವಾರ್ ಮತ್ತು ಮಚೈಲ್ ಪ್ರದೇಶಗಳಲ್ಲಿ ಅತ್ಯಾಧುನಿಕ ಆರಂಭಿಕ ಎಚ್ಚರಿಕೆ ವ್ಯವಸ್ಥೆ (Early Warning System - EWS)ಗಳನ್ನು ಅಳವಡಿಸಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಇದರ ಜೊತೆಗೆ, ಪದ್ದರ್ (Padder) ಪ್ರದೇಶದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ (Automatic Weather Station - AWS) ಸ್ಥಾಪಿಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೆದ್ದಾರಿ ಸಂಚಾರ ಸ್ಥಗಿತ
ಮೇಘಸ್ಫೋಟದ ಪರಿಣಾಮ ಚತ್ರೂ ಭಾಗದ ಪ್ರಮುಖ ಹೆದ್ದಾರಿಯಲ್ಲಿ ಭೂಕುಸಿತ ಹಾಗೂ ಮಣ್ಣು-ಕಲ್ಲುಗಳು ಹರಿದು ಬಂದ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ರಸ್ತೆ ತೆರವು ಕಾರ್ಯವನ್ನು ಆಡಳಿತ ಯಂತ್ರ ಆರಂಭಿಸಿದ್ದು, ಪರಿಸ್ಥಿತಿ ಮೇಲೆ ನಿಗಾ ವಹಿಸಲಾಗಿದೆ.
ರಾಜೌರಿಯಲ್ಲೂ ಇನ್ನೂ ರಸ್ತೆ ಬಂದ್
ಇದೇ ವೇಳೆ, ಜುಲೈ 19ರಂದು ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಾಗೂ ಮೇಘಸ್ಫೋಟದಿಂದ ಉಂಟಾದ ಭೂಕುಸಿತವು ಥನ್ನಮಂಡಿ–ಡಿಕೆಜಿ–ಬುಫ್ಲಿಯಾಜ್ ರಸ್ತೆಗೆ ತೀವ್ರ ಹಾನಿ ಉಂಟುಮಾಡಿತ್ತು. ಗಡಿ ರಸ್ತೆ ಸಂಸ್ಥೆ (BRO) ನಿರ್ಮಿಸಿದ್ದ ಈ ಪ್ರಮುಖ ರಸ್ತೆಯ ಹಲವು ಭಾಗಗಳು ಕೊಚ್ಚಿಹೋಗಿದ್ದು, ಸೇತುವೆಗಳು ಮತ್ತು ಮರಗಳು ಹಾನಿಗೊಳಗಾಗಿದ್ದವು.
ಘಟನೆಯಾಗಿ 13 ದಿನಗಳಾದರೂ ರಸ್ತೆ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ವಾಹನಗಳನ್ನು ಸದ್ಯ ಬಿಂಬರ್ ಗಲಿ (BG) ಮಾರ್ಗದ ಮೂಲಕ ಸಂಚರಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



