ದೇಶ

ಹಿಂದಿಯನ್ನು ಭಾಷೆಯಾಗಿ ಎಂದಿಗೂ ವಿರೋಧಿಸಿಲ್ಲ: ತ್ರಿಭಾಷಾ ನೀತಿ, ತಮಿಳು ಚಿತ್ರ ಡಬ್ ಬಗ್ಗೆ ಪವನ್ ಕಲ್ಯಾಣ್ ಮಾತು

ಬಲವಂತವಾಗಿ ಭಾಷೆಯನ್ನು ಹೇರುವುದು ಅಥವಾ ಒಂದು ಭಾಷೆಯನ್ನು ಕುರುಡಾಗಿ ವಿರೋಧಿಸುವುದು ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಏಕೀಕರಣ ತತ್ವಗಳಿಗೆ ವಿರುದ್ಧವಾಗಿದೆ ಎಂದು ಜೆಎಸ್‌ಪಿ ನಾಯಕರೂ ಆಗಿರುವ ಪವನ್ ಕಲ್ಯಾಣ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿಯನ್ನು ಭಾಷೆಯಾಗಿ ಎಂದಿಗೂ ವಿರೋಧಿಸಿಲ್ಲ: ತ್ರಿಭಾಷಾ ನೀತಿ, ತಮಿಳು ಚಿತ್ರ ಡಬ್ ಬಗ್ಗೆ ಪವನ್ ಕಲ್ಯಾಣ್ ಮಾತು
ಪವನ್ ಕಲ್ಯಾಣ್
Published On :

ಹೈದರಾಬಾದ್: ತಮಿಳು ಚಲನಚಿತ್ರಗಳನ್ನು ಹಿಂದಿಯಲ್ಲಿ ‘ಡಬ್’ ಮಾಡಲಾಗುತ್ತಿದೆ ಎಂಬ ತಮ್ಮ ಹೇಳಿಕೆಯಿಂದ ಉಂಟಾಗಿರುವ ವಿವಾದ ಮಧ್ಯೆ, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸ್ಪಷ್ಟೀಕರಣ ನೀಡಿದ್ದು, ಹಿಂದಿ ಭಾಷೆಯನ್ನು ನಾನು ಎಂದಿಗೂ ವಿರೋಧಿಸಿಲ್ಲ ಎಂದು ಹೇಳಿದ್ದಾರೆ.

