'ನಾಟ್ಯ ಯಾತ್ರೆ' ಮುಗಿಸಿದ ಯಾಮಿನಿ ಕೃಷ್ಣಮೂರ್ತಿ: ಪದ್ಮ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದೆ ಇನ್ನಿಲ್ಲ
ಯಾಮಿನಿ ಕೃಷ್ಣಮೂರ್ತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಕಳೆದ 7 ತಿಂಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಮ್ಯಾನೇಜರ್ ಹಾಗೂ ಕಾರ್ಯದರ್ಶಿಯಾಗಿದ್ದ ಗಣೇಶ್ ಮಾಹಿತಿ ನೀಡಿದ್ದಾರೆ.

ನವದೆಹಲಿ: ಖ್ಯಾತ ಭರತನಾಟ್ಯ ಕಲಾವಿದೆ, ಪದ್ಮ ಪ್ರಶಸ್ತಿ ಪುರಷ್ಕೃತೆ ಯಾಮಿನಿ ಕೃಷ್ಣಮೂರ್ತಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾರೆ.
ಯಾಮಿನಿ ಕೃಷ್ಣಮೂರ್ತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಕಳೆದ 7 ತಿಂಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಮ್ಯಾನೇಜರ್ ಹಾಗೂ ಕಾರ್ಯದರ್ಶಿಯಾಗಿದ್ದ ಗಣೇಶ್ ಮಾಹಿತಿ ನೀಡಿದ್ದಾರೆ. ಕಲಾವಿದೆಯ ಮೃತ ದೇಹವನ್ನು ಅವರೇ ಸ್ಥಾಪಿಸಿರುವ ದೆಹಲಿಯ ಹೌಜ್ ಖಾಸ್ನಲ್ಲಿನ ‘ಯಾಮಿನಿ ಸ್ಕೂಲ್ ಆಫ್ ಡಾನ್ಸ್’ಗೆ ಭಾನುವಾರ ಬೆಳಿಗ್ಗೆ 9ಕ್ಕೆ ತರಲಾಗುವುದು ಎಂದು ಅವರು ಹೇಳಿದರು.
ಭರತ ನಾಟ್ಯ ಮತ್ತು ಕೂಚಿಪುಡಿ ನೃತ್ಯದ ಮೂಲಕ ಭಾರತದ ಕೀರ್ತಿಯನ್ನು ಬೇರೆ ಬೇರೆ ದೇಶಗಳಿಗೆ ವಿಸ್ತರಿಸಿದವರು ಯಾಮಿನಿ ಕೃಷ್ಣಮೂರ್ತಿ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ 1940ರ ಡಿಸೆಂಬರ್ 20ರಂದು ಅವರು ಜನಿಸಿದ್ದರು. ಸಂಸ್ಕೃತ ವಿದ್ವಾಂಸ ಎಂ. ಕೃಷ್ಣಮೂರ್ತಿ ಅವರ ತಂದೆ. ಅವರು ಐದನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆಯಲ್ಲಿ ತೊಡಗಿದ್ದರು.
ಯಾಮಿನಿ ಅವರು 28ನೇ ವಯಸ್ಸಿನಲ್ಲಿದ್ದಾಗಲೇ 1968ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರಾಗಿದ್ದರು. 2001ರಲ್ಲಿ ಪದ್ಮಭೂಷಣ, 2016ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಅವರಿಗೆ ಸಂದಿವೆ. 1977ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಅವರು ಭಾಜನರಾಗಿದ್ದರು.
ಕೂಚಿಪುಡಿಯಲ್ಲಿಯೂ ಪ್ರವೀಣರಾಗಿದ್ದ ಯಾಮಿನಿ ಕೃಷ್ಣಮೂರ್ತಿಯವರು ಪಂಕಜ್ ಚರಣ್ ದಾಸ್ ಮತ್ತು ಕೇಲುಚರಣ್ ಮೊಹಾಪಾತ್ರ ಅವರಂತಹವರಿಂದ ಒಡಿಸ್ಸಿ ಕಲಿತರು. ವಿವಿಧ ನೃತ್ಯ ಪ್ರಕಾರಗಳನ್ನು ಕಲಿಯುವುದರ ಜೊತೆಗೆ, ಕೃಷ್ಣಮೂರ್ತಿಯವರು ಕರ್ನಾಟಕ ಗಾಯನ ಮತ್ತು ವೀಣೆಯಲ್ಲಿ ತರಬೇತಿ ಪಡೆದರು.ಯಾಮಿನಿ ಕೃಷ್ಣಮೂರ್ತಿ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



