'ಬಿಸಿಲಿನಿಂದ ಬಳಲುತ್ತಿದ್ದೀರಾ, ಒಂದು ಈರುಳ್ಳಿ ಜೇಬಲ್ಲಿ ಇಟ್ಟುಕೊಳ್ಳಿ': ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಲಹೆ; Video
ನಾನು ಯುವಕನಂತೆ ಕಾಣಬಹುದು, ಆದರೆ ನನ್ನ ಮನಸ್ಸು ಹಳೆಯ ಸಂಪ್ರದಾಯ ರೀತಿಯಲ್ಲಿ ಯೋಚನೆ ಮಾಡುತ್ತದೆ. ನಿಮ್ಮ ಜೇಬಿನಲ್ಲಿ ಒಂದು ಈರುಳ್ಳಿ ಇಟ್ಟುಕೊಳ್ಳಿ, ನಿಮಗೆ ಬಿಸಿಲಿನಿಂದ ಏನೂ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಈಗ ಎಲ್ಲಿ ನೋಡಿದರೂ ಬಿಸಿಲು, ಸೆಖೆಯದ್ದೇ ಪರಿತಾಪ, ಜನ ವಿಪರೀತ ಸೆಖೆ, ಬಿಸಿಲಿನಿಂದ ಪರಿತಪಿಸುತ್ತಿದ್ದಾರೆ. ದೇಶಾದ್ಯಂತ ಈ ವರ್ಷ ಬೇಸಿಗೆಯಲ್ಲಿ ಬಿಸಿಲಿನ ಸಮಸ್ಯೆಯಿದೆ. ಇದಕ್ಕೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಒಂದು ಸಲಹೆ ನೀಡಿದ್ದಾರೆ. ಅದು, ಕಿಸೆಯಲ್ಲಿ ಒಂದು ಈರುಳ್ಳಿ ಇಟ್ಟುಕೊಳ್ಳುವುದು.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಗೆ ಮೂರು ದಿನಗಳ ಭೇಟಿ ನೀಡಿದ್ದಾಗ, ಶಿವಪುರಿಯ ಪಿಚ್ಛೋರ್ನಲ್ಲಿ ನೂತನ ತಹಸಿಲ್ದಾರ್ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗ ಹೆಚ್ಚುತ್ತಿರುವ ತಾಪಮಾನದಿಂದ ರಕ್ಷಣೆಗೆ ಜನರು ತಮ್ಮ ಬಳಿ ಒಂದು ಈರುಳ್ಳಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾನು ಯುವಕನಂತೆ ಕಾಣಬಹುದು, ಆದರೆ ನನ್ನ ಮನಸ್ಸು ಹಳೆಯ ಸಂಪ್ರದಾಯ ರೀತಿಯಲ್ಲಿ ಯೋಚನೆ ಮಾಡುತ್ತದೆ. ನಿಮ್ಮ ಜೇಬಿನಲ್ಲಿ ಒಂದು ಈರುಳ್ಳಿ ಇಟ್ಟುಕೊಳ್ಳಿ, ನಿಮಗೆ ಬಿಸಿಲಿನಿಂದ ಏನೂ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ನಾನು ನಿಮಗೆ ಈ ಸಲಹೆಯನ್ನು ಬಿಟ್ಟಿಯಾಗಿ ನೀಡುತ್ತಿಲ್ಲ, ನಾನು ಕೂಡ ಅದನ್ನು ಪಾಲಿಸುತ್ತೇನೆ ಎಂದು ತಮ್ಮ ಕಾರಿನಿಂದ ಈರುಳ್ಳಿ ತೆಗೆದುಕೊಂಡು ಬಂದು ತೋರಿಸಿದರು. ದೇಶದ ಅನೇಕ ಭಾಗಗಳಲ್ಲಿ ತೀವ್ರ ಉಷ್ಣ ಅಲೆ ಎದುರಾಗುತ್ತಿರುವ ಸಮಯದಲ್ಲಿ ಈ ಹೇಳಿಕೆ ಜನರಲ್ಲಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ತಮ್ಮ ವೈಯಕ್ತಿಕ ಜೀವನಶೈಲಿಯ ಬಗ್ಗೆ ಮಾತನಾಡಿದ ಸಿಂಧಿಯಾ, ಇಷ್ಟೊಂದು ಬಿಸಿಲು ಇದೆ, ತಂಪು ಮಾಡೋಣ ಎಂದು ಏರ್ ಕಂಡೀಷನ್ ಬಳಸಬಾರದು ಎಂದರು. ನಾನು ನನ್ನ ಕಾರಿನಲ್ಲಿ ಪ್ರಯಾಣಿಸುವಾಗ ಏರ್ ಕಂಡೀಷನರ್ ಬಳಸುವುದಿಲ್ಲ, ಏರ್ ಕಂಡೀಷನ್ ಇರುವ ಸ್ಥಳದಲ್ಲೂ ಕುಳಿತುಕೊಳ್ಳುವುದಿಲ್ಲ. ಮೇ ಮತ್ತು ಜೂನ್ ತಿಂಗಳಲ್ಲಿ 51 ಡಿಗ್ರಿ ತಾಪಮಾನ ಇದ್ದರೂ ಜನರು ಕೇಳಿದಾಗ ನಾನು ಹೇಳುವುದು — ‘ಇದು ಚಂಬಲ್ ಚರ್ಮ’ ಎಂದು. ಮತ್ತೊಂದು ವಿಷಯ — ನಾನು ಸ್ವಲ್ಪ ಯುವಕನಂತೆ ಕಂಡರೂ ನಾನು ಹಳಬನ ರೀತಿಯೇ ಯೋಚಿಸುವುದು. ನಿಮ್ಮ ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳಿ, ನಿಮಗೆ ಏನೂ ಆಗುವುದಿಲ್ಲ ಎಂದರು.
