ದೇಶ

'ನಾನು ಕೂಡ ಚಾಯ್ ವಾಲಾ ಆಗಿದ್ದೆ, ಅಸ್ಸಾಂನ ಟೀ ಗಾರ್ಡನ್ ನಲ್ಲಿ ಸಮಯ ಕಳೆದು ಬಾಲ್ಯಜೀವನವನ್ನು ಸ್ಮರಿಸಿಕೊಂಡ ಪ್ರಧಾನಿ ಮೋದಿ'; Photos

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಡಿಬ್ರುಗಢದ ಟೀ ತೋಟಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳಾ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

'ನಾನು ಕೂಡ ಚಾಯ್ ವಾಲಾ ಆಗಿದ್ದೆ, ಅಸ್ಸಾಂನ ಟೀ ಗಾರ್ಡನ್ ನಲ್ಲಿ ಸಮಯ ಕಳೆದು ಬಾಲ್ಯಜೀವನವನ್ನು ಸ್ಮರಿಸಿಕೊಂಡ ಪ್ರಧಾನಿ ಮೋದಿ'; Photos
ಡಿಬ್ರುಗಢದ ಟೀ ಗಾರ್ಡನ್ ನಲ್ಲಿ ಮಹಿಳಾ ಕಾರ್ಮಿಕರ ಜೊತೆ ಪ್ರಧಾನಿ ಮೋದಿ
Published On :

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಲಹೊತ್ತು ಗುವಾಹಟಿ ಸಮೀಪ ಡಿಬ್ರುಗಢದ ಟೀ ಗಾರ್ಡನ್ ಗೆ ಹೋಗಿ ಚಹಾದ ಎಲೆಗಳನ್ನು ಕಿತ್ತು ಕಾರ್ಮಿಕ ಮಹಿಳೆಯರ ಯೋಗಕ್ಷೇಮ ವಿಚಾರಿಸಿ ಸಮಯ ಕಳೆದಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಡಿಬ್ರುಗಢದ ಟೀ ತೋಟಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳಾ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಏಪ್ರಿಲ್ 9ರ ಮತದಾನಕ್ಕೆ ಮುನ್ನ, ಬಿಜೆಪಿ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಅವರು ಗೋಗಾಮುಖ್ ಮತ್ತು ಬಿಸ್ವನಾಥ್‌ನಲ್ಲಿ ಇಂದು ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

Story image

“ಟೀ ಅಸ್ಸಾಂನ ಆತ್ಮ” - ಮೋದಿ
“ಟೀ ಅಸ್ಸಾಂನ ಆತ್ಮವಾಗಿದೆ! ಇಲ್ಲಿ ಉತ್ಪಾದನೆಯಾಗುವ ಟೀ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಇಂದು ಬೆಳಗ್ಗೆ ಡಿಬ್ರುಗಢದಲ್ಲಿ ಟೀ ತೋಟಕ್ಕೆ ಭೇಟಿ ನೀಡಿ ಮಹಿಳಾ ಕಾರ್ಮಿಕರೊಂದಿಗೆ ಮಾತನಾಡಿದ್ದು ಬಹಳ ಸ್ಮರಣೀಯ ಅನುಭವವಾಗಿತ್ತು,” ಎಂದು ಮೋದಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಹಲವು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Story image

ಇಂದು ಅಸ್ಸಾಂನಲ್ಲಿ ಪ್ರಚಾರ ಸಭೆಗಳು
ಕಾರ್ಯಕ್ರಮದ ಪ್ರಕಾರ, ಮೋದಿಯವರು ಇಂದು ಮೊದಲು ಧೇಮಾಜಿ ಜಿಲ್ಲೆಯ ಗೋಗಾಮುಖ್‌ನಲ್ಲಿ ಸಭೆ ನಡೆಸಿ, ನಂತರ ಬಿಸ್ವನಾಥ್ ಜಿಲ್ಲೆಗೆ ತೆರಳಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಎರಡೂ ಸ್ಥಳಗಳಲ್ಲಿ ಹಿರಿಯ ಬಿಜೆಪಿ ನಾಯಕರು ಹಾಗೂ ರಾಜ್ಯ ಸಚಿವರು ಭಾಗವಹಿಸುವ ಸಾಧ್ಯತೆ ಇದೆ ಎಂದು ಪಕ್ಷ ಮೂಲಗಳು ತಿಳಿಸಿವೆ.

ಮೊದಲ ಸಭೆಯಲ್ಲಿ ಧೇಮಾಜಿ ಮತ್ತು ಧಾಕುಾಖಾನಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ರಾಜ್ಯ ಸಚಿವ ರಣೋಜ್ ಪೇಗು ಮತ್ತು ನಾಬಾ ಕುಮಾರ್ ಡೋಲೆ ಅವರ ಪರವಾಗಿ ಮೋದಿ ಪ್ರಚಾರ ನಡೆಸಲಿದ್ದಾರೆ. ಎರಡನೇ ಸಭೆಯಲ್ಲಿ ಬೆಹಾಲಿಯಲ್ಲಿ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಸಚಿವ ಪಲ್ಲಬ್ ಲೋಚನ್ ದಾಸ್ ಪರವಾಗಿ ಪ್ರಚಾರ ಮಾಡಲಿದ್ದಾರೆ.

