ದೇಶ

ಮಾನವೀಯತೆಯ ಯಶಸ್ಸು ಯುದ್ಧಭೂಮಿಯಲ್ಲಿಲ್ಲ: ಪ್ರಧಾನಿ ಮೋದಿ

ಯುದ್ಧ ಮತ್ತು ಸಂಘರ್ಷಗಳು ಇಂದಿನ ಅಗತ್ಯವಲ್ಲ. ಭವಿಷ್ಯಕ್ಕಾಗಿ ನಾವು ಅಭಿವೃದ್ಧಿ ಪಥದತ್ತ ನಡೆಯಬೇಕಿದೆ. ವಿಶ್ವ ಶಾಂತಿ ಮತ್ತು ಭದ್ರತೆಗಾಗಿ ನಾವೆಲ್ಲರೂ ಒಂದಾಗಬೇಕಿದೆ. ಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ.

ಮಾನವೀಯತೆಯ ಯಶಸ್ಸು ಯುದ್ಧಭೂಮಿಯಲ್ಲಿಲ್ಲ: ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Published On :

ನವದೆಹಲಿ: ಮಾನವೀಯತೆಯ ಯಶಸ್ಸು ಸಾಮೂಹಿಕ ಶಕ್ತಿಯಲ್ಲಿದೆ. ಯುದ್ಧಭೂಮಿಯಲ್ಲಿ ಅಲ್ಲ. ವಿಶ್ವ ಶಾಂತಿ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಶಕ್ತಿಗಳು ಸುಧಾರಣೆಯತ್ತ ಹೊರಳುವುದು ಅತ್ಯಗತ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗದಷ್ಟು ಇರುವ 1.4 ಬಿಲಿಯನ್ ಭಾರತೀಯರ ಪರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಂದಿದ್ದೇನೆ ಎಂದು ಹೇಳಿದರು.

ವಿಶ್ವಶಾಂತಿ ಇಂದಿನ ಅಗತ್ಯ ಎಂಬುದನ್ನು ಪುನರುಚ್ಛರಿಸಿದ ಮೋದಿಯವರು, ಯುದ್ಧ ಮತ್ತು ಸಂಘರ್ಷಗಳು ಇಂದಿನ ಅಗತ್ಯವಲ್ಲ. ಭವಿಷ್ಯಕ್ಕಾಗಿ ನಾವು ಅಭಿವೃದ್ಧಿ ಪಥದತ್ತ ನಡೆಯಬೇಕಿದೆ. ವಿಶ್ವ ಶಾಂತಿ ಮತ್ತು ಭದ್ರತೆಗಾಗಿ ನಾವೆಲ್ಲರೂ ಒಂದಾಗಬೇಕಿದೆ. ಹೊಸ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಹೇಳಿದರು.

ವಿಶ್ವದ ಭವಿಷ್ಯದ ಕುರಿತು ಯಾವುದೇ ಚರ್ಚೆಯಲ್ಲಿ ಮಾನವ ಕೇಂದ್ರಿತ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವಾಗ ಮಾನವ ಕಲ್ಯಾಣ, ಆಹಾರ ಮತ್ತು ಆರೋಗ್ಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಭಾರತದಲ್ಲಿ 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ, ಸುಸ್ಥಿರ ಅಭಿವೃದ್ಧಿಯಿಂದ ಯಶಸ್ಸು ಸಾಧಿಸಬಹುದು ಎಂಬುದನ್ನು ನಮ್ಮ ಸರ್ಕಾರ ಮಾಡಿ ತೋರಿಸಿದೆ. ಇದನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆಂದು ಹೇಳಿದರು.

ಇದೇ ವೇಳೆ ಭಯೋತ್ಪಾದನೆಯು ಜಾಗತಿಕ ಶಾಂತಿಗೆ ಗಂಭೀರ ಬೆದರಿಕೆಯಾಗಿ ಉಳಿದಿದೆ. ಸೈಬರ್, ಸಮುದ್ರ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳು ಸಂಘರ್ಷದ ಹೊಸ ರಂಗಭೂಮಿಗಳಾಗಿ ಹೊರಹೊಮ್ಮುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಜಾಗತಿಕ ಕಾರ್ಯಗಳು ಜಾಗತಿಕ ಮಹತ್ವಾಕಾಂಕ್ಷೆಗಳಿಗೆ ಹೊಂದಿಕೆಯಾಗಬೇಕು. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕು. ನಮಗೆ ಜಾಗತಿಕ ಡಿಜಿಟಲ್ ಸಮತೋಲನ ಬೇಕು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸೇತುವೆಯಾಗಬೇಕೇ ಹೊರತು ಜಾಗತಿಕ ಒಳಿತಿಗಾಗಿ ತಡೆಗೋಡೆಯಾಗಬಾರದು. ಭಾರತವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ತನ್ನ ನೀತಿಗೆ ಬದ್ಧವಾಗಿದೆ. ಮಾನವೀಯತೆಯ ಪ್ರಯೋಜನಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.