ನಮ್ಮ ಹಿರಿಯರು ಪಾಲಿಸುತ್ತಿದ್ದ ಸಂಪ್ರದಾಯ, ಪರಂಪರೆಯ ಕ್ರಮ ವಿಧಾನಗಳನ್ನು ಮರೆಯಬಾರದು, ಆಯುರ್ವೇದದ ಪ್ರಕಾರ, ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಈರುಳ್ಳಿ ತಂಪು ಗುಣ ಹೊಂದಿದ್ದು ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಸಹಾಯಕವಾಗಿದೆ ಎಂದು ನಂಬಲಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ಸಲಾಡ್ ಸೇರಿದಂತೆ ಆಹಾರಗಳಲ್ಲಿ ಈರುಳ್ಳಿಯನ್ನು ಸಾಮಾನ್ಯವಾಗಿ ಬಳಸುತ್ತಾರೆ ಎಂದರು.
ಭಾರತದಲ್ಲಿ ತೀವ್ರ ಬೇಸಿಗೆ ಉಷ್ಣತೆ
ಉತ್ತರ ಭಾರತದ ಅನೇಕ ಭಾಗಗಳಲ್ಲಿ 42ರಿಂದ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಕೆಲವು ಪ್ರದೇಶಗಳಲ್ಲಿ ಇದು ಇನ್ನೂ ಹೆಚ್ಚಾಗಿದೆ. ಈ ಉಷ್ಣ ಅಲೆ ಸಾರ್ವಜನಿಕ ಆರೋಗ್ಯದ ಬಗ್ಗೆ ಗಂಭೀರ ಆತಂಕಗಳನ್ನು ಉಂಟುಮಾಡಿದ್ದು, ವಿಶೇಷವಾಗಿ ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆದವರ ಮೇಲೆ ಪರಿಣಾಮ ಬೀರುತ್ತಿದೆ.
ಉತ್ತರ ಪ್ರದೇಶ ಮತ್ತು ಪಶ್ಚಿಮ ರಾಜಸ್ಥಾನದ ಪ್ರದೇಶಗಳು ಹೆಚ್ಚು ಬಾಧಿತವಾಗಿದ್ದು, ಪ್ರಯಾಗ್ರಾಜ್ ಮತ್ತು ಬಾರ್ಮೇರ್ ನಗರಗಳಲ್ಲಿ ತಾಪಮಾನವು 48 ಡಿಗ್ರಿ ಸೆಲ್ಸಿಯಸ್ಗೆ ಸಮೀಪವಾಗಿದೆ. ಮಧ್ಯಪ್ರದೇಶದಲ್ಲಿಯೂ ತೀವ್ರ ಉಷ್ಣತೆ ಕಂಡುಬರುತ್ತಿದೆ.
ಪೂರ್ವ ಭಾರತದಲ್ಲಿ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಉಷ್ಣತೆ ಮತ್ತು ತೇವಾಂಶ ಎರಡೂ ಹೆಚ್ಚಿದ್ದು, ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ.
ಸಲಹೆಗಳು
ಜನರು ಬಿಸಿಲಿನ ತಾಪತ್ರಯಗಳಿಂದ ಪರಿಹಾರ ಕಂಡುಕೊಳ್ಳಲು ಸಾಕಷ್ಟು ನೀರು ಕುಡಿಯುವುದು, ಮಧ್ಯಾಹ್ನದ ಹೊತ್ತಿನಲ್ಲಿ ಆದಷ್ಟು ಮನೆಯೊಳಗೆ ಉಳಿಯುವುದು, ಉಷ್ಣ ಸಂಬಂಧಿತ ರೋಗಗಳನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


