ಪಾಕಿಸ್ತಾನಿ ಮಹಿಳೆ ಮದುವೆಯಾಗಿದ್ದಕ್ಕೆ ಸೇವೆಯಿಂದ ವಜಾ; ಹೈಕೋರ್ಟ್ ಮೆಟ್ಟಿಲೇರಿದ CRPF ಯೋಧ
ತಾನು ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾಗುವ ವಿಚಾರವನ್ನು ಸಿಆರ್ಪಿಎಫ್ ಪ್ರಧಾನ ಕಚೇರಿಗೆ ತಿಳಿಸಿದ್ದೆ ಎಂದು ಅಹ್ಮದ್ ಹೇಳಿಕೊಂಡಿದ್ದಾರೆ.

ಶ್ರೀನಗರ: ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾದ ಕಾರಣ ಸೇವೆಯಿಂದ ವಜಾಗೊಂಡ ಸಿಆರ್ಪಿಎಫ್ ಯೋಧ ಮುನೀರ್ ಅಹ್ಮದ್ ಅವರು, ತಮ್ಮ ವಜಾ ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅಹ್ಮದ್ ತಮ್ಮ ವಕೀಲ, ಬಿಜೆಪಿ ನಾಯಕರಾದ ಅಂಕುರ್ ಶರ್ಮಾ ಮೂಲಕ ಹೈಕೋರ್ಟ್ನ ಜಮ್ಮು ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ವಾನಿ ಅವರು, ಪ್ರತಿವಾದಿಗಳಾದ ಸಿಆರ್ಪಿಎಫ್ ಮಹಾನಿರ್ದೇಶಕರು ಮತ್ತು ಭೋಪಾಲ್(ಮಧ್ಯಪ್ರದೇಶ) ದಲ್ಲಿರುವ ಸಿಆರ್ಪಿಎಫ್ನ 41 ಬೆಟಾಲಿಯನ್ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಸೋದ್ರಾ, ಸುಂದರ್ಬಾನಿಯಲ್ಲಿರುವ 72 ಬೆಟಾಲಿಯನ್ನ ಕಮಾಂಡೆಂಟ್ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಜೂನ್ 30ಕ್ಕೆ ನಿಗದಿಯಾಗಿರುವ ಮುಂದಿನ ವಿಚಾರಣೆಯ ದಿನಾಂಕದಂದು ಅಥವಾ ಅದಕ್ಕೂ ಮೊದಲು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನ್ಯಾಯಾಲಯ, ಪ್ರತಿವಾದಿಗಳಿಗೆ ಸೂಚಿಸಿದೆ.
2017 ರಲ್ಲಿ ಸಿಆರ್ಪಿಎಫ್ಗೆ ಸೇರಿ ಛತ್ತೀಸ್ಗಢ, ಬಿಹಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಮಧ್ಯಪ್ರದೇಶದಲ್ಲಿ ಸೇವೆ ಸಲ್ಲಿಸಿರುವ ಮುನೀರ್ ಅಹ್ಮದ್ ಅವರನ್ನು ಕಳೆದ ಮೇ 2 ರಂದು ಪಾಕಿಸ್ತಾನಿ ಮಹಿಳೆ ಮೆನಾಲ್ ಖಾನ್ ಅವರನ್ನು ವಿವಾಹವಾದ ಕಾರಣ ಸೇವೆಯಿಂದ ವಜಾಗೊಳಿಸಲಾಗಿದೆ.
