ರೋಗಿಗಳು ಅಂದ್ರೆ ಹಣ ಮಾಡೋ ಯಂತ್ರಗಳು, ಅವಶ್ಯಕತೆ ಇಲ್ಲದಿದ್ರೂ ICU: ಮೊದಲ ದಿನವೇ ರಾಜಿನಾಮೆ ನೀಡಿ ಖಾಸಗಿ ಆಸ್ಪತ್ರೆ ಮಾಫಿಯಾ ಬಿಚ್ಚಿಟ್ಟ ವೈದ್ಯೆ!
ಕೆಲಸಕ್ಕೆ ಸೇರಿದ ಮೊದಲ ದಿನವೇ ಆಸ್ಪತ್ರೆಯ ಆಡಳಿತ ಮಂಡಳಿಯ ಅಮಾನವೀಯ ಧೋರಣೆ ಮತ್ತು ರೋಗಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಕಂಡು ಬೆಚ್ಚಿಬಿದ್ದ ಅವರು, ಕೂಡಲೇ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಚಂಡೀಗಢ: ಚಂಡೀಗಢದ ಯುವ ವೈದ್ಯೆಯೊಬ್ಬರು ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜಿನಾಮೆ ನೀಡಿದ್ದು, ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಯಲ್ಲಿ ತಮಗಾದ ಕರಾಳ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ.
ಹೌದು.. "ವೈದ್ಯೋ ನಾರಾಯಣೋ ಹರಿ" ಎಂದರೆ ವೈದ್ಯರು ಸಾಕ್ಷಾತ್ ನಾರಾಯಣನ (ವಿಷ್ಣುವಿನ) ಅಥವಾ ದೇವರ ಸ್ವರೂಪ ಎಂದು ಅರ್ಥ. ರೋಗಿಗಳಿಗೆ ಮರುಜೀವ ನೀಡಿ, ಕಾಯಿಲೆಗಳನ್ನು ವಾಸಿಮಾಡುವ ಮೂಲಕ ವೈದ್ಯರು ದೈವಿಕ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ನಂಬಿಕೆಯಿಂದ ಈ ಸಂಸ್ಕೃತ ಸೂಕ್ತಿಯನ್ನು ಬಳಸಲಾಗುತ್ತದೆ.
ಇದು ವೈದ್ಯರ ನಿಸ್ವಾರ್ಥ ಸೇವೆ ಮತ್ತು ರೋಗಿಗಳ ವಿಶ್ವಾಸವನ್ನು ಎತ್ತಿಹಿಡಿಯುತ್ತದೆ.
ಆದರೆ ಇದೇ ವೈದ್ಯರು ರೋಗಿಗಳನ್ನು ಹಣ ಮಾಡೋ ಯಂತ್ರಗಳ ರೀತಿ ನೋಡುತ್ತಿದ್ದಾರೆ ಎಂದು ಯುವ ವೈದ್ಯೆ ಆರೋಪಿಸಿದ್ದಾರೆ.
