INDIA ಒಕ್ಕೂಟದ ಸದಸ್ಯರಿಂದ ರಾಷ್ಟ್ರಪತಿ ಮುರ್ಮು ಭೇಟಿ; ಮಧ್ಯಪ್ರವೇಶಿಸಿ ಶಾಂತಿ ಮರುಸ್ಥಾಪಿಸುವಂತೆ ಮನವಿ!
ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಮೈತ್ರಿ ಕೂಟ 'ಇಂಡಿಯಾ'ದ ಸಂಸದರು ಮತ್ತು ಹಲವು ನಾಯಕರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ.

ನವದೆಹಲಿ: ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಮೈತ್ರಿ ಕೂಟ 'ಇಂಡಿಯಾ'ದ ಸಂಸದರು ಮತ್ತು ಹಲವು ನಾಯಕರು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ.
ರಾಷ್ಟ್ರಪತಿಗಳ ಭೇಟಿ ಮಾಡಿದ ವಿಪಕ್ಷಗಳ ಸಂಸದರು, ಮಣಿಪುರ ಹಿಂಸಾಚಾರ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ಶಾಂತಿ ಮರುಸ್ಥಾಪಿಸುವಂತೆ ಮನವಿ ಮಾಡಿಕೊಂಡರು.
ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದೆ, ಈ ವಿಚಾರದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ, ಶಾಂತಿ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು
ಪ್ರತಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರತಿಕ್ರಿಯೆಗೆ ಒತ್ತಾಯಿಸುತ್ತಿವೆ. ಆದರೆ, ಸಂಸತ್ತಿನಲ್ಲಿ ಮೋದಿಯವರು ಉತ್ತರ ನೀಡುತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರಿಸುತ್ತಿದ್ದಾರೆ. ಪ್ರಧಾನಮಂತ್ರಿ ಕಚೇರಿಯಿಂದ ಕೇವಲ 100 ಕಿಮೀ ದೂರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ಕೇಂದ್ರ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಇಬ್ಬರು ಮಣಿಪುರ ಮಹಿಳೆಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ:
ಇದೇ ವೇಳೆ ಮಣಿಪುರ ರಾಜ್ಯದಲ್ಲಿ ಮಹಿಳೆಯ ಮೇಲೆ ನಡೆದ ಘೋರ ದಾಳಿಯನ್ನು ಸರಿಪಡಿಸಲು, ಮಹಿಳೆಯರಿಗೆ ನೆರವು ನೀಡಲು ವಿವಿಧ ಸಮುದಾಯಗಳ ಇಬ್ಬರು ಮಣಿಪುರ ಮಹಿಳೆಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವಂತೆ ದ್ರೌಪದಿ ಮುರ್ಮು ಅವರಿಗೆ ಸಲಹೆ ನೀಡಿದರು.
ತೃಣಮೂಲ ಕಾಂಗ್ರೆಸ್ ನಾಯಕಿ ಸುಶ್ಮಿತಾ ದೇವ್ ಅವರು ಮಾತನಾಡಿ, ಹಿಂಸಾಚಾರ ಪೀಡಿತ ಮಣಿಪುರದ ಪರಿಸ್ಥಿತಿಯ ಕುರಿತು ಸಂಸತ್ತಿನಲ್ಲಿ ಮಾತನಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೂಚನೆ ನೀಡುವಂತೆ ಮನವಿ ಮಾಡಿಕೊಂಡರು.
ಮಣಿಪುರದಿಂದ ರಾಜ್ಯಸಭೆಗೆ ವಿವಿಧ ಸಮುದಾಯಗಳ ಇಬ್ಬರು ಮಹಿಳೆಯರನ್ನು ನಾಮನಿರ್ದೇಶನ ಮಾಡುವ ಮೂಲಕ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಸರಿಪಡಿಸಲು ಕ್ರಮಗಳ ಕೈಗೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಜೆಡಿಯು ನಾಯಕ ರಾಜೀವ್ ರಂಜನ್. ಶಿವಸೇನಾ (ಯುಬಿಟಿ) ಮುಖಂಡರಾದ ಅರವಿಂದ್ ಸಾವಂತ್ ಮತ್ತು ಸಂಜಯ್ ರಾವುತ್, ತೃಣಮೂಲ ನಾಯಕರಾದ ಸುದೀಪ್ ಬಂಡೋಪಾಧ್ಯಾಯ ಮತ್ತು ಡೆರೆಕ್ ಒ'ಬ್ರಿಯಾನ್ ಸೇರಿದಂತೆ ಇತರೆ ವಿಪಕ್ಷಗಳ ಸದಸ್ಯರು ಉಪಸ್ಥಿತರಿದ್ದರು.
ಜುಲೈ 29-30 ರಂದು ಮಣಿಪುರಕ್ಕೆ ಭೇಟಿ ನೀಡಿದ್ದ ವಿರೋಧ ಪಕ್ಷದ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (INDIA) ನ ಸಂಸದರು ರಾಷ್ಟ್ರಪತಿಯನ್ನು ಭೇಟಿಯಾದ ವಿರೋಧ ಪಕ್ಷದ ನಿಯೋಗದ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಮಣಿಪುರ ಪ್ರಕರಣ: ಎಫ್ ಐಆರ್ ದಾಖಲಿಸುವಲ್ಲಿ ವಿಳಂಬಕ್ಕೆ 'ಸುಪ್ರೀಂ' ಕಿಡಿ; ಮುಂದಿನ ವಿಚಾರಣೆಗೆ ಹಾಜರಾಗುವಂತೆ ಡಿಜಿಪಿಗೆ ಸಮನ್ಸ್!
ರಾಷ್ಟ್ರಪತಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, INDIA ಮೈತ್ರಿಕೂಟದ 31 ಸದಸ್ಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಮಣಿಪುರಕ್ಕೆ ಭೇಟಿ ನೀಡಿದ 21 ಸಂಸದರ ನಿಯೋಗವು ಅಲ್ಲಿನ ಪರಿಸ್ಥಿತಿಯನ್ನು ರಾಷ್ಟ್ರಪತಿಗಳಿಗೆ ವಿವರಿಸಿದರು ಎಂದು ಹೇಳಿದರು.
ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ವಿಶೇಷವಾಗಿ ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು, ಪುನರ್ವಸತಿಯಲ್ಲಿನ ಪರಿಸ್ಥಿತಿಗಳ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಿಸಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಭೇಟಿ ನೀಡಬೇಕು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