ತಾನು ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾಗುವ ವಿಚಾರವನ್ನು ಸಿಆರ್ಪಿಎಫ್ ಪ್ರಧಾನ ಕಚೇರಿಗೆ ತಿಳಿಸಿದ್ದೆ ಎಂದು ಅಹ್ಮದ್ ಹೇಳಿಕೊಂಡಿದ್ದಾರೆ. "ನನ್ನ ಸಂಬಂಧಿಯೂ ಆಗಿರುವ ಪಾಕಿಸ್ತಾನಿ ಪ್ರಜೆ ಮೆನಾಲ್ ಖಾನ್ ಅವರೊಂದಿಗಿನ ನನ್ನ ವಿವಾಹವನ್ನು ನಮ್ಮ ಹಿರಿಯರು ನನ್ನ ಬಾಲ್ಯದಲ್ಲಿಯೇ ನಿರ್ಧರಿಸಿದ್ದರು. 2022 ರಲ್ಲಿ, ನಾನು ಪಾಕಿಸ್ತಾನಿ ಪ್ರಜೆಯನ್ನು (ಮೆನಾಲ್ ಖಾನ್) ಮದುವೆಯಾಗುವ ನನ್ನ ಉದ್ದೇಶವನ್ನು ಸಿಆರ್ಪಿಎಫ್ ಅಧಿಕಾರಿಗಳಿಗೆ ತಿಳಿಸಿದ್ದೆ ಮತ್ತು ಮದುವೆಗೆ ಅನುಮತಿ ಕೋರಿದ್ದೆ. 24/01/2023 ರಂದು ಸಿಆರ್ಪಿಎಫ್ ತನಗೆ ಬರೆದ ಪತ್ರದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ನಾನು 18/10/2023 ರಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿದೆ. ಮತ್ತೆ, 05/11/2023 ರಂದು, ಮೆನಾಲ್ ಅವರೊಂದಿಗಿನ ವಿವಾಹಕ್ಕೆ ನಾನು ಅನುಮತಿ/ಎನ್ಒಸಿ ಕೋರಿದೆ" ಎಂದು ಮುನೀರ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಭಾರತೀಯ ಪ್ರಜೆಯನ್ನು ಹೊರತುಪಡಿಸಿ ಬೇರೆ ವ್ಯಕ್ತಿಯನ್ನು ಮದುವೆಯಾಗಲು ಉದ್ದೇಶಿಸುವವರು ಅಧಿಕಾರಿಗಳಿಗೆ ತಿಳಿಸಿದರೆ ಸಾಕು. NOC ನೀಡುವ ಅಗತ್ಯವಿಲ್ಲ ಎಂದು 30/04/2024 ರಂದು ನವದೆಹಲಿಯ CRPF ಮಹಾನಿರ್ದೇಶಕರ ಕಚೇರಿ ತಮಗೆ ತಿಳಿಸಿದೆ ಎಂದು ಮುನೀರ್ ಹೇಳಿದ್ದಾರೆ.
ಮೇನಾಲ್ ಖಾನ್ ಅವರೊಂದಿಗಿನ ವಿವಾಹ 24/05/2024 ರಂದು ಆನ್ಲೈನ್ನಲ್ಲಿ ವಿಡಿಯೋ ಕರೆಯ ಮೂಲಕ ನಡೆಯಿತು. "ನನ್ನ ಮದುವೆ ನಂತರ, ನಾನು ಮಧ್ಯಪ್ರದೇಶದ ಭೋಪಾಲ್ನಲ್ಲಿರುವ 72 ಬೆಟಾಲಿಯನ್ ಪ್ರಧಾನ ಕಚೇರಿಗೆ ಮದುವೆಯ ಚಿತ್ರಗಳು, ನಿಕಾ ಪತ್ರಗಳು ಮತ್ತು ವಿವಾಹ ಪ್ರಮಾಣಪತ್ರವನ್ನು ಸಲ್ಲಿಸಿದ್ದೇನೆ" ಎಂದು ಮುನೀರ್ ತಿಳಿಸಿದ್ದಾರೆ.
ನಿಯಮಗಳಿಗೆ ಅನುಸಾರವಾಗಿ ವಿದೇಶಿ ಪ್ರಜೆಯೊಂದಿಗಿನ ತಮ್ಮ ವಿವಾಹದ ಬಗ್ಗೆ ಸರ್ಕಾರಕ್ಕೆ ತಿಳಿಸುವ ಮೂಲಕ ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