ಮೊದಲ ದಿನವೇ ಕೆಲಸಕ್ಕೆ ರಾಜಿನಾಮೆ ನೀಡಿದ ಯುವ ವೈದ್ಯೆ
ವೈದ್ಯೆ ಡಾ. ಪ್ರಭ್ಲೀನ್ ಕೌರ್ ಚಂಡೀಗಢದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ವೈದ್ಯೆಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ, ಕೆಲಸಕ್ಕೆ ಸೇರಿದ ಮೊದಲ ದಿನವೇ ಆಸ್ಪತ್ರೆಯ ಆಡಳಿತ ಮಂಡಳಿಯ ಅಮಾನವೀಯ ಧೋರಣೆ ಮತ್ತು ರೋಗಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಕಂಡು ಬೆಚ್ಚಿಬಿದ್ದ ಅವರು, ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ರೋಗಿಗಳು ಅಂದ್ರೆ ಹಣ ಮಾಡೋ ಯಂತ್ರಗಳು
ಆಸ್ಪತ್ರೆಯಲ್ಲಿ ತಮಗಾದ ಕರಾಳ ಅನುಭವವನ್ನು ಪ್ರಬ್ಲೀನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಖಾಸಗಿ ಆಸ್ಪತ್ರೆಗಳ ಮಾಫಿಯಾವನ್ನು ಬಟಾಬಯಲು ಮಾಡಿದ್ದಾರೆ. ರೋಗಿಗಳು ಅಂದ್ರೆ ಹಣ ಮಾಡೋ ಯಂತ್ರಗಳು.. ಸುಖಾಸುಮ್ಮನೆ ಅಗತ್ಯವಿಲ್ಲದಿದ್ದರೂ ಐಸಿಯುಗೆ ಅಡ್ಮಿಟ್ ಮಾಡಲು ಹೇಳುತ್ತಿದ್ದಾರೆ. ಆ ಮೂಲಕ ಹಣ ಮಾಡುವ ಉದ್ದೇಶ ಎಂದು ಪ್ರಭ್ಲೀನ್ ಹೇಳಿದ್ದಾರೆ. ಪ್ರಬ್ಲೀನ್ ಕೌರ್ ಮಾಡಿರುವ ಈ ವಿಡಿಯೋ ಇದೀಗ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇಷ್ಟಕ್ಕೂ ವೈದ್ಯೆಯ ವಿಡಿಯೋದಲ್ಲೇನಿದೆ?
ಆಸ್ಪತ್ರೆಯ ವಿರುದ್ಧ ಡಾ. ಪ್ರಭ್ಲೀನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಸ್ಪತ್ರೆಯ ‘ಕಲೆಕ್ಷನ್’ ದಂಧೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳಿಗೂ ಪ್ರಾಥಮಿಕ ಚಿಕಿತ್ಸೆ ನೀಡುವ ಬದಲು, ಹಣ ಸುಲಿಗೆ ಉದ್ದೇಶದಿಂದ ನೇರವಾಗಿ ಐಸಿಯು (ICU) ಗೆ ದಾಖಲಿಸಲಾಗುತ್ತಿದೆ.
ಆಸ್ಪತ್ರೆಯ ಆದಾಯವನ್ನು ಹೆಚ್ಚಿಸಲು ವೈದ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ. ರೋಗಿಗಳಿಗೆ ಅಗತ್ಯವಿಲ್ಲದಿದ್ದರೂ ದುಬಾರಿ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಈ ಸಂಪೂರ್ಣ ದಂಧೆಯು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ನೇರ ನಿಯಂತ್ರಣದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ವೃತ್ತಿ ನೈತಿಕತೆಯೇ ಮುಖ್ಯ
ಅಂತೆಯೇ ವಿಡಿಯೋದಲ್ಲಿ ಭಾವುಕರಾಗಿಯೇ ಮಾತನಾಡಿದ ಡಾ. ಪ್ರಭ್ಲೀನ್, 'ನನಗೆ ಸಂಬಳ ಅಥವಾ ದೊಡ್ಡ ಹುದ್ದೆಗಿಂತ ರೋಗಿಗಳ ಸುರಕ್ಷತೆ ಮತ್ತು ವೈದ್ಯಕೀಯ ವೃತ್ತಿಯ ನೈತಿಕತೆಯೇ ಮುಖ್ಯ. ರೋಗಿಗಳನ್ನು ಲೂಟಿ ಮಾಡುವ ಇಂತಹ ವ್ಯವಸ್ಥೆಯಲ್ಲಿ ನಾನು ಭಾಗಿಯಾಗಲಾರೆ. ಹೀಗಾಗಿ ನನ್ನ ಕೆಲಸಕ್ಕೆ ರಾಜಿನಾಮೆ ನೀಡಿರುವುದಾಗಿ ಎಂದು ಹೇಳಿದ್ದಾರೆ.
ಪ್ರಭ್ಲೀನ್ ಕೌರ್ ಅವರ ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಯುವ ವೈದ್ಯೆಯ ಧೈರ್ಯದ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ಮತ್ತು ಬೆಂಬಲ ವ್ಯಕ್ತವಾಗಿದೆ. ನೆಟ್ಟಿಗರು ಆಸ್ಪತ್ರೆಯ ಹೆಸರನ್ನು ಬಹಿರಂಗಪಡಿಸಿ ಅದರ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




