ದೇಶ

ಪ್ರತಿಭಟನೆಗೆ ಅಡ್ಡಿ: ಒಂದು ವರ್ಷ ನಂತರ ಶಂಭು, ಖಾನೌರಿ ಗಡಿಭಾಗದಿಂದ ರೈತರನ್ನು ಹೊರಹಾಕಿದ ಪಂಜಾಬ್ ಸರ್ಕಾರ

ಹರಿಯಾಣ ಕಡೆಯಿಂದ, ಈ ಗಡಿಗಳಲ್ಲಿ ಇನ್ನೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿವೆ. ರೈತರು ದೆಹಲಿಯ ಕಡೆಗೆ ಹೋಗುವುದನ್ನು ತಡೆಯಲು ಅಧಿಕಾರಿಗಳು ಅಲ್ಲಿ ಸಿಮೆಂಟ್ ಮತ್ತು ಇತರ ಬ್ಯಾರಿಕೇಡ್‌ಗಳನ್ನು ರಚಿಸಿದ್ದರು.

ಪ್ರತಿಭಟನೆಗೆ ಅಡ್ಡಿ: ಒಂದು ವರ್ಷ ನಂತರ ಶಂಭು, ಖಾನೌರಿ ಗಡಿಭಾಗದಿಂದ ರೈತರನ್ನು ಹೊರಹಾಕಿದ ಪಂಜಾಬ್ ಸರ್ಕಾರ
ಪ್ರತಿಭಟನಾ ಸ್ಥಳದಲ್ಲಿ ರೈತರನ್ನು ಬಂಧಿಸಿದ ಪೊಲೀಸರು, ಅವರ ಶಿಬಿರಗಳನ್ನು ಕೆಡವಿದರು
Published On :

ಚಂಡೀಗಢ: ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯ ಗಡಿಭಾಗದಲ್ಲಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ನಿನ್ನೆ ಬುಧವಾರ ಸಂಜೆ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಗಳಿಂದ ಹೊರಹಾಕಲಾಯಿತು, ಈ ಸಂದರ್ಭದಲ್ಲಿ ಉಂಟಾದ ಘರ್ಷಣೆಯಿಂದ ಜನಸಾಮಾನ್ಯರ ಸಂಚಾರಕ್ಕೆ ಗಡಿಗಳನ್ನು ಮುಚ್ಚಲಾಯಿತು.

ರೈತ ನಾಯಕರು ಮತ್ತು ಕೇಂದ್ರ ಸರ್ಕಾರದ ನಡುವಿನ ಏಳನೇ ಸುತ್ತಿನ ಮಾತುಕತೆ ವಿಫಲವಾದ ನಂತರ ಚಂಡೀಗಢದಿಂದ ಶಂಭು ಮತ್ತು ಖಾನೌರಿ ಗಡಿಗಳಿಗೆ ತೆರಳುತ್ತಿದ್ದ ಕಿಸಾನ್ ಮಜ್ದೂರ್ ಮೋರ್ಚಾ (KMM) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (Non political) ನಾಯಕರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಪಂಜಾಬ್ ಪೊಲೀಸರು ನಿನ್ನೆ ಸಾಯಂಕಾಲ ಬಂಧಿಸಿದರು. ಕಳೆದ ವರ್ಷ ನವೆಂಬರ್‌ನಿಂದ ದಲ್ಲೆವಾಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಹರಿಯಾಣ ಕಡೆಯಿಂದ, ಈ ಗಡಿಗಳಲ್ಲಿ ಇನ್ನೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿವೆ. ರೈತರು ದೆಹಲಿಯ ಕಡೆಗೆ ಹೋಗುವುದನ್ನು ತಡೆಯಲು ಅಧಿಕಾರಿಗಳು ಅಲ್ಲಿ ಸಿಮೆಂಟ್ ಮತ್ತು ಇತರ ಬ್ಯಾರಿಕೇಡ್‌ಗಳನ್ನು ರಚಿಸಿದ್ದರು.

ನಿನ್ನೆ ಏನಾಯ್ತು?

