Pahalgam terror attack: 'ಮುಸ್ಲಿಮರು-ಕಾಶ್ಮೀರಿಗಳ ವಿರುದ್ಧ ದ್ವೇಷ ಬೇಡ' ಎಂದ ನೌಕಾಪಡೆ ಅಧಿಕಾರಿ ಪತ್ನಿ ಟ್ರೋಲ್; NCW ಕಿಡಿ
ಹಿಮಾಂಶಿ ಅವರು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅದಕ್ಕಾಗಿ ಅವರನ್ನು ಗುರಿಯಾಗಿಸಿ ಟ್ರೋಲ್ ಮಾಡುವುದು ಖಂಡನೀಯ ಮತ್ತು ದುರದೃಷ್ಟಕರ ಎಂದು ಮಹಿಳಾ ಆಯೋಗ ಹೇಳಿದೆ.

ನವದೆಹಲಿ: ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರನ್ನು ಟ್ರೋಲ್ ಮಾಡಲಾಗುತ್ತಿದ್ದು, ರಾಷ್ಟ್ರೀಯ ಮಹಿಳಾ ಆಯೋಗ (NCW) ಅವರ ಬೆನ್ನಿಗೆ ನಿಂತಿದೆ.
'ಮುಸ್ಲಿಮರು ಅಥವಾ ಕಾಶ್ಮೀರಿಗಳ ವಿರುದ್ಧ ಜನರು ದ್ವೇಷ ಸಾಧಿಸಬಾರದು' ಎಂಬ ಹಿಮಾಂಶಿ ನರ್ವಾಲ್ ಅವರ ಹೇಳಿಕೆಗಳು ಟ್ರೋಲ್‌ಗೆ ಗುರಿಯಾಗಿವೆ. ಹಿಮಾಂಶಿ ಅವರು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅದಕ್ಕಾಗಿ ಅವರನ್ನು ಗುರಿಯಾಗಿಸಿ ಟ್ರೋಲ್ ಮಾಡುವುದು ಖಂಡನೀಯ ಮತ್ತು ದುರದೃಷ್ಟಕರ ಎಂದು ಮಹಿಳಾ ಆಯೋಗ ಹೇಳಿದೆ.
'ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಅನೇಕ ನಾಗರಿಕರು ಸಾವಿಗೀಡಾದರು. ಈ ಪೈಕಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಧರ್ಮ ಯಾವುದೆಂದು ಕೇಳಲಾಯಿತು ಮತ್ತು ನಂತರ ಗುಂಡು ಹಾರಿಸಲಾಯಿತು. ಈ ದಾಳಿಯಿಂದ ಇಡೀ ದೇಶವು ನೋವು ಅನುಭವಿಸಿದೆ ಮತ್ತು ಆಕ್ರೋಶಗೊಂಡಿದೆ. ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಮರಣದ ನಂತರ, ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸುತ್ತಿರುವುದು ಅತ್ಯಂತ ಖಂಡನೀಯ ಮತ್ತು ದುರದೃಷ್ಟಕರ. ಮಹಿಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ಅವರ ವೈಯಕ್ತಿಕ ಜೀವನದ ಬಗ್ಗೆ ಟ್ರೋಲ್ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಎನ್‌ಸಿಡಬ್ಲ್ಯು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.
'ಯಾವುದೇ ವಿಚಾರಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವಾಗ ಯಾವಾಗಲೂ ಸಭ್ಯ ಮತ್ತು ಸಾಂವಿಧಾನಿಕ ಮಿತಿಯೊಳಗೆ ವ್ಯಕ್ತಪಡಿಸಬೇಕು. ರಾಷ್ಟ್ರೀಯ ಮಹಿಳಾ ಆಯೋಗವು ಪ್ರತಿಯೊಬ್ಬ ಮಹಿಳೆಯ ಗೌರವ ಮತ್ತು ಘನತೆಯನ್ನು ರಕ್ಷಿಸಲು ಬದ್ಧವಾಗಿದೆ' ಎಂದು ಹೇಳಿದೆ.
NCW ಅಧ್ಯಕ್ಷೆ ವಿಜಯಾ ರಹತ್ಕರ್ ಅವರು X ನಲ್ಲಿ ಪ್ರತ್ಯೇಕವಾಗಿ ಪೋಸ್ಟ್ ಮಾಡಿದ್ದು, 'ಕೆಲವು ಜನರಿಗೆ ಹಿಮಾಂಶಿ ನರ್ವಾಲ್ ಅವರ ಹೇಳಿಕೆ ಇಷ್ಟವಾಗದಿರಬಹುದು. ಆದರೆ ಅವರ ಅಭಿಪ್ರಾಯಗಳಿಗಾಗಿ ಅವರನ್ನು ಟ್ರೋಲ್ ಮಾಡುವುದು ಮತ್ತು ವೈಯಕ್ತಿಕ ಹೇಳಿಕೆಗಳೊಂದಿಗೆ ಗುರಿಯಾಗಿಸುವುದು ಸರಿಯಲ್ಲ' ಎಂದಿದ್ದಾರೆ.
ಭಯೋತ್ಪಾದಕ ದಾಳಿಗೆ ಕೆಲವು ದಿನಗಳ ಮೊದಲು ವಿವಾಹವಾದ ನವ ದಂಪತಿ ಹನಿಮೂನ್‌ಗಾಗಿ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಈ ವೇಳೆ 26 ವರ್ಷದ ನೌಕಾಪಡೆಯ ಅಧಿಕಾರಿ ಸೇರಿದಂತೆ ಇತರ 26 ಜನರು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವಿಗೀಡಾಗಿದ್ದರು.
ಪತಿಯ ಮೃತದೇಹದ ಪಕ್ಕದಲ್ಲಿ ಹಿಮಾಂಶಿ ನರ್ವಾಲ್ ಕುಳಿತಿದ್ದ ಹೃದಯವಿದ್ರಾವಕ ಫೋಟೊಗಳು, ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



