ದೇಶ

ಪಾಕ್ ಜೊತೆಗೆ ಯುದ್ಧ ಶುರುವಾದ್ರೆ ರಕ್ಷಣೆ ಪಡೆಯೋದು ಹೇಗೆ..? ಬಂಕರ್‌ಗಳ ತುರ್ತು ದುರಸ್ತಿಗೆ ಗಡಿ ಭಾಗದ ಜನರ ಒತ್ತಾಯ!

ಈ ಬಂಕರ್‌ಗಳು ಮೊದಲು ಜೀವಗಳನ್ನು ಉಳಿಸಿವೆ, ಆದರೆ ಅವುಗಳು ಈಗ ಯಾರನ್ನೂ ರಕ್ಷಿಸದಂತಾಗಿವೆ ಎಂದು ಸಿಂಗ್ ತಿಳಿಸಿದರು.

ಪಾಕ್ ಜೊತೆಗೆ ಯುದ್ಧ ಶುರುವಾದ್ರೆ ರಕ್ಷಣೆ ಪಡೆಯೋದು ಹೇಗೆ..? ಬಂಕರ್‌ಗಳ ತುರ್ತು ದುರಸ್ತಿಗೆ ಗಡಿ ಭಾಗದ ಜನರ ಒತ್ತಾಯ!
ಬಂಕರ್ ನಲ್ಲಿ ಗಡಿಭಾಗದ ಜನರು
Published On :

ಜಮ್ಮು: ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿರುವ ಕಾರಣ ಗಡಿಯಾಚೆಗಿನ ಶೆಲ್ ದಾಳಿಯ ಸಮಯದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ತುರ್ತಾಗಿ ಗಡಿ ಬಂಕರ್ ಗಳನ್ನು ದುರಸ್ತಿಗೊಳಿಸಬೇಕು ಮತ್ತು ಅಪೂರ್ಣಗೊಂಡಿರುವ ಬಂಕರ್ ಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಗಡಿ ಪ್ರದೇಶದ ಜನರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಇತ್ತೀಚಿಗೆ ಪಹಲ್ಗಾಮ್ ನಲ್ಲಿ ನಡೆದ 26 ಜನರ ಬಲಿ 2021 ರ ಕದನ ವಿರಾಮ ಒಪ್ಪಂದವನ್ನು ದುರ್ಬಲಗೊಳಿಸಿದ್ದು, ಶಾಂತಿಯನ್ನು ಛಿದ್ರಗೊಳಿಸಿದೆ. ಗಡಿಭಾಗದ ಗ್ರಾಮಗಳಲ್ಲಿ ಆತಂಕ ಹೆಚ್ಚುತ್ತಿರುವಂತೆಯೇ, ಬಂಕರ್‌ಗಳ ಹದಗೆಡುತ್ತಿರುವ ಸ್ಥಿತಿಯ ಬಗ್ಗೆ ಜನರು ಭಯಭೀತಿಗೊಂಡಿದ್ದಾರೆ.