ರೈತ ಮುಖಂಡರು ಚಂಡೀಗಢದಿಂದ ಶಂಭು ಗಡಿಗೆ ಹಿಂತಿರುಗುತ್ತಿದ್ದರು, ಅಲ್ಲಿಂದ ದಲ್ಲೆವಾಲ್ ಮತ್ತು ಇತರ ನಾಯಕರು ಖಾನೌರಿಗೆ ಹೋಗಬೇಕಿತ್ತು. ಮೊಹಾಲಿಯ ಜಗತ್‌ಪುರ ಪ್ರದೇಶವನ್ನು ತಲುಪಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದರು. ದಲ್ಲೆವಾಲ್ ಅವರನ್ನು ಆಂಬ್ಯುಲೆನ್ಸ್ ಒಳಗೆ ಇರಿಸಿದಾಗ ವಶಕ್ಕೆ ಪಡೆಯಲಾಯಿತು, ಈ ವೇಳೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿದಾಗ ಇತರರನ್ನು ಅವರ ವಾಹನಗಳೊಂದಿಗೆ ಬಂಧಿಸಲಾಯಿತು. ಪಂಧೇರ್ ಪರಾರಿಯಾಗಲು ಯತ್ನಿಸುತ್ತಿದ್ದಾಗ ಜಿರಾಕ್‌ಪುರ ತಡೆಗೋಡೆಯಿಂದ ಅವರನ್ನು ಅವರ ವಾಹನದಲ್ಲಿ ಕರೆದೊಯ್ಯಲಾಯಿತು. ಹದಿನಾಲ್ಕು ರೈತ ನಾಯಕರು ಮತ್ತು ಅವರ ಜೊತೆಗಿದ್ದ ಇತರರನ್ನು ಸಹ ಬಂಧಿಸಲಾಯಿತು.

ಪಂಧೇರ್ ಅವರನ್ನು ಪಟಿಯಾಲಾದ ಬಹದ್ದೂರ್‌ಗಢ ಫೋರ್ಟ್ ಕಮಾಂಡೋ ಪೊಲೀಸ್ ತರಬೇತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಇದನ್ನು ತಾತ್ಕಾಲಿಕ ಬಂಧನ ಕೇಂದ್ರವಾಗಿ ಪರಿವರ್ತಿಸಲಾಗಿದೆ, ದಲ್ಲೆವಾಲ್ ಹೊರತುಪಡಿಸಿ ಹೆಚ್ಚಿನ ರೈತ ನಾಯಕರು ಮತ್ತು ಪ್ರತಿಭಟನಾ ನಿರತ ರೈತರನ್ನು ಅಲ್ಲಿಗೆ ಕರೆದೊಯ್ಯಲಾಯಿತು.

ಖಾನೌರಿಯಲ್ಲಿ ಸುಮಾರು 200 ರೈತರನ್ನು ಮತ್ತು ಶಂಭುವಿನಲ್ಲಿ ಸುಮಾರು 40 ರೈತರನ್ನು ಬಂಧಿಸಲಾಯಿತು. ಶಂಭು ಗಡಿಯ ಸುತ್ತಮುತ್ತಲಿನ ಅನೇಕ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹತ್ತಿರದ ಹಳ್ಳಿಗಳಲ್ಲಿ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ರಾಜ್ಯದ ಆರ್ಥಿಕ ಬೆಳವಣಿಗೆಗೆ ಈ ಕ್ರಮ ಅನಿವಾರ್ಯ ಎಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದಾರೆ. ಖಾನೌರಿ ಗಡಿಯಲ್ಲಿದ್ದ ಪೊಲೀಸ್ ಉಪ ನಿರೀಕ್ಷಕ (ಪಟಿಯಾಲ ವಲಯ) ಮಂದೀಪ್ ಸಿಂಗ್ ಸಿಧು ಮತ್ತು ಶಂಭು ಗಡಿಯಲ್ಲಿದ್ದ ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಅವರು ರೈತರು ಸಹಕರಿಸಿ ರಸ್ತೆ ತೆರವುಗೊಳಿಸುವಂತೆ ಕೋರಲಾಗಿದೆ ಎಂದು ಹೇಳಿದರು.

ಕಳೆದ ವರ್ಷ ಫೆಬ್ರವರಿ 13 ರಂದು ಭದ್ರತಾ ಪಡೆಗಳು ದೆಹಲಿಗೆ ನಡೆಸಿದ ಮೆರವಣಿಗೆಯನ್ನು ವಿಫಲಗೊಳಿಸಿದಾಗಿನಿಂದ ಪ್ರತಿಭಟನಾ ನಿರತ ರೈತರು ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು (ಶಂಭು-ಅಂಬಾಲ) ಮತ್ತು ಖಾನೌರಿ (ಸಂಗ್ರೂರ್-ಜಿಂದ್) ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.