Strait of Hormuz: 'ನೀವೇ ಅನುಮತಿ ಕೊಟ್ಟು ಈಗ ಗುಂಡು ಹಾರಿಸುತ್ತಿದ್ದೀರಿ': Iran ದಾಳಿಗೊಳಗಾದ ಭಾರತೀಯ ತೈಲ ಟ್ಯಾಂಕರ್ ಆಡಿಯೋ ವೈರಲ್!
ಹಾರ್ಮುಜ್ ಜಲಸಂಧಿಯಲ್ಲಿ (Hormuz) ಭಾರತದ ಎರಡು ತೈಲ ಟ್ಯಾಂಕರ್‌ಗಳ (Indian Oil Tanker) ಮೇಲೆ ಇರಾನ್‌ನಿಂದ (Iran) ಗುಂಡಿನ ದಾಳಿ ನಡೆದಿದೆ.

ಟೆಹ್ರಾನ್: ಪ್ರಸ್ತುತ ಜಗತ್ತಿನ ಸುದ್ದಿಮಾಧ್ಯಮಗಳ ಕೇಂದ್ರ ಬಿಂದುವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಎರಡು ತೈಲ ನೌಕೆಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದು, ಅಚ್ಚರಿ ಎಂದರೆ ಭಾರತ ಮೂಲದ ನೌಕೆಗಳಿಗೆ ಅನುಮತಿ ನೀಡಿಯೂ ಇರಾನ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಹೌದು.. ಹಾರ್ಮುಜ್ ಜಲಸಂಧಿಯಲ್ಲಿ (Hormuz) ಭಾರತದ ಎರಡು ತೈಲ ಟ್ಯಾಂಕರ್‌ಗಳ (Indian Oil Tanker) ಮೇಲೆ ಇರಾನ್‌ನಿಂದ (Iran) ಗುಂಡಿನ ದಾಳಿ ನಡೆದಿದೆ. ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರದಲ್ಲಿ ಈ ದಾಳಿ ನಡೆದಿದ್ದು, ದಾಳಿ ಬಳಿಕ ತೈಲ ಟ್ಯಾಂಕರ್‌ಗಳು ಅಲ್ಲಿಂದ ವಾಪಸ್ ಆಗಿವೆ ಎಂದು ವರದಿಯಾಗಿದೆ.
ಜಲಸಂಧಿಯಲ್ಲಿ ಹಡಗುಗಳು ಬರುತ್ತಿದ್ದಂತೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (IRGC) ಎರಡು ಗನ್‌ಬೋಟ್‌ಗಳು ನೌಕೆಗಳತ್ತ ಧಾವಿಸಿದ್ದು, ಈ ವೇಳೆ ಯಾವುದೇ ರೇಡಿಯೋ ಸಂದೇಶ ನೀಡದೆ ಏಕಾಏಕಿ ಗುಂಡಿನ ದಾಳಿ ನಡೆಸಿವೆ ಎಂದು ಟ್ಯಾಂಕರ್‌ನ ಕ್ಯಾಪ್ಟನ್ ವರದಿ ಮಾಡಿದ್ದಾರೆ.
ಒಮನ್‌ನ ಈಶಾನ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಈ ದಾಳಿ ನಡೆದಿದ್ದು, ಟ್ಯಾಂಕರ್ ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಯುಕೆ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ ಮಾಹಿತಿ ಹಂಚಿಕೊಂಡಿದೆ.
ಅನುಮತಿ ನೀಡಿ ಹೊಡೆಯಿತಾ ಇರಾನ್?
ಇನ್ನು ಈ ದಾಳಿಗೂ ಮುನ್ನ ಭಾರತದ ಧ್ವಜವಿದ್ದ ತೈಲ ಟ್ಯಾಂಕರ್ ಗೆ ಹಾರ್ಮುಜ್ ಮೂಲಕ ಹಾದುಹೋಗಲು ಇರಾನ್ ಅನುಮತಿ ನೀಡಿತ್ತು ಎನ್ನಲಾಗಿದೆ. ಅದಾಗ್ಯೂ ಹಾರ್ಮುಜ್ ನಲ್ಲಿ ಏಕಾಏಕಿ ಭಾರತದ ಟ್ಯಾಂಕರ್ ಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಇದು ಭಾರತ ಮೂಲದ ನಾವಿಕರನ್ನು ಬೆಚ್ಚಿ ಬೀಳಿಸಿದ್ದು ಭಾರಿ ಸುದ್ದಿಗೆ ಗ್ರಾಸವಾಗಿದೆ.
ಆಡಿಯೋ ವೈರಲ್
ಇನ್ನು ಭಾರತೀಯ ಟ್ಯಾಂಕರ್ ಗಳ ಮೇಲೆ ಇರಾನ್ ನೌಕಾಪಡೆ ದಾಳಿ ಮಾಡುವಾಗ ತೈಲ ಟ್ಯಾಂಕರ್ ಗಳಲ್ಲಿದ್ದ ನಾವಿಕರು ಇರಾನ್ ನೌಕಾಪಡೆ ಜೊತೆ ಮಾತನಾಡಿರುವ ಆಡಿಯೋ ಟೇಪ್ ವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಈ ಆಡಿಯೋದಲ್ಲಿ ನಾವಿಕರು, 'ನೀವು ನಮಗೆ ಹೋಗಲು ಅನುಮತಿ ನೀಡಿದ್ದೀರಿ. ನನ್ನ ಹೆಸರು ನಿಮ್ಮ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ನೀವು ಈಗ ಗುಂಡು ಹಾರಿಸುತ್ತಿದ್ದೀರಿ. ನಾವು ಹಿಂತಿರುಗಲು ಬಿಡಿ!" - ಇರಾನಿನ ನೌಕಾಪಡೆಗೆ ಮನವಿ ಮಾಡುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಅಂತೆಯೇ ಮೊದಲು ಅನುಮತಿ ನೀಡಿ ಬಳಿಕ ಹಿಂಬಾಲಿಸಿಕೊಂಡು ಬಂದು ಗುಂಡಿನ ದಾಳಿ ಮಾಡಿದ ಇರಾನ್ ನಡೆ ವಿರುದ್ಧವೂ ವ್ಯಾಪಕ ಅನುಮಾನಗಳು ಮೂಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