ಬಹುತೇಕ ಬಂಕರ್‌ಗಳು ಪಾಳು: ಪಾಕಿಸ್ತಾನಿ ಪೋಸ್ಟ್‌ಗಳಿಂದ ಕೇವಲ 500 ಮೀಟರ್‌ಗಳಷ್ಟು ದೂರದಲ್ಲಿರುವ ಚಂದ್ ಚೌಕ್ ನಂತಹ ಹಳ್ಳಿಗಳಲ್ಲಿ ಈ ಬಂಕರ್ ಗಳಿವೆ. ಈ ಹಿಂದೆ 2020, 2018 ಮತ್ತು 2014 ರಲ್ಲಿ ಶೆಲ್ ದಾಳಿಯನ್ನು ಎದುರಿಸಿದ ಈ ಹಳ್ಳಿಗಳು ಬೆರಳೆಣಿಕೆಯಷ್ಟು ಬಂಕರ್‌ಗಳನ್ನು ಹೊಂದಿವೆ. ಅವುಗಳಲ್ಲಿ ಹಲವು ಅಪೂರ್ಣ ಅಥವಾ ಬಳಸಲಾಗದವು. ಬಹುತೇಕ ಬಂಕರ್‌ಗಳು ಪಾಳುಬಿದ್ದಿವೆ. ವಿದ್ಯುತ್ ಇಲ್ಲ, ನೀರು ಇಲ್ಲ, ಶೌಚಾಲಯಗಳಿಲ್ಲ. ಕೆಲವಕ್ಕೆ ಛಾವಣಿಯೂ ಇಲ್ಲ. ಎರಡು ವರ್ಷಗಳ ಹಿಂದೆ ಅಪೂರ್ಣಗೊಂಡಿದ್ದು, ಕಾಮಗಾರಿ ಏಕೆ ಸ್ಥಗಿತಗೊಂಡಿತು ಎಂಬುದು ತಿಳಿಯುತ್ತಿಲ್ಲ ಎಂದು ಚಂದ್ ಚಾಕ್‌ನ ನಿವಾಸಿ ಸುಚೇತ್ ಸಿಂಗ್ ಹೇಳಿದರು.

ಕಳಪೆ ನಿರ್ವಹಣೆ: ಗಡಿ ವಾಸಿಗಳಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ಅನೇಕ ಬಂಕರ್‌ಗಳು ಕಳಪೆ ನಿರ್ವಹಣೆ ಮತ್ತು ಉಸ್ತುವಾರಿ ಇಲ್ಲದೆ ಪಾಳು ಬಿದ್ದಿವೆ. ಈ ಬಂಕರ್‌ಗಳು ಮೊದಲು ಜೀವಗಳನ್ನು ಉಳಿಸಿವೆ, ಆದರೆ ಅವುಗಳು ಈಗ ಯಾರನ್ನೂ ರಕ್ಷಿಸದಂತಾಗಿವೆ ಎಂದು ಸಿಂಗ್ ತಿಳಿಸಿದರು.

ಶೆಲ್ ದಾಳಿ ಪ್ರಾರಂಭವಾದರೆ ಮಕ್ಕಳನ್ನು ಎಲ್ಲಿಗೆ ಕರೆದೊಯ್ಯಬೇಕು: ಅಪೂರ್ಣಗೊಂಡಿರುವ ಬಂಕರ್ ತೋರಿಸಿದ ಪರಮ್‌ಜೀತ್ ಕೌರ್ (56) ಶೆಲ್ ದಾಳಿ ಮತ್ತೆ ಪ್ರಾರಂಭವಾದರೆ ಮಕ್ಕಳು, ಜಾನುವಾರುಗಳನ್ನು ಎಲ್ಲಿಗೆ ಕರೆದೊಯ್ಯುಬೇಕು ಎಂದು ಪ್ರಶ್ನಿಸಿದರು. ನಾವು ಬಡವರು. ಸರಕಾರ ಕೂಡಲೇ ಈ ಬಂಕರ್ ಪೂರ್ಣಗೊಳಿಸಬೇಕು. ಅದೇ ಭಯವನ್ನು ಹಂಚಿಕೊಂಡ ಯುವಕರು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಬಯಸಿದರು.

ಮೋದಿಜೀ ಬಂಕರ್ ಮೇಲ್ಪಾವಣಿ ಸರಿಪಡಿಸಬೇಕು: ಆರನೇ ತರಗತಿಯ ವಿದ್ಯಾರ್ಥಿ ಮಂಜುತ್ ಚೌಧರಿ ಮಾತನಾಡಿ, ಮೋದಿ ಅವರು ನಮ್ಮ ಬಂಕರ್‌ನ ಮೇಲ್ಛಾವಣಿಯನ್ನು ಸರಿಪಡಿಸಬೇಕು. ನಾನು ಮೊದಲು ಶೆಲ್ ದಾಳಿಯನ್ನು ನೋಡಿದ್ದೇನೆ ಇದು ತುಂಬಾ ಭಯಾನಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಯುದ್ಧವು ಸನ್ನಿಹಿತವಾಗಿದೆ ಎಂಬ ಭಯದಿಂದ ಗಡಿ ನಿವಾಸಿಗಳಲ್ಲಿ ಭಯ ಶುರುವಾಗಿದೆ. ನಾವು ರಾತ್ರಿಯಲ್ಲಿ ಮಲಗಲು ಸಾಧ್ಯವಿಲ್ಲ. ಪ್ರತಿಯೊಂದು ಶಬ್ದವೂ ನಮ್ಮನ್ನು ಭಯಭೀತಗೊಳಿಸುತ್ತದೆ ಎಂದು ನಿವಾಸಿಯೊಬ್ಬರು ಹೇಳಿದರು.