ಬಲವಂತವಾಗಿ ಭಾಷೆಯನ್ನು ಹೇರುವುದು ಅಥವಾ ಒಂದು ಭಾಷೆಯನ್ನು ಕುರುಡಾಗಿ ವಿರೋಧಿಸುವುದು ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಏಕೀಕರಣ ತತ್ವಗಳಿಗೆ ವಿರುದ್ಧವಾಗಿದೆ ಎಂದು ಜೆಎಸ್‌ಪಿ ನಾಯಕರೂ ಆಗಿರುವ ಪವನ್ ಕಲ್ಯಾಣ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿಯನ್ನು ಒಂದು ಭಾಷೆಯಾಗಿ ನಾನು ಎಂದಿಗೂ ವಿರೋಧಿಸಿಲ್ಲ, ಆದರೆ ಅದನ್ನು ಕಡ್ಡಾಯಗೊಳಿಸುವುದನ್ನು ಮಾತ್ರ ನಾನು ವಿರೋಧಿಸುತ್ತಾ ಬಂದಿದ್ದೆ ಎಂದಿದ್ದಾರೆ. ಬಲವಂತವಾಗಿ ಭಾಷೆಯನ್ನು ಹೇರುವುದು ಅಥವಾ ಅದನ್ನು ಕುರುಡಾಗಿ ವಿರೋಧಿಸುವುದು; ಎರಡೂ ನಮ್ಮ ದೇಶದಲ್ಲಿ ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಏಕೀಕರಣದ ಉದ್ದೇಶವನ್ನು ಸಾಧಿಸಲು ಸಹಾಯ ಮಾಡುವುದಿಲ್ಲ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2020, ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿಲ್ಲ. ಅದರ ಹೇರಿಕೆಯ ಬಗ್ಗೆ ಸುಳ್ಳು ನಿರೂಪಣೆಗಳನ್ನು ಹರಡುವುದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದರು. ಎನ್‌ಇಪಿ-2020 ಸ್ವತಃ ಹಿಂದಿಯನ್ನು ಕಡ್ಡಾಯಗೊಳಿಸದಿದ್ದಾಗ, ಅದರ ಅನುಷ್ಠಾನದ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವುದು ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುವುದಲ್ಲದೆ ಬೇರೇನೂ ಅಲ್ಲ ಎಂದು ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಎನ್‌ಇಪಿ ಅಡಿಯಲ್ಲಿ, ವಿದ್ಯಾರ್ಥಿಗಳು ವಿದೇಶಿ ಭಾಷೆಯ ಜೊತೆಗೆ ಯಾವುದೇ ಎರಡು ಭಾರತೀಯ ಭಾಷೆಗಳನ್ನು (ಅವರ ಮಾತೃಭಾಷೆ ಸೇರಿದಂತೆ) ಕಲಿಯುವ ಆಯ್ಕೆಯನ್ನು ಹೊಂದಿದ್ದಾರೆ. ಹಿಂದಿಯನ್ನು ಕಲಿಯಲು ಬಯಸದಿದ್ದರೆ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಮರಾಠಿ, ಸಂಸ್ಕೃತ, ಗುಜರಾತಿ, ಅಸ್ಸಾಮಿ, ಕಾಶ್ಮೀರಿ, ಒಡಿಯಾ, ಬಂಗಾಳಿ, ಪಂಜಾಬಿ, ಸಿಂಧಿ, ಬೋಡೋ, ಡೋಗ್ರಿ, ಕೊಂಕಣಿ, ಮೈಥಿಲಿ, ಮೈಟೈ, ನೇಪಾಳಿ, ಸಂತಾಲಿ, ಉರ್ದು ಅಥವಾ ಯಾವುದೇ ಇತರ ಭಾರತೀಯ ಭಾಷೆಯನ್ನು ಆಯ್ಕೆ ಮಾಡಬಹುದು ಎಂದು ಅವರು ಹೇಳಿದರು.

ತ್ರಿಭಾಷಾ ನೀತಿಯ ಉದ್ದೇಶವು ವಿದ್ಯಾರ್ಥಿಗಳಿಗೆ ವ್ಯಾಪಕ ಶ್ರೇಣಿಯ ಆಯ್ಕೆಯನ್ನು ಒದಗಿಸುವುದು, ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವುದು ಮತ್ತು ದೇಶದ ಶ್ರೀಮಂತ ಭಾಷಾ ವೈವಿಧ್ಯತೆಯನ್ನು ಕಾಪಾಡುವುದು. ರಾಜಕೀಯ ಕಾರ್ಯಸೂಚಿಗಾಗಿ ಈ ನೀತಿಯನ್ನು ತಪ್ಪಾಗಿ ಅರ್ಥೈಸಿಕೊಂಡು, ನಾನು ಅದರ ಬಗ್ಗೆ ನನ್ನ ನಿಲುವನ್ನು ಬದಲಾಯಿಸಿದ್ದೇನೆ ಎಂದು ಹೇಳಿಕೊಳ್ಳುವುದು ಪರಸ್ಪರ ತಿಳುವಳಿಕೆಯ ಕೊರತೆಯನ್ನು ತೋರಿಸುತ್ತದೆ ಎಂದರು.

ಪ್ರತಿಯೊಬ್ಬ ಭಾರತೀಯನಿಗೂ ಭಾಷಾ ಸ್ವಾತಂತ್ರ್ಯ ಮತ್ತು ಶೈಕ್ಷಣಿಕ ಆಯ್ಕೆ ಎಂಬ ತತ್ವವನ್ನು ದೃಢವಾಗಿ ಎತ್ತಿಹಿಡಿಯುತ್ತದೆ ಎಂದು ಅವರು ಪುನರುಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.