ಚಂದ್ರನ ಮೇಲ್ಮೈ ಮೇಲೆ ನಿದ್ರೆ ಮಾಡುತ್ತಿರುವ ವಿಕ್ರಮ್ ಲ್ಯಾಂಡರ್ ಚಿತ್ರ ಸೆರೆ ಹಿಡಿದ ಚಂದ್ರಯಾನ-2 ಆರ್ಬಿಟರ್: ಇಸ್ರೋ ಟ್ವೀಟ್
ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದು ಪ್ರಸ್ತುತ ನಿದ್ರೆಗೆ ಜಾರಿರುವ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಿತ್ರವನ್ನು ಚಂದ್ರಯಾನ-2ರ ಆರ್ಬಿಟರ್ ಸೆರೆಹಿಡಿದಿದೆ.

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದು ಪ್ರಸ್ತುತ ನಿದ್ರೆಗೆ ಜಾರಿರುವ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಿತ್ರವನ್ನು ಚಂದ್ರಯಾನ-2ರ ಆರ್ಬಿಟರ್ ಸೆರೆಹಿಡಿದಿದೆ.
ಈ ಕುರಿತ ಚಿತ್ರವನ್ನು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಶನಿವಾರ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 6ರಂದು ಚಂದ್ರಯಾನ-2 ಆರ್ಬಿಟರ್‌ನಲ್ಲಿ ಡ್ಯುಯಲ್-ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್ (Dual-frequency Synthetic Aperture Radar - DFSAR) ಉಪಕರಣದಿಂದ ಚಂದ್ರಯಾನ-3 ಲ್ಯಾಂಡರ್ನ ಚಿತ್ರವನ್ನು ಸೆರೆಹಿಡಿದಿದೆ ಎಂದು ಇಸ್ರೋ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ.
ಚಂದ್ರಯಾನ 2ರ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಕರಣವು ನಿರ್ದಿಷ್ಟ ತರಂಗಾಂತರ ಬ್ಯಾಂಡ್‌ನಲ್ಲಿ ಸೂಕ್ಷ್ಮ ತರಂಗಗಳನ್ನು ರವಾನಿಸುತ್ತದೆ. ಚಂದ್ರನ ಮೇಲ್ಮೈಯಿಂದ ಚದುರಿದ ಅದೇ ತರಂಗಗಳನ್ನು ಸ್ವೀಕರಿಸುತ್ತದೆ. ಇದೊಂದು ರಾಡಾರ್ ಆಗಿರುವುದರಿಂದ ಸೌರ ಪ್ರಕಾಶ ಅಥವಾ ಬೆಳಕು ಇಲ್ಲದೆಯೂ ಫೋಟೋ ತೆಗೆಯುತ್ತದೆ. ಇದು ಗುರಿಯ ವೈಶಿಷ್ಟ್ಯಗಳ ದೂರ ಮತ್ತು ಭೌತಿಕ ಗುಣಲಕ್ಷಣಗಳನ್ನು ಒದಗಿಸುತ್ತದೆ. ಆದ್ದರಿಂದ ಈ ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ಭೂಮಿ ಮತ್ತು ಇತರ ಆಕಾಶಕಾಯಗಳ ರಿಮೋಟ್ ಸೆನ್ಸಿಂಗ್ಗಾಗಿ ಬಳಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಡಿಎಫ್ಎಸ್ಎಆರ್ ಚಂದ್ರಯಾನ-2 ಆರ್ಬಿಟರ್‌ನಲ್ಲಿರುವ ಪ್ರಮುಖ ವೈಜ್ಞಾನಿಕ ಸಾಧನವಾಗಿದ್ದು, ಇದು ಎಲ್ ಮತ್ತು ಎಸ್ ಬ್ಯಾಂಡ್‌ಗಳಲ್ಲಿ ಸೂಕ್ಷ್ಮ ತರಂಗಗಳನ್ನು ಬಳಸಿಕೊಳ್ಳುತ್ತದೆ. ಈ ಅತ್ಯಾಧುನಿಕ ಉಪಕರಣವು ಪ್ರಸ್ತುತ ಯಾವುದೇ ಗ್ರಹಗಳ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ರೆಸಲ್ಯೂಶನ್ ಪೋಲಾರಿಮೆಟ್ರಿಕ್ ಚಿತ್ರಗಳನ್ನು ನೀಡುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ದೀರ್ಘವಾದ ರಾಡಾರ್ ತರಂಗಾಂತರವು ಡಿಎಫ್ಎಸ್ಎಆರ್ಅನ್ನು ಕೆಲವು ಮೀಟರ್‌ಗಳವರೆಗೆ ಚಂದ್ರನ ಉಪಮೇಲ್ಮೈ ವೈಶಿಷ್ಟ್ಯಗಳನ್ನು ಅನ್ವೇಷಿಸಲು ನೆರವಾಗುತ್ತದೆ. ಡಿಎಫ್ಎಸ್ಎಆರ್ ಕಳೆದ ನಾಲ್ಕು ವರ್ಷಗಳಿಂದ ಚಂದ್ರನ ಧ್ರುವ ವಿಜ್ಞಾನದ ಮೇಲೆ ಮುಖ್ಯವಾದ ಗಮನಹರಿಸುತ್ತಿದೆ. ಜೊತೆಗೆ ಚಂದ್ರನ ಮೇಲ್ಮೈಯನ್ನು ಚಿತ್ರಿಸುವ ಮೂಲಕ ಉತ್ತಮ ಗುಣಮಟ್ಟದ ದತ್ತಾಂಶವನ್ನು ಒದಗಿಸುತ್ತಿದೆ ಎಂದು ಇಸ್ರೋ ವಿವರಿಸಿದೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಇದಾದ 41 ದಿನಗಳ ನಂತರ ಅಂದರೆ, ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದು ಇತಿಹಾಸ ಬರೆದಿತ್ತು. ಲ್ಯಾಂಡರ್ನಲ್ಲಿದ್ದ ಪ್ರಗ್ಯಾನ್ ರೋವರ್ ಹೊರಬಂದು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿದೆ. ಈಗ ಚಂದ್ರನ ಮೇಲೆ ರಾತ್ರಿಯಾದ ಕಾರಣ ಸೆಪ್ಟೆಂಬರ್ 3ರಿಂದ ರೋವರ್ ಮತ್ತು ಲ್ಯಾಂಡರ್ ನಿದ್ರೆಗೆ ಜಾರಿದ್ದು ಇದೇ ಲ್ಯಾಂಡರ್ ನ ಚಿತ್ರವನ್ವು ಆರ್ಬಿಟರ್ ಸೆರೆ ಹಿಡಿದು ರವಾನಿಸಿದೆ.
ಚಂದ್ರಯಾನ-2ರ ಬಾಹ್ಯಾಕಾಶ ನೌಕೆಯನ್ನು 2019ರ ಜುಲೈ 22ರಂದು ಉಡಾವಣೆ ಮಾಡಲಾಗಿತ್ತು. ಅದೇ ವರ್ಷ ಸೆಪ್ಟೆಂಬರ್ 02ರಂದು ಚಂದ್ರನ ಮೇಲೆ ಇಳಿಸುವ ಸಲುವಾಗಿ ಆರ್ಬಿಟರ್‌ನಿಂದ ಲ್ಯಾಂಡರ್ ಅನ್ನು ಬೇರ್ಪಡಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಲ್ಯಾಂಡರ್ ಸಂಪರ್ಕವನ್ನು ಕಡಿದುಕೊಂಡು ಪತನವಾಗಿತ್ತು. ಮತ್ತೊಂದೆಡೆ, ಚಂದ್ರನ ಸುತ್ತ ತನ್ನ ಉದ್ದೇಶಿತ ಕಕ್ಷೆಯಲ್ಲಿ ಇರಿಸಲಾಗಿರುವ ಆರ್ಬಿಟರ್ ಮಾತ್ರ ಇನ್ನೂ ಕಾರ್ಯ ನಿರ್ವಹಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


