ಇಂದಿನಿಂದ ಎರಡು ದಿನ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಮಾವೇಶ
ಲೋಕಸಭೆ ಚುನಾವಣೆ ಗೆಲ್ಲುವ ತಂತ್ರ ಚರ್ಚೆ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣಾ ಕಣ ರಂಗೇರುತ್ತಿದೆ. 3ನೇ ಬಾರಿ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರಲು ಕಾತರವಾಗಿರುವ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಮಾವೇಶವು ಇಂದು ಶನಿವಾರ ಮತ್ತು ನಾಳೆ ವಾರಾಂತ್ಯ ನಡೆಯಲಿದೆ.
ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು: ಇಂದು ಬೆಳಗ್ಗೆ 10 ಗಂಟೆಗೆ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಎರಡು ದಿನಗಳ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳ ಸಚಿವರು, ಅಧಿಕಾರಿಗಳು, ರಾಷ್ಟ್ರೀಯ ಪರಿಷತ್ತಿನ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭೆಯ ಹಾಲಿ ಮತ್ತು ಮಾಜಿ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ರಾಜ್ಯಾಧ್ಯಕ್ಷರು, ಲೋಕಸಭಾ ಕ್ಲಸ್ಟರ್‌ನ ಉಸ್ತುವಾರಿಗಳು ಮತ್ತು ಸಂಯೋಜಕರು, ಮೇಯರ್, ಪುರಸಭೆ ಮತ್ತು ನಗರ ಪಂಚಾಯತ್ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಜಿಲ್ಲಾ ಉಸ್ತುವಾರಿಗಳು, ಮೋರ್ಚಾಗಳ ರಾಜ್ಯ ಅಧ್ಯಕ್ಷರು, ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಐಟಿ ರಾಜ್ಯ ಸಂಚಾಲಕರು, ಆಯೋಗದ ಮಂಡಳಿ ನಿಗಮದ ಅಧ್ಯಕ್ಷರು, ಕೋಶಗಳ ಸಂಚಾಲಕರು ಮತ್ತು ಪಕ್ಷದ ಇತರ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಲೋಕಸಭೆ ಚುನಾವಣೆ ಪ್ರಮುಖ ಅಜೆಂಡಾ: ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಬಿಜೆಪಿಯ ಈ ಸಮಾವೇಶ ಅತ್ಯಂತ ಮಹತ್ವದ್ದಾಗಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅಲ್ಲದೇ ಮುಂದಿನ ಲೋಕಸಭೆ ಚುನಾವಣೆ ಬಗ್ಗೆಯೂ ಸಭೆಯಲ್ಲಿ ರಣತಂತ್ರ ರೂಪಿಸಲಾಗುವುದು.
ಕರ್ನಾಟಕದಿಂದ ಯಾರೆಲ್ಲಾ ಭಾಗವಹಿಸುತ್ತಿದ್ದಾರೆ?: ಬಿಜೆಪಿ ಕರ್ನಾಟಕ ಘಟಕದ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು, ಬಿಜೆಪಿ ಆಡಳಿತದ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಎಂಎಲ್ಎ ಹಂತದ ನಾಯಕರಿಗೆ ರಾಜ್ಯದ 530 ನಾಯಕರಿಗೆ ಆಹ್ವಾನ ಸಿಕ್ಕಿದ್ದು, ಸುಮಾರು 400 ಮಂದಿ ನಾಯಕರು ಭಾಗಿಯಾಗುವ ನಿರೀಕ್ಷೆ ಇದೆ. ದೇಶದ ಎಲ್ಲಾ ಭಾಗಗಳಿಂದ ಸುಮಾರು 11, 500 ಮಂದಿ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



