ದೇಶ

ಲೋಕಸಭೆ ಚುನಾವಣೆ ಬಳಿಕ ಮಹಾರಾಷ್ಟ್ರದಲ್ಲಿ ಐದು ತಿಂಗಳಲ್ಲಿ 39 ಲಕ್ಷ ಮತದಾರರು ಸೇರ್ಪಡೆ: ರಾಹುಲ್ ಗಾಂಧಿ

ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳು ತಮ್ಮ ಮತಗಳಿಕೆಯನ್ನು ಉಳಿಸಿಕೊಂಡಿರುವುದರಿಂದ ಸೇರ್ಪಡೆಯಾಗಿರುವ ಹೆಚ್ಚಿನ ಮತದಾರರು ಬಿಜೆಪಿಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ಮಹಾರಾಷ್ಟ್ರದಲ್ಲಿ ಐದು ತಿಂಗಳಲ್ಲಿ 39 ಲಕ್ಷ ಮತದಾರರು ಸೇರ್ಪಡೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ನವದೆಹಲಿ: ಮಹಾರಾಷ್ಟ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ನಡುವೆ ರಾಜ್ಯದಲ್ಲಿ ಒಟ್ಟು 39 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಶುಕ್ರವಾರ ಕಾಂಗ್ರೆಸ್, ಶಿವಸೇನೆ-ಯುಬಿಟಿ ಮತ್ತು ಎನ್‌ಸಿಪಿ-ಎಸ್‌ಎಸ್ ಆರೋಪಿಸಿವೆ.

ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಒಟ್ಟು ಮತದಾರರ ಸಂಖ್ಯೆ ಹಿಮಾಚಲ ಪ್ರದೇಶದಂತಹ ರಾಜ್ಯದ ಜನಸಂಖ್ಯೆಗೆ ಸಮನಾಗಿದೆ. ಈ ಬಗ್ಗೆ ಮತದಾರರ ಪಟ್ಟಿಯನ್ನು ಒದಗಿಸಬೇಕು ಮತ್ತು ಈ ವಿಷಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳು ತಮ್ಮ ಮತಗಳಿಕೆಯನ್ನು ಉಳಿಸಿಕೊಂಡಿರುವುದರಿಂದ ಸೇರ್ಪಡೆಯಾಗಿರುವ ಹೆಚ್ಚಿನ ಮತದಾರರು ಬಿಜೆಪಿಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಎನ್‌ಸಿಪಿ-ಎಸ್‌ಎಸ್‌ನ ಸುಪ್ರಿಯಾ ಸುಳೆ ಮತ್ತು ಶಿವಸೇನೆಯ ಸಂಜಯ್ ರಾವುತ್ ಜೊತೆಗಿದ್ದ ರಾಹುಲ್, ಸರ್ಕಾರದ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರದ ವಯಸ್ಕ ಜನಸಂಖ್ಯೆ 9.54 ಕೋಟಿ ಇದ್ದರೆ, ರಾಜ್ಯದ ಮತದಾರರ ಜನಸಂಖ್ಯೆ ಮಾತ್ರ 9.7 ಕೋಟಿ ಇದೆ. ಮಹಾರಾಷ್ಟ್ರದಲ್ಲಿ ಒಟ್ಟು ವಯಸ್ಕ ಜನಸಂಖ್ಯೆಗಿಂತ ಹೆಚ್ಚು ಮತದಾರರಿದ್ದಾರೆ ಎಂದು ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆಯ ನಂತರ ಐದು ತಿಂಗಳ ಅಂತರದಲ್ಲಿ 39 ಲಕ್ಷ ಮತದಾರರು ಮಹಾರಾಷ್ಟ್ರದಲ್ಲಿ ಸೇರ್ಪಡೆಗೊಂಡರೆ, 2019 ಮತ್ತು 2024ರ ನಡುವಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 32 ಲಕ್ಷ ಮತಗಳು ಸೇರ್ಪಡೆಗೊಂಡಿವೆ. ಮಹಾರಾಷ್ಟ್ರದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ನೀಡದಿದ್ದರೆ, ಅದು ಗಂಭೀರ ಪ್ರಶ್ನೆಯನ್ನು ಮುಂದಿಡುತ್ತದೆ ಎಂದು ಅವರು ಹೇಳಿದರು.

ನಾವು ಈಗ ಸಂವಿಧಾನದ ಸಂಪೂರ್ಣ ನಾಶದತ್ತ ಸಾಗುತ್ತಿದ್ದೇವೆ. ಆದರೆ, ನಾವು ಸಂವಿಧಾನವನ್ನು ರಕ್ಷಿಸುವ ವ್ಯವಹಾರದಲ್ಲಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮವಾಗಿ ನ್ಯಾಯಾಂಗದ ಬಾಗಿಲು ತಟ್ಟಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

'ನಮಗೆ ಮತದಾರರ ಪಟ್ಟಿಗಳನ್ನು ನೀಡಲು ಚುನಾವಣಾ ಆಯೋಗವು ಸಿದ್ಧವಾಗಿಲ್ಲದಿರುವುದು ನನಗೆ ಆಶ್ಚರ್ಯಕರ ಉಂಟುಮಾಡಿದೆ. ಇದಕ್ಕೆ ಕಾರಣವೆಂದರೆ, ಅಲ್ಲಿ ಏನೋ ತಪ್ಪಾಗಿದೆ ಮತ್ತು ಆ ತಪ್ಪಿನ ಬಗ್ಗೆ ಆಯೋಗಕ್ಕೆ ತಿಳಿದಿದೆ ಎಂದು ರಾಹುಲ್ ಹೇಳಿದರು.

ಚುನಾವಣಾ ಆಯೋಗ ಬದುಕಿದೆ ಮತ್ತು ಸತ್ತಿಲ್ಲ ಎಂದಾದರೆ ರಾಹುಲ್ ಗಾಂಧಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗವು ಸರ್ಕಾರದ ಗುಲಾಮ ಎಂದು ಅರ್ಥೈಸಲಾಗುತ್ತದೆ. ಚುನಾವಣಾ ಆಯೋಗ ಪಾರದರ್ಶಕತೆ ತರಬೇಕು ಎಂದು ಸಂಜಯ್ ರಾವುತ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.