ಗಡಿಯಲ್ಲಿನ ಅನೇಕ ಹಳ್ಳಿಗಳ ಜನರ ಕಳವಳ: ಈ ಹಿಂದೆ ನಾವು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇವೆ. ಭಯ ನಿರಂತರವಾಗಿದೆ. ಕೃಷಿ ಕೆಲಸಕ್ಕೂ ಅಡ್ಡಿಯಾಗಿದೆ. ನಮ್ಮ ಹೊಲಗಳು ಪಾಳು ಬಿದ್ದಿವೆ. ಶೆಲ್ ದಾಳಿಯ ಭಯದಿಂದ ಯಾರೂ ಹೊರಬರಲು ಧೈರ್ಯ ಮಾಡುತ್ತಿಲ್ಲ ಎಂದು ಮತ್ತೊಬ್ಬ ಗ್ರಾಮಸ್ಥರಾದ ಜಸ್ಪಾಲ್ ಹೇಳಿದರು.

ಜೊರಾಫಾರ್ಮ್, ಮಹಾಶೆ-ಡೆ-ಕೊಥೆ, ಬುಲ್ಲಾ ಚಾಕ್, ಮಂಗು ಚಾಕ್, ಅಬ್ದುಲ್ಲಿಯನ್, ಕೊರೊಟಾನಾ ಕಾಲನ್, ಪಿಂಡಿ, ಕೊಟ್ಲಿ ಶಾ ದೌಲಾ, ಪಿಂಡಿ ಚರಕನ್, ಸಾಯಿ ಮತ್ತು ಟ್ರೆವಾ ಸೇರಿದಂತೆ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಅನೇಕ ಹಳ್ಳಿಗಳ ಜನರು ಇದೇ ರೀತಿಯ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಂಕರ್ ದುರಸ್ತಿಯನ್ನು ತ್ವರಿತಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ.

ಅಧಿಕಾರಿಗಳ ಪ್ರಕಾರ, ಜಮ್ಮು ವಿಭಾಗದಲ್ಲಿ ಇದುವರೆಗೆ 7,923 ಬಂಕರ್‌ಗಳು (6,964 ವೈಯಕ್ತಿಕ ಮತ್ತು 959 ಸಮುದಾಯ) ಪೂರ್ಣಗೊಂಡಿವೆ. ನಿರ್ಮಾಣದ ವಿವಿಧ ಹಂತಗಳಲ್ಲಿ ಇನ್ನೂ 9,905 ಬಂಕರ್‌ಗಳ ಕೆಲಸ ನಡೆಯುತ್ತಿದೆ. ಮಂಜೂರಾದ ಸಂಖ್ಯೆಯು 13,029 ವೈಯಕ್ತಿಕ ಮತ್ತು 1,431 ಸಮುದಾಯ ಬಂಕರ್‌ಗಳಿವೆ. ಕ್ರಮವಾಗಿ ಎಂಟು ಮತ್ತು ನಲವತ್ತು ಜನರಿಗೆ ಆಶ್ರಯ ನೀಡುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಅರ್ನಿಯಾದಂತಹ ಕೆಲವು ಪ್ರದೇಶಗಳಲ್ಲಿ, ನಿವಾಸಿಗಳು ತಾವೇ ಬಂಕರ್ ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.