ದೇಶ

ಹೊಸ ಸಂಸತ್ ಭವನಕ್ಕೆ ಪ್ರವೇಶ: ಲೋಕಸಭಾ, ರಾಜ್ಯಸಭಾ ಸದಸ್ಯರಿಗೆ ಪ್ರಧಾನಿ ಮೋದಿ ಸಾಥ್, ವಿಶೇಷ ಅಧಿವೇಶನ ಆರಂಭ

ಹೊಸ ಸಂಸತ್ ಭವನಕ್ಕೆ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಪ್ರವೇಶಿಸಿದ್ದು, ಈ ವೇಳೆ ಕೇಂದ್ರ ಸಚಿವರು ಮತ್ತು ಇತರ ಸಂಸದರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ನೂತನ ಕಟ್ಟಡದೊಳಗೆ ಆಗಮಿಸಿದರು. ಇದರೊಂದಿಗೆ ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭಗೊಂಡಿದೆ.

ಹೊಸ ಸಂಸತ್ ಭವನಕ್ಕೆ ಪ್ರವೇಶ: ಲೋಕಸಭಾ, ರಾಜ್ಯಸಭಾ ಸದಸ್ಯರಿಗೆ ಪ್ರಧಾನಿ ಮೋದಿ ಸಾಥ್, ವಿಶೇಷ ಅಧಿವೇಶನ ಆರಂಭ
ನೂತನ ಸಂಸತ್ ಭವನ ಪ್ರವೇಶಿಸುತ್ತಿರುವ ಪ್ರಧಾನಿ ಮೋದಿ.
Published On :

ನವದೆಹಲಿ: ಹೊಸ ಸಂಸತ್ ಭವನಕ್ಕೆ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ಪ್ರವೇಶಿಸಿದ್ದು, ಈ ವೇಳೆ ಕೇಂದ್ರ ಸಚಿವರು ಮತ್ತು ಇತರ ಸಂಸದರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ನೂತನ ಕಟ್ಟಡದೊಳಗೆ ಆಗಮಿಸಿದರು. ಇದರೊಂದಿಗೆ ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭಗೊಂಡಿದೆ.

ಮೊದಲ ದಿನದ ಲೋಕಸಭಾ ಹಾಗೂ ರಾಜ್ಯಸಭಾ ಕಲಾಪಗಳು ಹಳೆ ಸಂಸತ್ತಿನ ಭವನದಲ್ಲಿ ಜರುಗಿದ್ದವು. ಇಂದಿನಿಂದ ಹೊಸ ಭವನದಲ್ಲಿ ಕಲಾಪಗಳು ಶುರುವಾಗಿವೆ. ಇದರ ಭಾಗವಾಗಿ ಹಳೆ ಸಂಸತ್ ಕಟ್ಟಡದ ಸೆಂಟ್ರಲ್ ಹಾಲ್‌ನಲ್ಲಿ ವಿದಾಯ ಕಾರ್ಯಕ್ರಮ ನಡೆಯಿತು. ಇದರಲ್ಲಿ ಎರಡೂ ಸದನಗಳ ಸದಸ್ಯರು ಪಾಲ್ಗೊಂಡರು. ನಂತರ ಸಂಸತ್ ಸಂಕೀರ್ಣಕ್ಕೆ ಎಲ್ಲರೂ ಆಗಮಿಸಿದರು.

ಪ್ರಧಾನಿ ಮೋದಿ ಅವರೊಂದಿಗೆ ಹಲವಾರು ಸಂಸದರು ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ನಡೆದುಕೊಂಡು ಬಂದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಸೇರಿದಂತೆ ಅನೇಕರು ಆಗಮಿಸಿದರು. ಇದೇ ವೇಳೆ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಸಂಸದರು 'ಭಾರತ್ ಮಾತಾ ಕಿ ಜೈ' ಮತ್ತು 'ವಂದೇ ಮಾತರಂ' ಎಂಬ ಘೋಷಣೆಗಳನ್ನು ಕೂಗುತ್ತಾ ಅವರನ್ನು ಹಿಂಬಾಲಿಸಿದರು.

ಮತ್ತೊಂದೆಡೆ, ಹಲವಾರು ಪ್ರತಿಪಕ್ಷಗಳ ಸಂಸದರು ಕೂಡ ಹೊಸ ಸಂಸತ್ತಿನ ಸಂಕೀರ್ಣದ ಕಡೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಪ್ರತ್ಯೇಕವಾಗಿ ಹೊಸ ಸಂಸತ್ತಿಗೆ ಪ್ರವೇಶಿಸಿದರು. ನಂತರ ಲೋಕಸಭೆ ಕಲಾಪ ಆರಂಭವಾಯಿತು.

ಸದನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು,''ನೂತನ ಸಂಸತ್ ಭವನದ ಮೊದಲ ಹಾಗೂ ಐತಿಹಾಸಿಕ ಅಧಿವೇಶನ ಇದಾಗಿದೆ. ಈ ಹೊಸ ಸಂಸತ್ ಭವನದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಈ ಸಂದರ್ಭ ಹಲವಾರು ವಿಧಗಳಲ್ಲಿ ಅಭೂತಪೂರ್ವವಾಗಿದೆ. ಇದು ಆಜಾದಿ ಕಾ ಅಮೃತ್‌ ಕಾಲ್" ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.