Story image

ಸಭಾ ಸ್ಥಳಗಳಲ್ಲಿ ಭದ್ರತಾ ಕ್ರಮಗಳನ್ನು ಕಠಿಣಗೊಳಿಸಲಾಗಿದ್ದು, ಕೇಂದ್ರ ಭದ್ರತಾ ಪಡೆಗಳು ಹಾಗೂ ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಸ್ಸಾಂಗೆ ಬಿಜೆಪಿ ಘೋಷಣಾಪತ್ರ ಬಿಡುಗಡೆ
ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಸ್ಸಾಂ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಸ್ಥಳೀಯ ಜನರ ಭೂಮಿ, ಪರಂಪರೆ ಮತ್ತು ಗೌರವವನ್ನು ರಕ್ಷಿಸುವುದಾಗಿ ಹಾಗೂ 5 ಲಕ್ಷ ಕೋಟಿ ರೂಪಾಯಿ ಮೂಲಸೌಕರ್ಯ ಹೂಡಿಕೆ ಮಾಡುವುದಾಗಿ ಭರವಸೆ ನೀಡಲಾಗಿದೆ.

Story image

‘ಸಂಕಲ್ಪ ಪತ್ರ’ದಲ್ಲಿ 31 ಭರವಸೆಗಳಿದ್ದು, “ಬಾಂಗ್ಲಾದೇಶಿ ಮಿಯಾ”ರಿಂದ ಅಕ್ರಮವಾಗಿ ಹಿಡಿದ ಭೂಮಿಯನ್ನು ಮರಳಿ ಪಡೆಯುವುದು, ಸಮಾನ ನಾಗರಿಕ ಸಂಹಿತೆ (UCC) ಜಾರಿಗೆ ತರುವುದು ಮತ್ತು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ಸೇರಿವೆ.

ಈ ಘೋಷಣಾಪತ್ರದಲ್ಲಿ 1950ರ ‘ಇಮಿಗ್ರಾಂಟ್ಸ್ (ಎಕ್ಸ್‌ಪಲ್ಶನ್ ಫ್ರಮ್ ಅಸ್ಸಾಂ) ಕಾಯ್ದೆ’ ಜಾರಿಗೆ ತಂದು ಅಕ್ರಮ ವಲಸಿಗರನ್ನು ಗುರುತಿಸಿ ಹೊರಹಾಕುವ ಪ್ರಕ್ರಿಯೆಯನ್ನು ವೇಗಗೊಳಿಸುವುದಾಗಿ ಹೇಳಲಾಗಿದೆ.

Story image

ಮೂರು ತಿಂಗಳಲ್ಲಿ UCC ಜಾರಿ — ಸಿಎಂ ಹೇಳಿಕೆ
ಇದಕ್ಕೂ ಮೊದಲು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮೂರು ತಿಂಗಳಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.

ಅದು ರಾಜ್ಯದ ಜಂಜಾತಿ ಮತ್ತು ಇತರ ಸಮುದಾಯಗಳ ಹಕ್ಕುಗಳಿಗೆ ಧಕ್ಕೆಯಾಗದಂತೆ ಜಾರಿಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ‘ಲವ್ ಮತ್ತು ಲ್ಯಾಂಡ್ ಜಿಹಾದ್’ ವಿರುದ್ಧ ಕಠಿಣ ಕಾನೂನು ತರಲಾಗುವುದು ಹಾಗೂ ಜಿಲ್ಲಾ ಆಯುಕ್ತರಿಗೆ 24 ಗಂಟೆಗಳೊಳಗೆ ಅಕ್ರಮ ವಲಸಿಗರನ್ನು ಹೊರಹಾಕುವ ಅಧಿಕಾರ ನೀಡಲಾಗುವುದು ಎಂದು ಹೇಳಿದ್ದಾರೆ.

ನಾನು ಕೂಡ ಚಾಯ್ ವಾಲಾ

ನಾನು ಕೂಡ ಚಾಯ್ ವಾಲಾ ಆಗಿದ್ದೆ, ಚಿಕ್ಕವನಿದ್ದಾಗ ಚಹಾ ಮಾರುತ್ತಿದ್ದೆ. ನನ್ನ ಹಳ್ಳಿಗೆ ಹೋಗಿ ಚಹಾ ಮಾರಾಟ ಕೂಡ ಮಾಡುತ್ತಿದ್ದೆ. ನೀವು ಇಂದು ಕಷ್ಟಪಡುತ್ತಿರುವಾಗ ನನ್ನ ಹಳೆಯ ದಿನಗಳು ನೆನಪಿಗೆ ಬರುತ್ತವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.