ದೇಶ

ಮಗನ ಅನಾರೋಗ್ಯ ಗುಣವಾಗಲೆಂದು 13 ವರ್ಷದ ಪುತ್ರಿಯನ್ನೇ ಬಲಿ ಕೊಟ್ಟ ತಾಯಿ!

ರೇಷ್ಮಿ ದೇವಿಯ ಕಿರಿಯ ಮಗ ದೈಹಿಕ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ. ಆತನ ಚಿಕಿತ್ಸೆಗಾಗಿ ರೇಷ್ಮಿ ದೇವಿ ಸ್ಥಳೀಯ ಮಾಂತ್ರಿಕಳೊಬ್ಬಳನ್ನು ಭೇಟಿಯಾಗುತ್ತಿದ್ದಳು.

ಮಗನ ಅನಾರೋಗ್ಯ ಗುಣವಾಗಲೆಂದು 13 ವರ್ಷದ ಪುತ್ರಿಯನ್ನೇ ಬಲಿ ಕೊಟ್ಟ ತಾಯಿ!
ಆರೋಪಿಗಳನ್ನು ಬಂಧಿಸಿರುವ ಪೋಲೀಸರು
Published On :

ಜಾರ್ಖಂಡ್‌: ಮಗನ ಅನಾರೋಗ್ಯ ಗುಣಪಡಿಸಲು ಹೆತ್ತ ತಾಯಿಯೇ ತನ್ನ ಮಗಳನ್ನು ಬಲಿ ಕೊಟ್ಟ ಆಘಾತಕಾರಿ ಪ್ರಕರಣ ಜಾರ್ಖಂಡ್ ನ ಕುಸುಂಬ ನಗರದಲ್ಲಿ ನಡೆದಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ 35 ವರ್ಷದ ತಾಯಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ತಡರಾತ್ರಿ ಅಧಿಕಾರಿಗಳು ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳು ಸಂತ್ರಸ್ತೆಯ ತಾಯಿ ರೇಷ್ಮಿ ದೇವಿ, 55 ವರ್ಷದ ಮಾಟಗಾರ್ತಿ ಶಾಂತಿ ದೇವಿ ಮತ್ತು 40 ವರ್ಷದ ಭೀಮ್ ರಾಮ್ ಎಂದು ಗುರುತಿಸಲಾಗಿದೆ.

ಹಜಾರಿಬಾಗ್ ಎಸ್‌ಪಿ ಅಂಜನಿ ಅಂಜನ್ ಮತ್ತು ಡಿಐಜಿ ಅಂಜನಿ ಝಾ ಅವರ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ರೇಷ್ಮಿ ದೇವಿಯ ಕಿರಿಯ ಮಗ ದೈಹಿಕ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ. ಆತನ ಚಿಕಿತ್ಸೆಗಾಗಿ ರೇಷ್ಮಿ ದೇವಿ ಸ್ಥಳೀಯ ಮಾಂತ್ರಿಕಳೊಬ್ಬಳನ್ನು ಭೇಟಿಯಾಗುತ್ತಿದ್ದಳು. ಕನ್ಯೆಯನ್ನು ಬಲಿ ಕೊಟ್ಟರೆ ನಿನ್ನ ಮಗ ಗುಣಮುಖನಾಗುತ್ತಾನೆ ಎಂದು ಆ ಮಾಟಗಾರ್ತಿ ಹೇಳಿದ್ದಳಂತೆ

ಪೊಲೀಸರ ಪ್ರಕಾರ, ಮಾರ್ಚ್ 24 ರಂದು, ಊರಿನವರೆಲ್ಲಾ ರಾಮ ನವಮಿ ಹಬ್ಬದ ಸಂಭ್ರಮದಲ್ಲಿದ್ದಾಗ, ಅಷ್ಟಮಿ ರಾತ್ರಿಯಂದು ಈ ಕೊಲೆ ನಡೆದಿದೆ. ಅಂದು ಬಾಲಕಿಯನ್ನು ಶಾಂತಿ ದೇವಿಯ ಮನೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಯ ತಾಯಿ ಮತ್ತು ಭೀಮ್ ರಾಮ್ ಸೇರಿ ಕತ್ತು ಹಿಸುಕಿ ಕೊಂದಿದ್ದಾರೆ. ಪೂಜೆಗಾಗಿ ರಕ್ತ ಬೇಕೆಂದು ಭೀಮ್ ರಾಮ್ ಬಾಲಕಿಯ ತಲೆಗೆ ಹೊಡೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಮೂವರೂ ಸೇರಿ ಶವವನ್ನು ತೋಟವೊಂದರಲ್ಲಿ ಹೂತು ಹಾಕಿದ್ದಾರೆ. ಆರಂಭದಲ್ಲಿ, ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳಲ್ಲಿ ಲೈಂಗಿಕ ದೌರ್ಜನ್ಯದ ಯಾವುದೇ ಕುರುಹು ಪತ್ತೆಯಾಗಿಲ್ಲ.

ಪ್ರಕರಣವು ನ್ಯಾಯಾಂಗ ಗಮನ ಸೆಳೆದಿದ್ದು, ಜಾರ್ಖಂಡ್ ಹೈಕೋರ್ಟ್ ಮಾಧ್ಯಮ ವರದಿಗಳ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ತೆಗೆದುಕೊಂಡು ರಾಜ್ಯ ಆಡಳಿತ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ

ಭೀಮ್ ರಾಮ್ ತನ್ನ ಅತ್ತಿಗೆಯ ಕೊಲೆ ಸೇರಿದಂತೆ ಇನ್ನೂ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗವು ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ 10 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ.

ಈ ಘಟನೆಯನ್ನು ತೀವ್ರ ಕಳವಳಕಾರಿ ಎಂದು ಬಣ್ಣಿಸಿದ ಆಯೋಗವು, ಮಹಿಳೆಯರು ಮತ್ತು ಹುಡುಗಿಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.