ದೇಶ

ಪಶ್ಚಿಮ ಬಂಗಾಳ 2ನೇ ಹಂತದ ಮತದಾನ: ಆರಂಭದಲ್ಲಿ ಹಲವೆಡೆ ಹಿಂಸಾಚಾರ; ಚುನಾವಣಾ ವೀಕ್ಷಕರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ- ಮಮತಾ ಬ್ಯಾನರ್ಜಿ

ಇಂದು ಬುಧವಾರ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ದ್ವಿತೀಯ ಹಾಗೂ ಅಂತಿಮ ಹಂತದ ಮತದಾನದ ಆರಂಭಿಕ ಗಂಟೆಗಳಲ್ಲಿ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಹಿಂಸಾಚಾರ ಮತ್ತು ಗಲಾಟೆಗಳು ನಡೆದ ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ 2ನೇ ಹಂತದ ಮತದಾನ: ಆರಂಭದಲ್ಲಿ ಹಲವೆಡೆ ಹಿಂಸಾಚಾರ; ಚುನಾವಣಾ ವೀಕ್ಷಕರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ- ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದಲ್ಲಿ ಕೊನೆ ಹಂತದ ಮತದಾನ
Published On :

ಇಂದು ಬುಧವಾರ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ದ್ವಿತೀಯ ಹಾಗೂ ಅಂತಿಮ ಹಂತದ ಮತದಾನದ ಆರಂಭಿಕ ಗಂಟೆಗಳಲ್ಲಿ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಹಿಂಸಾಚಾರ ಮತ್ತು ಧ್ವಂಸ ಗಲಾಟೆಗಳು ನಡೆದ ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವ್ರಾ, ಛಾಪ್ರಾ, ಶಾಂತಿಪುರ, ನಿಮ್ತಲಾ ಮತ್ತು ಭಂಗಾರ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಈ ಘಟನೆಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ. ನಾಡಿಯಾ ಜಿಲ್ಲೆಯ ಛಾಪ್ರಾದ ಮತಗಟ್ಟೆ ಸಂಖ್ಯೆ 53ರಲ್ಲಿ ಬಿಜೆಪಿ ಮತಗಟ್ಟೆ ಏಜೆಂಟ್ ಮೇಲೆ ಆಡಳಿತ ಪಕ್ಷ ಟಿಎಂಸಿ ಸಂಪರ್ಕ ಹೊಂದಿರುವ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಗಾಯಗೊಂಡ ವ್ಯಕ್ತಿ ಮೊಶಾರೆಫ್ ಮಿರ್ ಎಂದು ಗುರುತಿಸಲ್ಪಟ್ಟಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸೈಕತ್ ಸರ್ಕಾರ್, ಅಣಕು ಮತದಾನ ಆರಂಭವಾದ ನಂತರ ಈ ಘಟನೆ ನಡೆದಿದೆ. ಟಿಎಂಸಿ ಬೆಂಬಲಿಗರು ಬಿಜೆಪಿ ಏಜೆಂಟ್‌ರನ್ನು ತಡೆದು, ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ ಎಂದು ಹೇಳಿದರು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಟಿಎಂಸಿ ಈ ಆರೋಪಗಳನ್ನು ತಳ್ಳಿಹಾಕಿದೆ.

ಗಾಯಗೊಂಡ ವ್ಯಕ್ತಿಯ ಪ್ರಕಾರ, 15-16 ಮಂದಿ ಟಿಎಂಸಿ ಬೆಂಬಲಿಗರು ಅವರ ಮೇಲೆ ದಾಳಿ ನಡೆಸಿದ್ದು, ಅವರಲ್ಲಿ ಒಬ್ಬನ ಬಳಿ ಗನ್ ಇತ್ತು. ಕಬ್ಬಿಣದ ರಾಡ್‌ನಿಂದ ಹೊಡೆದ ನಂತರ ಅವರು ನೆಲಕ್ಕುರುಳಿದರು ಎಂದು ಹೇಳಿದ್ದಾರೆ.

ಶಾಂತಿಪುರದಲ್ಲಿ ವಾರ್ಡ್ ಸಂಖ್ಯೆ 16ರ ಬಿಜೆಪಿ ಕ್ಯಾಂಪ್ ಕಚೇರಿ ಇಂದು ಬೆಳಗ್ಗೆ ಧ್ವಂಸಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲಿ ಫರ್ನಿಚರ್‌ಗಳನ್ನು ಒಡೆದು ಹಾಕಲಾಗಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ 24 ಪರಗಣಾ ಜಿಲ್ಲೆಯ ಭಂಗಾರ್ ಪ್ರದೇಶದಲ್ಲಿ, ಐಎಸ್‌ಎಫ್ ಏಜೆಂಟ್‌ಗೆ ಮತಗಟ್ಟೆಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಅಶಾಂತಿ ಉಂಟಾಗಿದೆ.

ಐಎಸ್‌ಎಫ್ ನಾಯಕ ಅರಾಬುಲ್ ಇಸ್ಲಾಂ, ಏಜೆಂಟ್‌ಗಳ ಫಾರ್ಮ್‌ಗಳನ್ನು ಕಿತ್ತುಕೊಳ್ಳಲಾಗುತ್ತಿದೆ, ಅವರನ್ನು ಹೊರಹಾಕಲಾಗುತ್ತಿದೆ. ಮಹಿಳೆಯರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತಿಲ್ಲ. ಎಲ್ಲರೂ ಮತದಾನ ಮಾಡಲು ನಾವು ಏಜೆಂಟ್‌ಗಳನ್ನು ನಿಯೋಜಿಸಿದ್ದೇವೆ ಎಂದು ಆರೋಪಿಸಿದ್ದಾರೆ.

