ದೇಶ

ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ; RSS ಮುಖ್ಯಸ್ಥರಿಗೆ ಐದು ಪ್ರಶ್ನೆ

“ಭ್ರಷ್ಟ” ನಾಯಕರನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳುತ್ತಿರುವ ಬಿಜೆಪಿಯ ರಾಜಕೀಯವನ್ನು ಆರ್‌ಎಸ್‌ಎಸ್ ಒಪ್ಪುತ್ತದೆಯೇ? ಎಂದು ಕೇಜ್ರಿವಾಲ್ ಪ್ರಶ್ನಿಸಿದರು.

ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ; RSS ಮುಖ್ಯಸ್ಥರಿಗೆ ಐದು ಪ್ರಶ್ನೆ
ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ರಾಜಕೀಯ ಪಕ್ಷಗಳನ್ನು ಒಡೆಯಲು ಮತ್ತು ಪ್ರತಿಪಕ್ಷಗಳ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಆರೋಪಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇಂದು ಜಂತರ್ ಮಂತರ್‌ನಲ್ಲಿ ನಡೆದ ತಮ್ಮ ಮೊದಲ 'ಜನತಾ ಕಿ ಅದಾಲತ್' ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಭ್ರಷ್ಟ” ನಾಯಕರನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳುತ್ತಿರುವ ಬಿಜೆಪಿಯ ರಾಜಕೀಯವನ್ನು ಆರ್‌ಎಸ್‌ಎಸ್ ಒಪ್ಪುತ್ತದೆಯೇ? ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಐದು ಪ್ರಶ್ನೆಗಳನ್ನು ಕೇಳಿದ ಕೇಜ್ರಿವಾಲ್, ಎಲ್ ಕೆ ಅಡ್ವಾಣಿಯವರಂತೆ ಬಿಜೆಪಿಯ ನಿವೃತ್ತಿ ವಯಸ್ಸಿನ ನಿಯಮ ಪ್ರಧಾನಿ ಮೋದಿಗೂ ಅನ್ವಯಿಸುವುದಿಲ್ಲವೇ?ಬೇರೆ ಪಕ್ಷಗಳ ನಾಯಕರನ್ನು ಮೊದಲು "ಭ್ರಷ್ಟರು" ಎಂದು ಕರೆದು ನಂತರ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿಯ ರಾಜಕೀಯವನ್ನು ನೀವು ಒಪ್ಪುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಕೇಜ್ರಿವಾಲ್ ಮತ್ತೊಂದು ಪ್ರಶ್ನೆಯಲ್ಲಿ, ಕೇಸರಿ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕರಾಗಿರುವ ಆರ್‌ಎಸ್‌ಎಸ್ ತಮ್ಮ ಪಕ್ಷಕ್ಕೆ ಅಗತ್ಯವಿಲ್ಲ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಹೇಳಿದಾಗ ನಿಮಗೆ ಏನನಿಸಿತು ಎಂದು ಭಾಗವತ್ ಅವರನ್ನು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತಿಂಗಳ ಜೈಲುವಾಸದ ನಂತರ ಸೆಪ್ಟೆಂಬರ್ 13 ರಂದು ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಕೇಜ್ರಿವಾಲ್, ನಾನು ದೇಶ ಸೇವೆ ಮಾಡಲು ರಾಜಕೀಯಕ್ಕೆ ಸೇರಿದ್ದೇನೆಯೇ ಹೊರತು ಅಧಿಕಾರ ಅಥವಾ ಹುದ್ದೆಯ ದುರಾಸೆಗಾಗಿ ಅಲ್ಲ ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಂದ ಮನನೊಂದು ರಾಜೀನಾಮೆ ನೀಡಿದ್ದೇನೆ ಎಂದಿರುವ ಮಾಜಿ ಮುಖ್ಯಮಂತ್ರಿ, ಕಳೆದ 10 ವರ್ಷಗಳಲ್ಲಿ ಕೇವಲ ಗೌರವ ಗಳಿಸಿದ್ದೇನೆಯೇ ಹೊರತು ಹಣವನ್ನಲ್ಲ. ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯು ತನಗೆ ಅಗ್ನಿ ಪರೀಕ್ಷೆಯಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.