ಅಧಿಕಾರಕ್ಕೇರಿದ ಐದು ವರ್ಷಗಳಲ್ಲಿ ದೆಹಲಿ ನಿರುದ್ಯೋಗ ಮುಕ್ತ: ಅರವಿಂದ ಕೇಜ್ರಿವಾಲ್ ಭರವಸೆ
ಪಂಜಾಬ್‌ನ ಎಎಪಿ ಸರ್ಕಾರವು ಅಧಿಕಾರಕ್ಕೆ ಬಂದ ಎರಡು ವರ್ಷಗಳೊಳಗೆ ಯುವಜನತೆಗೆ 48,000 ಸರ್ಕಾರಿ ಉದ್ಯೋಗಗಳನ್ನು ಒದಗಿಸಿದೆ ಮತ್ತು ಮೂರು ಲಕ್ಷಕ್ಕೂ ಹೆಚ್ಚು ಖಾಸಗಿ ವಲಯದ ಉದ್ಯೋಗಗಳನ್ನು ಒದಗಿಸಿದೆ ಎಂದು ಕೇಜ್ರಿವಾಲ್ ಹೇಳಿದರು.

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ವಿವಿಧ ಭರವಸೆಗಳನ್ನು ನೀಡುವ ಮೂಲಕ ಮತದಾರರ ಮನಸ್ಸು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದೇ ವೇಳೆ, ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಿರುದ್ಯೋಗವನ್ನು ತೊಡೆದುಹಾಕುವುದಾಗಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಗುರುವಾರ ಭರವಸೆ ನೀಡಿದ್ದಾರೆ.
ವಿಡಿಯೋ ಸಂದೇಶ ನೀಡಿರುವ ಅವರು, 'ದೆಹಲಿಯ ಯುವಕರಿಗೆ ಉದ್ಯೋಗವನ್ನು ಒದಗಿಸುವುದು ನನ್ನ ಮುಂದಿರುವ ಪ್ರಮುಖ ಆದ್ಯತೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮ ತಂಡವು ವಿವರವಾದ ಯೋಜನೆಯನ್ನು ರೂಪಿಸುತ್ತಿದೆ' ಎಂದರು.
ತಮ್ಮ ಸರ್ಕಾರದ ದಾಖಲೆಗಳ ಕುರಿತು ಮಾತನಾಡಿರುವ ಕೇಜ್ರಿವಾಲ್, ಪಂಜಾಬ್‌ನ ಎಎಪಿ ಸರ್ಕಾರವು ಅಧಿಕಾರಕ್ಕೆ ಬಂದ ಎರಡು ವರ್ಷಗಳೊಳಗೆ ಯುವಜನತೆಗೆ 48,000 ಸರ್ಕಾರಿ ಉದ್ಯೋಗಗಳನ್ನು ಒದಗಿಸಿದೆ ಮತ್ತು ಮೂರು ಲಕ್ಷಕ್ಕೂ ಹೆಚ್ಚು ಖಾಸಗಿ ವಲಯದ ಉದ್ಯೋಗಗಳನ್ನು ಒದಗಿಸಿದೆ ಎಂದು ಹೇಳಿದರು.
'ಉದ್ಯೋಗವನ್ನು ಹೇಗೆ ಸೃಷ್ಟಿಸಬೇಕೆಂದು ನಮಗೆ ತಿಳಿದಿದೆ ಮತ್ತು ನಮ್ಮ ಉದ್ದೇಶಗಳು ಪ್ರಾಮಾಣಿಕವಾಗಿವೆ. ಜನರ ಬೆಂಬಲದೊಂದಿಗೆ ನಾವು ಮುಂದಿನ ಐದು ವರ್ಷಗಳಲ್ಲಿ ದೆಹಲಿಯಿಂದ ನಿರುದ್ಯೋಗವನ್ನು ತೊಡೆದುಹಾಕುತ್ತೇವೆ' ಎಂದರು.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರುವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ದೆಹಲಿಯಲ್ಲಿ ಎಎಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. ಆದರೆ, ಬಿಜೆಪಿ ಕಠಿಣ ಸ್ಪರ್ಧೆಯನ್ನು ಒಡ್ಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಕೂಡ ಅಧಿಕಾರಕ್ಕೇರುವ ಕಸರತ್ತು ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



