20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಬ್ಯಾನರ್ಜಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತು.

ನವದೆಹಲಿ: ಟಿಎಂಸಿಯ 20 ಬಂಡಾಯ ಲೋಕಸಭಾ ಸದಸ್ಯರ ಅನರ್ಹತೆ ವಿಚಾರ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಬಂಡಾಯ ಬಣದ 20 ಮಂದಿಗೆ ನೋಟಿಸ್ ಜಾರಿ ಮಾಡಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅನರ್ಹತೆ ಅರ್ಜಿಗಳ ಬಗ್ಗೆ ತ್ವರಿತವಾಗಿ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಬ್ಯಾನರ್ಜಿ ಕೋರಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಬ್ಯಾನರ್ಜಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತು.
ಅನರ್ಹತೆ ಪ್ರಕ್ರಿಯೆ ಕುರಿತು ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪವನ್ನು ಅರ್ಜಿಯಲ್ಲಿ ತಿಳಿಸಲಾಗಿದೆ.
ಆದರೆ, ಲೋಕಸಭಾ ಸ್ಪೀಕರ್ ಕಚೇರಿ ಮತ್ತು ಸದನದ ಪ್ರಧಾನ ಕಾರ್ಯದರ್ಶಿಗೆ ಪ್ರತ್ಯೇಕವಾಗಿ ನೋಟಿಸ್ ನೀಡಲು ನ್ಯಾಯಾಲಯ ನಿರಾಕರಿಸಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅವರ ಪರವಾಗಿ ತಾವು ಹಾಜರಾಗುತ್ತಿರುವುದಾಗಿ ತಿಳಿಸಿದರು.
ಸಂವಿಧಾನದ ಪಕ್ಷಾಂತರ ನಿಷೇಧ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ ಅನರ್ಹತೆ ಅರ್ಜಿಗಳ ಕುರಿತು ಸ್ಪೀಕರ್ ತ್ವರಿತವಾಗಿ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಬ್ಯಾನರ್ಜಿ ಕೋರಿದ್ದಾರೆ.
20 ಸಂಸದರ ವಿರುದ್ಧ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದ ಅವರು, ಬಳಿಕ ಅವುಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದರು.
ಈ ವಿಚಾರವಾಗಿ ಬ್ಯಾನರ್ಜಿ ಅವರು ಆಗಸ್ಟ್ 12ರಂದು ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದರು. ಅದಕ್ಕೂ ಮುನ್ನ ಜುಲೈ 27ರಂದು ಸ್ಪೀಕರ್‌ಗೆ ಲಿಖಿತ ಪತ್ರವನ್ನು ಕಳುಹಿಸಿದ್ದರು.
ಟಿಎಂಸಿ ಸಂಸದೀಯ ಪಕ್ಷದೊಳಗಿನ ಬಂಡಾಯದ ಹಿನ್ನೆಲೆಯಲ್ಲಿ ಈ ವಿವಾದ ಹುಟ್ಟಿಕೊಂಡಿದೆ. ಪಕ್ಷದ 20 ಲೋಕಸಭಾ ಸಂಸದರು ತಾವು ತ್ರಿಪುರಾ ಮೂಲದ ರಾಜಕೀಯ ಸಂಘಟನೆಯಾದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI)ಗೆ ಸೇರ್ಪಡೆಯಾಗಿರುವುದಾಗಿ ಅಥವಾ ಅದರೊಂದಿಗೆ ವಿಲೀನಗೊಂಡಿರುವುದಾಗಿ ಘೋಷಿಸಿ, ಸಂಸತ್ತಿನಲ್ಲಿ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡುವಂತೆ ಕೋರಿದ್ದರು.
ಬಂಡಾಯ ಸಂಸದರನ್ನು ಬಳಿಕ ಸಂಸತ್ತಿನಲ್ಲಿ ಎನ್‌ಸಿಪಿಐ ಗುಂಪಿನಂತೆ ಪರಿಗಣಿಸಲಾಗಿದ್ದು, ಅವರು ಎನ್‌ಡಿಎ ಸಂಸದೀಯ ಚಟುವಟಿಕೆಗಳಲ್ಲೂ ಭಾಗವಹಿಸಿದ್ದಾರೆ.
ಟಿಎಂಸಿ, ಈ ಸಂಸದರು ಪಕ್ಷದ ಚಿಹ್ನೆಯಡಿ ಚುನಾವಣೆಯಲ್ಲಿ ಗೆದ್ದಿದ್ದು, ಮತ್ತೊಂದು ರಾಜಕೀಯ ಸಂಘಟನೆಯೊಂದಿಗೆ ಗುರುತಿಸಿಕೊಳ್ಳುವ ನಿರ್ಧಾರವು ಪಕ್ಷದ ಸದಸ್ಯತ್ವವನ್ನು ಸ್ವಯಂ ತ್ಯಜಿಸಿದಂತಾಗುತ್ತದೆ ಎಂದು ವಾದಿಸಿದೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರು ಅನರ್ಹರಾಗುತ್ತಾರೆ ಎಂಬುದು ಟಿಎಂಸಿ ನಿಲುವಾಗಿದೆ.
ಆದರೆ, ಬಂಡಾಯ ಸಂಸದರು ತಮ್ಮ ಕ್ರಮವು ಕಾನೂನುಬದ್ಧ ವಿಲೀನವಾಗಿದ್ದು, ಅನರ್ಹತೆಗೆ ಕಾರಣವಾಗುವುದಿಲ್ಲ ಎಂದು ವಾದಿಸಿದ್ದಾರೆ.
ಇದೇ ವೇಳೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ತನ್ನ ಆರು ಸಂಸದರು ವಿಲೀನಗೊಳ್ಳುವುದನ್ನು ಸ್ಪೀಕರ್ ಅನುಮೋದಿಸಿರುವುದನ್ನು ಪ್ರಶ್ನಿಸಿ, ಶಿವಸೇನೆ (ಯುಬಿಟಿ) ಸಲ್ಲಿಸಿರುವ ಇದೇ ರೀತಿಯ ಅರ್ಜಿಯ ವಿಚಾರಣೆಯನ್ನೂ ಸುಪ್ರೀಂ ಕೋರ್ಟ್ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



