ದೇಶ

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ; ಸೋಮವಾರದಿಂದ 26ನೇ ಹಂತದ ಚುನಾವಣಾ ಬಾಂಡ್‌ಗಳು ಮಾರಾಟ!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿಯಿರುವಂತೆಯೇ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಗಳ ವಿತರಣೆಗೆ ಅನುಮೋದನೆ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 26ನೇ ಹಂತದ ಚುನಾವಣಾ ಬಾಂಡ್ ಮಾರಾಟವನ್ನು ಸೋಮವಾರದಿಂದ ಆರಂಭಿಸಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ; ಸೋಮವಾರದಿಂದ 26ನೇ ಹಂತದ ಚುನಾವಣಾ ಬಾಂಡ್‌ಗಳು ಮಾರಾಟ!
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿಯಿರುವಂತೆಯೇ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಗಳ ವಿತರಣೆಗೆ ಅನುಮೋದನೆ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 26ನೇ ಹಂತದ ಚುನಾವಣಾ ಬಾಂಡ್ ಮಾರಾಟವನ್ನು ಸೋಮವಾರದಿಂದ ಆರಂಭಿಸಲಿದೆ. ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ನಡೆಯಲಿದ್ದು, ಮೇ 13 ರಂದು ಮತಗಳ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ. 

ರಾಜಕೀಯ ನಿಧಿಯಲ್ಲಿ ಪಾರದರ್ಶಕತೆ ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನೀಡಿದ ನಗದು ದೇಣಿಗೆಗೆ ಪರ್ಯಾಯವಾಗಿ ಚುನಾವಣಾ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಏಪ್ರಿಲ್ 3ರಿಂದ 12 ರವರೆಗೆ ತನ್ನ 29 ಅಧಿಕೃತ ಶಾಖೆಗಳ ಮೂಲಕ 26 ನೇ ಹಂತದ ಮಾರಾಟದಲ್ಲಿ ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಮತ್ತು ಎನ್‌ಕ್ಯಾಶ್ ಮಾಡಲು ಅಧಿಕಾರ ಹೊಂದಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕೊನೆಯ ಹಂತದ ಚುನಾವಣಾ ಬಾಂಡ್‌ಗಳು (25 ನೇ ಕಂತಿನ) 2023 ರ ಜನವರಿ 19 ಮತ್ತು 28 ರ ನಡುವೆ ಚಂದಾದಾರಿಕೆಗಾಗಿ ತೆರೆದಿತ್ತು. ಸಾಮಾನ್ಯವಾಗಿ ಚುನಾವಣಾ ಬಾಂಡ್ ಗಳು ಗೊತ್ತುಪಡಿಸಿದ ತಿಂಗಳ 1 ರಿಂದ 10ನೇ ತಾರೀಖಿನ ನಡುವೆ ಮಾರಾಟಕ್ಕೆ ತೆರೆದಿರುತ್ತವೆ. ಆದರೆ 25ರಂದು ಈ ಆದೇಶ ಪಾಲಿಸಿಲ್ಲ. 2018 ಮಾರ್ಚ್ 1 ರಿಂದ 10ರವರೆಗೆ ಮೊದಲ ಹಂತದ ಚುನಾವಣಾ ಬಾಂಡ್ ಗಳ ಮಾರಾಟ ನಡೆದಿತ್ತು. ಅಧಿಕೃತ ಎಸ್‌ಬಿಐ ಶಾಖೆಗಳಲ್ಲಿ ಬೆಂಗಳೂರು, ಲಕ್ನೋ, ಶಿಮ್ಲಾ, ಡೆಹ್ರಾಡೂನ್, ಕೋಲ್ಕತ್ತಾ, ಗುವಾಹಟಿ, ಚೆನ್ನೈ, ಪಾಟ್ನಾ, ನವದೆಹಲಿ, ಚಂಡೀಗಢ, ಶ್ರೀನಗರ, ಗಾಂಧಿನಗರ, ಭೋಪಾಲ್, ರಾಯ್‌ಪುರ ಮತ್ತು ಮುಂಬೈ ಶಾಖೆಗಳು ಸೇರಿವೆ. ಎಸ್‌ಬಿಐ ಮಾತ್ರ ಚುನಾವಣಾ ಬಾಂಡ್‌ಗಳನ್ನು ವಿತರಿಸುವ ಅಧಿಕೃತ ಬ್ಯಾಂಕ್ ಆಗಿದೆ.

ಚುನಾವಣಾ ಬಾಂಡ್ ಗಳು ವಿತರಿಸಿದ ದಿನಾಂಕದಿಂದ 15 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಮಾನ್ಯತೆಯ ಅವಧಿ ಮುಗಿದ ನಂತರ ಬಾಂಡ್ ನ್ನು ಠೇವಣಿ ಮಾಡಿದರೆ ಯಾವುದೇ ರಾಜಕೀಯ ಪಕ್ಷಕ್ಕೆ ಯಾವುದೇ ಪಾವತಿ ಮಾಡಲಾಗುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಚುನಾವಣಾ ಬಾಂಡ್‌ಗಳನ್ನು ಭಾರತೀಯ ನಾಗರಿಕರು ಅಥವಾ ದೇಶದಲ್ಲಿ ಸಂಘಟಿತ ಅಥವಾ ಸ್ಥಾಪಿಸಿದ ಘಟಕಗಳು ಖರೀದಿಸಬಹುದು. ಕಳೆದ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳ ಶೇಕಡಾ 1 ಕ್ಕಿಂತ ಕಡಿಮೆಯಿಲ್ಲದ ಮತಗಳನ್ನು ಪಡೆದಿರುವ ನೋಂದಾಯಿತ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.