ದಲಿತ ಅಡುಗೆಯವರು ತಯಾರಿಸಿದ ಉಪಹಾರ ಸೇವನೆಗೆ ಕರೂರು ಶಾಲೆಯ ವಿದ್ಯಾರ್ಥಿಗಳ ನಿರಾಕರಣೆ!
ತಮಿಳುನಾಡು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಉಪಹಾರ ಯೋಜನೆ ಒದಗಿಸಲಾಗಿದ್ದು, ಕರೂರಿನ ಸರ್ಕಾರಿ ಶಾಲೆಯ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿಗಳು ದಲಿತ ಅಡುಗೆಯವರೊಬ್ಬರು ತಯಾರಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದಾರೆ.

ಚೆನ್ನೈ: ತಮಿಳುನಾಡು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಉಪಹಾರ ಯೋಜನೆ ಒದಗಿಸಲಾಗಿದ್ದು, ಕರೂರಿನ ಸರ್ಕಾರಿ ಶಾಲೆಯ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿಗಳು ದಲಿತ ಅಡುಗೆಯವರೊಬ್ಬರು ತಯಾರಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದಾರೆ.
ಕರೂರು ಜಿಲ್ಲೆಯ ಅರವಕುರಿಚಿ ಸಮೀಪದ ವೆಲಂಚೆಟ್ಟಿಯೂರ್ ಗ್ರಾಮದಲ್ಲಿರುವ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಹಿಂದುಳಿದ ಜಾತಿ ಮತ್ತು ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರಾಕರಿಸಿದ್ದಾರೆ. ಪರಿಶಿಷ್ಟ ಜಾತಿಯ ಮಹಿಳೆ ಸುಮತಿ ಎಂಬುವವರು ತಯಾರಿಸಿದ ಆಹಾರವನ್ನು ತಿನ್ನದಂತೆ ತಡೆಯಲು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.
ಒಗ್ಗಟ್ಟಿನ ಸೂಚಕವಾಗಿ ಜಿಲ್ಲಾಧಿಕಾರಿ ಟಿ. ಪ್ರಭು ಶಂಕರ್ ಶಾಲೆಗೆ ಭೇಟಿ ನೀಡಿ ಸುಮತಿ ಅವರು ತಯಾರಿಸಿದ ಆಹಾರವನ್ನು ಸೇವಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರನ್ನು ಭೇಟಿಯಾದ ಅವರು ಸರ್ಕಾರದಿಂದ ನೇಮಕಗೊಂಡ ಅಡುಗೆಯವರ ವಿರುದ್ಧ ತಾರತಮ್ಯವನ್ನು ಮುಂದುವರೆಸಿದರೆ, ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಮೂರಕ್ಕೂ ಹೆಚ್ಚು ಹಿಂದುಳಿದ ಸಮುದಾಯಗಳು ಸುಮತಿ ಅಡುಗೆ ತಯಾರಿಸುವುದನ್ನು ವಿರೋಧಿಸಿವೆ. ಆಕೆಯ ವಿರುದ್ಧ ಬಹಿಷ್ಕಾರ ಹಾಕಿರುವುದಾಗಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಜಿಲ್ಲಾಧಿಕಾರಿಯೊಂದಿಗೆ ಚರ್ಚೆಯ ನಂತರ, ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಉಪಹಾರ ಯೋಜನೆಯ ಅನುಕೂಲ ಪಡೆಯಲು ಕಳುಹಿಸಲು ಒಪ್ಪಿಕೊಂಡರು. ಅತ್ಯಂತ ಹಿಂದುಳಿದ ವರ್ಗದ ಸಮುದಾಯದ ಓರ್ವ ವ್ಯಕ್ತಿ ಮಾತ್ರ ತನ್ನ ಮಕ್ಕಳಿಗೆ ಅಲ್ಲಿ ಉಪಹಾರ ಸೇವಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಟಿಎನ್ಎಂ ವರದಿ ಪ್ರಕಾರ, ನಂತರ ಆ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮಹಿಳೆ ವಿರುದ್ಧ ಜಾತಿ ತಾರತಮ್ಯ ಎಸಗಿದ್ದಕ್ಕಾಗಿ ಆತನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಕೈಗೊಳ್ಳಬಹುದಾದ ಸಂಭವನೀಯ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಲಾಯಿತು. ನಂತರ ಆತನನ್ನು ಬಿಡಲಾಯಿತು.
ಒಂದು ವೇಳೆ ಮತ್ತೊಮ್ಮೆ ನಿಯಮ ಪಾಲಿಸದಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಹೊಸ ಉಪಹಾರ ಉಪಕ್ರಮವನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಆಗಸ್ಟ್ 25ರಂದು ಪರಿಚಯಿಸಿದರು. ರಾಜ್ಯದಾದ್ಯಂತ ಒಟ್ಟು 17 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯಡಿ ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಗೆ ತಮಿಳುನಾಡು ಸರ್ಕಾರ 404.41 ಕೋಟಿ ರೂ. ಮೀಸಲಿಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