ನಿಮ್ತಲಾ ಪ್ರದೇಶದ ಮತಗಟ್ಟೆ ಸಂಖ್ಯೆ 140ರಲ್ಲಿ ಬೆಳಗ್ಗೆ 7.30 ಗಂಟೆಯಾದರೂ ಮತದಾನ ಆರಂಭವಾಗದೇ ವಿಳಂಬವಾಗಿದ್ದು, ಮತದಾರರಲ್ಲಿ ಆತಂಕ ಮತ್ತು ಉದ್ವಿಗ್ನತೆ ಉಂಟಾಯಿತು.

ಚುನಾವಣಾ ವೀಕ್ಷಕರು ಜನರನ್ನು ಬೆದರಿಸುತ್ತಿದ್ದಾರೆ: ಅಭಿಷೇಕ್ ಬ್ಯಾನರ್ಜಿ ಆರೋಪ

ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ ಅವರು ಭಾವನಿಪುರ ಕ್ಷೇತ್ರದಲ್ಲಿ ಮತದಾನ ಮಾಡಿದ ನಂತರ, ಚುನಾವಣಾ ವೀಕ್ಷಕರು ಜನರನ್ನು ಬೆದರಿಸಿ ಭಯಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ವೀಕ್ಷಕರು ಚುನಾವಣಾ ಆಯೋಗದ ಕಣ್ಣು-ಕಿವಿಗಳಾಗಿ ಕೆಲಸ ಮಾಡಿ ವರದಿಗಳನ್ನು ಸಲ್ಲಿಸಬೇಕು. ಆದರೆ ಅವರು ಬದಲಾಗಿ ಜನರನ್ನು ಬೆದರಿಸುತ್ತಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಬಿಜೆಪಿ ಸೂಚನೆಯಂತೆ ಕೇಂದ್ರ ಪಡೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಭಾವನಿಪುರ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಮಮತಾ ಬ್ಯಾನರ್ಜಿ, ನಮ್ಮ ಕಾರ್ಯಕರ್ತನನ್ನು ರಾತ್ರಿ ಹೇಗೆ ಹೊಡೆದಿದ್ದಾರೆ ನೋಡಿ. ಇದು ಯಾವ ರೀತಿಯ ದೌರ್ಜನ್ಯ, ಇಂತಹದ್ದೇನಾ ಮತದಾನ, ಮತದಾನವು ಶಾಂತಿಯುತವಾಗಿ ನಡೆಯಬೇಕು. ಇದು ಪ್ರಜಾಪ್ರಭುತ್ವದ ಹಬ್ಬ. ಆದರೆ ಅವರು ಇದನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಬಿಜೆಪಿ ಬಲವಂತವಾಗಿ ಚುನಾವಣೆಯನ್ನು ದುರ್ಬಳಕೆ ಮಾಡಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ನಮ್ಮ ಕಾರ್ಯಕರ್ತರು ಮತ್ತು ಜನರು ಸಾಯಲು ಸಿದ್ಧರಾಗಿದ್ದಾರೆ, ಆದರೆ ಸ್ಥಳವನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಭಯೋತ್ಪಾದನೆ ಮಾಡುತ್ತಿದ್ದಾರೆ: ವೀಕ್ಷಕರ ವಿರುದ್ಧ ಮಮತಾ ಬ್ಯಾನರ್ಜಿ ತೀವ್ರ ಟೀಕೆ

ಮತದಾನ ಪ್ರಕ್ರಿಯೆಯಲ್ಲಿ ವೀಕ್ಷಕರು ಭಯೋತ್ಪಾದನೆ ನಡೆಸುತ್ತಿದ್ದಾರೆ, ಬಿಜೆಪಿ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಹಳಷ್ಟು ವೀಕ್ಷಕರು ಹೊರಗಿನಿಂದ ಬಂದಿದ್ದಾರೆ. ಬಿಜೆಪಿ ಏನು ಹೇಳುತ್ತದೆಯೋ ಅದನ್ನೇ ಅವರು ಮಾಡುತ್ತಿದ್ದಾರೆ. ಸುತ್ತಲೂ ನೋಡಿ, ನಮ್ಮ ಎಲ್ಲಾ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ. ಇದೇನಾ ಚುನಾವಣೆ ನಡೆಯುವ ರೀತಿ? ಮತದಾನವನ್ನು ಮತದಾರರು ಮಾಡಬೇಕು, ಪೊಲೀಸರು ಅಥವಾ ಭದ್ರತಾ ಪಡೆಗಳು ಅಲ್ಲ. ಇತ್ತೀಚೆಗೆ ಕೆಲವು ಹೊಸ ಜನರನ್ನು ಕರೆತಂದಿದ್ದಾರೆ, ಅವರು ತಮಗೆ ಇಷ್ಟವಾದಂತೆ ನಡೆದುಕೊಳ್ಳುತ್ತಿದ್ದಾರೆ. ಅವರು ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.