ಭಾರತ-ಶ್ರೀಲಂಕಾ ದೋಣಿ ಸೇವೆ: ರಾಜತಾಂತ್ರಿಕತೆಯ ಹೊಸ ಅಧ್ಯಾಯ ಆರಂಭ- ಪ್ರಧಾನಿ ಮೋದಿ
ಭಾರತದ ನಾಗಪಟ್ಟಣಂನಿಂದ ಶ್ರೀಲಂಕಾಕ್ಕೆ ಪ್ರಯಾಣಿಕ ದೋಣಿ ಸೇವೆಗೆ ಶನಿವಾರ ಚಾಲನೆ ದೊರೆತಿದ್ದು, ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ನಾವು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿ: ಭಾರತದ ನಾಗಪಟ್ಟಣಂನಿಂದ ಶ್ರೀಲಂಕಾಕ್ಕೆ ಪ್ರಯಾಣಿಕ ದೋಣಿ ಸೇವೆಗೆ ಶನಿವಾರ ಚಾಲನೆ ದೊರೆತಿದ್ದು, ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ನಾವು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಾಗಪಟ್ಟಣಂ ಮತ್ತು ಕಂಕೆಸಂತುರೈ ನಡುವೆ ದೋಣಿ ಸೇವೆ ಪ್ರಾರಂಭವಾಗಿರುವುದು ನಮ್ಮ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲು ಆಗಿದೆ. ಇದರಿಂದ ಉಭಯ ದೇಶಗಳ ನಡುವೆ ಸಂಪರ್ಕ ಹಾಗೂ ವ್ಯಾಪಾರಕ್ಕೆ ಅನುಕೂಲವಾಗಲಿದ್ದು, ರಾಷ್ಟ್ರಗಳ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಮೋದಿ ಒತ್ತಿ ಹೇಳಿದ್ದಾರೆ.
ಕವಿ ಸುಬ್ರಮಣ್ಯ ಭಾರತಿಯ ಸಿಂಧು ನದಿಯ ಮಿಸಾಯಿ ಕವಿತೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ಮಹಾ ಕವಿ ಸುಬ್ರಮಣ್ಯ ಭಾರತಿ ತಮ್ಮ ಸಿಂಧು ನದಿಯ ಮಿಸಾಯಿ ಹಾಡಿನಲ್ಲಿ ನಮ್ಮ ಎರಡು ದೇಶಗಳನ್ನು (ಭಾರತ ಮತ್ತು ಶ್ರೀಲಂಕಾ) ಸಂಪರ್ಕಿಸುವ ಸೇತುವೆಯ ಬಗ್ಗೆ ಮಾತನಾಡಿದ್ದಾರೆ. ಈ ದೋಣಿ ಸೇವೆಯು ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಜೀವಂತವಾಗಿ ತರುತ್ತದೆ ಎಂದಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಜಂಟಿ ಆರ್ಥಿಕ ಪಾಲುದಾರಿಕೆಗಾಗಿ ವಿಷನ್ ಡಾಕ್ಯುಮೆಂಟ್ ಅಳವಡಿಸಿಕೊಂಡಿದ್ದೇವೆ. ಸಂಪರ್ಕ ಈ ಪಾಲುದಾರಿಕೆಯ ಕೇಂದ್ರ ವಿಷಯವಾಗಿದೆ. ಇದು ನಮ್ಮ ದೇಶಗಳನ್ನು ಹತ್ತಿರ ತರುವುದಕ್ಕಾಗಿ, ಇದು ವ್ಯಾಪಾರ, ಪ್ರವಾಸೋದ್ಯಮ ಮತ್ತು ಜನರ-ಜನರ ನಡುವಿನ ಸಂಬಂಧವನ್ನು ಹೆಚ್ಚಿಸುತ್ತದೆ. ಇದರಿಂದ ಎರಡೂ ದೇಶಗಳ ಯುವಜನರಿಗೆ ಉದ್ಯೋಗವಕಾಶ ಸೃಷ್ಟಿಸುತ್ತದೆ ಎಂದು ಹೇಳಿದರು.
2015 ರಲ್ಲಿ ದೆಹಲಿ ಮತ್ತು ಕೊಲಂಬೊ ನಡುವೆ ನೇರ ವಿಮಾನವನ್ನು ಪ್ರಾರಂಭಿಸಲಾಯಿತು. ನಂತರ, ಮೊದಲ ಅಂತರಾಷ್ಟ್ರೀಯ ವಿಮಾನ ಶ್ರೀಲಂಕಾದಿಂದ ಯಾತ್ರಿಕರ ಪಟ್ಟಣವಾದ ಕುಶಿನಗರಕ್ಕೆ ಬಂದಿಳಿಯಿತು. ನಾಗಪಟ್ಟಿಣಂ ಮತ್ತು ಕಂಕಸಂತುರೈ ನಡುವಿನ ದೋಣಿ ಸೇವೆಯು ಈ ದಿಕ್ಕಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮಾತನಾಡಿ, ಭಾರತ ಮತ್ತು ಶ್ರೀಲಂಕಾ ನಡುವಿನ ಸಂಪರ್ಕವನ್ನು ಹೆಚ್ಚಿಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಉತ್ತರ ಯುದ್ಧದಿಂದಾಗಿ ಉಭಯ ದೇಶಗಳ ನಡುವಿನ ಸಂಪರ್ಕವು ಅಸ್ತವ್ಯಸ್ಥವಾಗಿತ್ತು. ಈಗ ಶಾಂತಿ ಮರಳಿದೆ ಮತ್ತು ನಾವು ಸಂಪರ್ಕವನ್ನು ಮರುಸ್ಥಾಪಿಸಬಹುದು, ಇದನ್ನು ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಿದ್ದೇನೆ ಮತ್ತು ಈ ಸಂಪರ್ಕವನ್ನು ಮರುಸ್ಥಾಪಿಸುವಲ್ಲಿ ಅವರು ವಹಿಸಿದ ಪಾತ್ರಕ್ಕಾಗಿ ನಾನು ಅವರಿಗೆ ಮತ್ತು ಭಾರತೀಯ ಹಡಗು ನಿಗಮಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


