ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್, 'ಸೆಕೆಂಡ್ ಲೇಡಿ' ಉಷಾ ವ್ಯಾನ್ಸ್ ಭಾರತ ಭೇಟಿ ದಿನಾಂಕ ಫಿಕ್ಸ್: ಮುಂದಿನ ವಾರ ಪ್ರಧಾನಿ ಮೋದಿ ಜೊತೆ ಮಾತುಕತೆ
ಭಾರತಕ್ಕೆ ಆಗಮಿಸುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನವದೆಹಲಿ, ಜೈಪುರ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ.

ನವದೆಹಲಿ: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಭಾರತ ಪ್ರವಾಸ ದಿನಾಂಕ ನಿಗದಿಯಾಗಿದ್ದು, ಜೆಡಿ ವ್ಯಾನ್ಸ್ ಅವರು ತಮ್ಮ ಪತ್ನಿ ಹಾಗೂ ಅಮೆರಿಕಾದ ಎರಡನೇ ಮಹಿಳೆ ಉಷಾ ವ್ಯಾನ್ಸ್ ಜೊತೆಗೆ ಮುಂದಿನ ವಾರ ಭಾರತಕ್ಕೆ ಆಗಮಿಸಲಿದ್ದಾರೆಂದು ತಿಳಿದುಬಂದಿದೆ.
ಭಾರತಕ್ಕೆ ಆಗಮಿಸುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನವದೆಹಲಿ, ಜೈಪುರ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್.21 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಶ್ವೇತಭವನ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಜೆ.ಡಿ. ವ್ಯಾನ್ಸ್ ಅವರು ಮೊದಲು ಇಟಲಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ಅವರನ್ನು ಭೇಟಿ ಮಾಡಲಿದ್ದಾರೆ. ಇಟಲಿಗೆ ಭೇಟಿ ಬಳಿಕ ನವದೆಹಲಿ, ಜೈಪುರ ಮತ್ತು ಆಗ್ರಾವನ್ನು ಒಳಗೊಂಡ 3 ನಗರ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಲಿದ್ದಾರೆಂದು ತಿಳಿದುಬಂದಿದೆ.
ಭಾರತದ ಭೇಟಿ ವೇಳೆ ಜೆ.ಡಿ. ವ್ಯಾನ್ಸ್ ಪ್ರಧಾನಿ ಮೋದಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಚರ್ಚೆ ಸೇರಿದಂತೆ ಉನ್ನತ ಮಟ್ಟದ ಸಭೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಕೆಲವು ಮಾಧ್ಯಮ ವರದಿಗಳ ಪ್ರಕಾರ, ಜೆ.ಡಿ ವ್ಯಾನ್ಸ್ ಮತ್ತು ಉಷಾ ವ್ಯಾನ್ಸ್ ಅವರ ಈ ಭೇಟಿ ಹೆಚ್ಚಾಗಿ ಖಾಸಗಿಯಾಗಿರುತ್ತದೆ. ಆದರೆ, ಅವರು ಭಾರತದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದು ಎರಡು ರಾಷ್ಟ್ರಗಳ ನಡುವಿನ ಜನರಿಂದ ಜನರಿಗೆ ಇರುವ ಸಂಬಂಧಗಳ ಮಹತ್ವವನ್ನು ಪ್ರದರ್ಶಿಸುತ್ತದೆ ಎಂದು ತಿಳಿದುಬಂದಿದೆ.
ಕೆಲ ವಾರಗಳ ಹಿಂದೆ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ (DNI) ತುಳಸಿ ಗಬ್ಬಾರ್ಡ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ತುಳಸಿ ಅವರ ಭೇಟಿ ಬಳಿಕ ಇದೀಗ ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಅವರು ಭಾರತಕ್ಕಾಗಮಿಸುತ್ತಿದ್ದಾರೆ.
ಭಾರತಕ್ಕೆ ಭೇಟಿ ನೀಡಿದ್ದ ತುಳಸಿ ಗಬ್ಬಾರ್ಡ್ ಅವರು, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಪ್ರತ್ಯೇಕ ಸಭೆ ನಡೆಸಿ, ಮಾತುಕತೆ ನಡೆಸಿದ್ದರು.
ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲಾ ರಾಷ್ಟ್ರಗಳಿಗೆ ಪ್ರತಿ ಸುಂಕ ಹೇರಿ ಆದೇಶಿಸಿದ್ದರು. ಆದರೆ,ಚೀನಾ ಹೊರತುಪಡಿಸಿ ಉಳಿದ ದೇಶಗಳ ಮೇಲಿನ ಪ್ರತಿಸುಂಕ ಹೇರಿಕೆಗೆ 90 ದಿನಗಳ ತಡೆ ನೀಡಿದ್ದರು. ಸುಂಕ ಸಮರ ಮುಂದುವರೆದಿರುವ ನಡುವಲ್ಲೇ ಅಮೆರಿಕಾ ಉಪಾಧ್ಯಕ್ಷ ವ್ಯಾನ್ಸ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



