INDIA bloc ಮೈತ್ರಿಕೂಟದಲ್ಲಿ TMC ಭಿನ್ನಮತ: ಲೋಕಸಭೆಯಲ್ಲಿ SIR ಚರ್ಚೆಗೆ ಪಕ್ಷ ಒತ್ತಾಯ
ಮುಂದಿನ ವಾರದ ಆರಂಭದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂರ್ ಕುರಿತು ಸಂಸತ್ತಿನ ಎರಡೂ ಸದನಗಳು ಚರ್ಚೆ ನಡೆಸಲಿವೆ.

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಇಲ್ಲಿಯವರೆಗೆ ಗದ್ದಲ, ಕೋಲಾಹಲ, ಪ್ರತಿಭಟನೆಗಳಲ್ಲಿಯೇ ಕಳೆದುಹೋಗಿದೆ. ಸದನ ಸುಗಮ ಕಲಾಪ ಸಾಧ್ಯವಾಗದೆ ಇಷ್ಟೂ ದಿನ ಮುಂದೂಡುತ್ತಲೇ ಬರಲಾಗಿದೆ. ವಿಪಕ್ಷಗಳ ಬೇಡಿಕೆಯಂತೆ ಸಂಸತ್ತಿನಲ್ಲಿ ಆಪರೇಷನ್ ಸಿಂದೂರ್ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಲು ಸರ್ಕಾರ ಒಪ್ಪಿಕೊಂಡಿದೆ.
ಮುಂದಿನ ವಾರದ ಆರಂಭದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂರ್ ಕುರಿತು ಸಂಸತ್ತಿನ ಎರಡೂ ಸದನಗಳು ಚರ್ಚೆ ನಡೆಸಲಿವೆ. ಈ ಸಂದರ್ಭದಲ್ಲಿ ಇಂಡಿಯಾ ಮೈತ್ರಿಕೂಟದ ಮಿತ್ರ ಪಕ್ಷ ತೃಣಮೂಲ ಕಾಂಗ್ರೆಸ್ (TMC) ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ(SIR) ಕುರಿತು ಮೊದಲು ಚರ್ಚೆ ನಡೆಸಬೇಕೆಂದು ಒತ್ತಾಯಿಸುವ ಮೂಲಕ ವಿಭಿನ್ನ ನಿಲುವನ್ನು ತೆಗೆದುಕೊಂಡಿದೆ. ಸೋಮವಾರ ಲೋಕಸಭೆಯಲ್ಲಿ 16 ಗಂಟೆಗಳ ಕಾಲ ಆಪರೇಷನ್ ಸಿಂದೂರ್ ಕುರಿತು ಚರ್ಚಿಸಲು ಸರ್ಕಾರ ಒಪ್ಪಿಕೊಂಡಿದೆ. ಮರುದಿನ ಅಂದರೆ ಮಂಗಳವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ.
ಟಿಎಂಸಿ ಹೇಳುವುದೇನು?
ಟಿಎಂಸಿ ಮೂಲಗಳ ಪ್ರಕಾರ, ಮೊನ್ನೆ ಬುಧವಾರ ನಡೆದ ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿಯ (BAC) ಮೊದಲ ಸಭೆಯಲ್ಲಿ ಪಕ್ಷವು ಈ ಬೇಡಿಕೆಯನ್ನು ಎತ್ತಿತು. ಆದಾಗ್ಯೂ, ಸರ್ಕಾರ ಈ ಬೇಡಿಕೆಗೆ ಗಮನ ಕೊಡಲಿಲ್ಲ ಎಂದು ನಾಯಕರೊಬ್ಬರು ಹೇಳುತ್ತಾರೆ. ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧಂಖರ್ ಅವರ ರಾಜೀನಾಮೆಯ ನಂತರ ನಡೆದ ಮೊದಲ ಬಿಎಸಿ ಸಭೆ ಇದು. ಸರ್ಕಾರ ತಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಆಪರೇಷನ್ ಸಿಂದೂರ್ ಮತ್ತು ಪಹಲ್ಗಾಮ್ ಕುರಿತ ಚರ್ಚೆಯಿಂದ ಪಕ್ಷವು ದೂರ ಉಳಿಯಬಹುದು ಎಂದು ಟಿಎಂಸಿ ನಾಯಕರೊಬ್ಬರು ಹೇಳುತ್ತಾರೆ.
ಸಭೆಯಲ್ಲಿ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಚರ್ಚೆ ನಡೆಸಬೇಕೆಂಬ ವಿರೋಧ ಪಕ್ಷದ ಬೇಡಿಕೆಯ ಬಗ್ಗೆ ಸರ್ಕಾರ ಬದ್ಧವಾಗಿರಲಿಲ್ಲ. ಆಪರೇಷನ್ ಸಿಂದೂರ್ ಕುರಿತು ಚರ್ಚೆಯನ್ನು ತಕ್ಷಣವೇ ನಡೆಸಬೇಕೆಂದು ಇತರ ಇಂಡಿಯಾ ಬ್ಲಾಕ್ ಸದಸ್ಯರು ಈ ಹಿಂದೆ ಬಯಸಿದ್ದರೂ, ನಾಳೆ ಪ್ರಧಾನಿ ಮೋದಿ ಎರಡು ರಾಷ್ಟ್ರಗಳ ಭೇಟಿಯಿಂದ ದೆಹಲಿಗೆ ವಾಪಸ್ಸಾದ ನಂತರವೇ ಚರ್ಚೆ ಸಾಧ್ಯ ಎಂದು ಸರ್ಕಾರ ಹೇಳಿತ್ತು.
SIR ಗೆ ಆದ್ಯತೆ ನೀಡಿ
ಆಪರೇಷನ್ ಸಿಂದೂರ್ ಕುರಿತ ಚರ್ಚೆಯ ಕುರಿತು ಇತರ ಇಂಡಿಯಾ ಬ್ಲಾಕ್ ಮೈತ್ರಿೂಕೂಟದ ಪಾಲುದಾರರು ಸರ್ಕಾರದೊಂದಿಗೆ ಒಪ್ಪಿಕೊಂಡಿದ್ದರೂ, SIRಗೆ ಆದ್ಯತೆ ನೀಡಬೇಕು ಎಂದು ಟಿಎಂಸಿ ಒತ್ತಾಯಿಸುತ್ತಿದೆ. ಎಸ್ ಐಆರ್ ನಾಗರಿಕರ ಮತದಾನದ ಹಕ್ಕುಗಳು ಮತ್ತು ಪೌರತ್ವದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಬಹುದು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಿಷ್ಕರಣೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



