'ಬಿಹಾರದಲ್ಲಿ ಗೆಲುವು, ಮುಂದಿನ ಟಾರ್ಗೆಟ್ ಪಶ್ಚಿಮ ಬಂಗಾಳ': ಎನ್ಡಿಎ ಮುನ್ನಡೆ ಬಳಿಕ ಗಿರಿರಾಜ್ ಸಿಂಗ್
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 122 ಸ್ಥಾನಗಳ ಬಹುಮತದ ಗಡಿಯನ್ನು ದಾಟಿದೆ ಮತ್ತು ಸದ್ಯ 166 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಿಹಾರದಲ್ಲಿ ಗೆಲುವು ನಮ್ಮದೆ, ನಮ್ಮ ಮುಂದಿನ ಗುರಿ ಪಶ್ಚಿಮ ಬಂಗಾಳ ಎಂದು ಹೇಳಿದ್ದಾರೆ.
'ಅರಾಜಕತೆಯ ಸರ್ಕಾರ ರಚನೆಯಾಗುವುದು ಬೇಡವೆಂದು ಬಿಹಾರವು ಮೊದಲೇ ನಿರ್ಧರಿಸಿತ್ತು. ಬಿಹಾರದ ಯುವಕರು ಬುದ್ಧಿವಂತರು. ಇದು ಅಭಿವೃದ್ಧಿಯ ಗೆಲುವು. ನಾವು ಬಿಹಾರವನ್ನು ಗೆದ್ದಿದ್ದೇವೆ. ಈಗ ಬಂಗಾಳದ ಸರದಿ' ಎಂದು ಸಚಿವರು ಹೇಳಿದರು.
'ಬಿಹಾರವು ಅವ್ಯವಸ್ಥೆ, ಭ್ರಷ್ಟಾಚಾರ ಅಥವಾ ಲೂಟಿಯ ಸರ್ಕಾರವನ್ನು ಒಪ್ಪುವುದಿಲ್ಲ ಎಂಬುದು ಮೊದಲ ದಿನದಿಂದಲೇ ಸ್ಪಷ್ಟವಾಗಿತ್ತು. ಜನರು ಶಾಂತಿ, ನ್ಯಾಯ ಮತ್ತು ಅಭಿವೃದ್ಧಿಯನ್ನು ಆರಿಸಿಕೊಂಡರು. ಇಂದಿನ ಯುವಕರು ಆ ಹಿಂದಿನ ದಿನಗಳನ್ನು ನೋಡದಿದ್ದರೂ, ಅವರ ಹಿರಿಯರು ನೋಡಿದ್ದರು. ತೇಜಸ್ವಿ ಯಾದವ್ ಅಲ್ಪಾವಧಿಗೆ ಸರ್ಕಾರದಲ್ಲಿದ್ದಾಗಲೂ, ಜನರು ಅವ್ಯವಸ್ಥೆಯನ್ನು ಹರಡುವ ಪ್ರಯತ್ನವನ್ನು ನೋಡಿದರು' ಎಂದು ಹೇಳಿದರು.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 122 ಸ್ಥಾನಗಳ ಬಹುಮತದ ಗಡಿಯನ್ನು ದಾಟಿದೆ ಮತ್ತು ಸದ್ಯ 166 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ತೇಜಸ್ವಿ ಯಾದವ್ ಅವರ ಆರ್ಜೆಡಿ ನೇತೃತ್ವದ ವಿರೋಧ ಪಕ್ಷಗಳ ಮಹಾಘಟಬಂಧನ್ 59 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ವಿಫಲವಾಗುವ ನಿರೀಕ್ಷೆಯಿದ್ದರೂ, ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ರಾಜ್ಯದಲ್ಲಿ ಆಡಳಿತಾರೂಢ ಎನ್ಡಿಎ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಮತ್ತು ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಒಂಬತ್ತು ಸಮೀಕ್ಷೆಗಳ ಪ್ರಕಾರ, ಆಡಳಿತಾರೂಢ ಎನ್ಡಿಎ 147 ಮತ್ತು ಮಹಾಮೈತ್ರಿಕೂಟ 90 ಸ್ಥಾನಗಳನ್ನು ಪಡೆಯಲಿದೆ ಎಂದು ಸೂಚಿಸಿದೆ. ಆರ್ಜೆಡಿ 57 ರಿಂದ 69 ಸ್ಥಾನಗಳನ್ನು ಗಳಿಸಲಿದೆ. ಕಳೆದ ಬಾರಿ 75 ಸ್ಥಾನ ಗಳಿಸಿತ್ತು. ಕಳೆದ ಬಾರಿ 19 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 14ಕ್ಕೆ ಇಳಿಯುತ್ತದೆ. ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು ಒಂದು ಸ್ಥಾನವನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವು ಎನ್ಡಿಎಗೆ ಗೆಲುವು ತಂದುಕೊಟ್ಟರೆ ರಾಜ್ಯದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್ ಕುಮಾರ್ ಅವರು ಸತತ ಐದನೇ ಅವಧಿಗೆ ಮುಖ್ಯಮಂತ್ರಿ ಹುದ್ದೆಯನ್ನು ಏರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



