ಯಮುನಾ ನದಿ ನೀರಿನ ಮಟ್ಟ ಏರಿಕೆ; ಪ್ರವಾಹ ಭೀತಿ, ದೆಹಲಿಯಲ್ಲಿ ಕಟ್ಟೆಚ್ಚರ
ಉತ್ತರ ಭಾರತದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಹಿನ್ನಲೆಯಲ್ಲಿ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ನವದೆಹಲಿ: ಉತ್ತರ ಭಾರತದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ದೆಹಲಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಹಿನ್ನಲೆಯಲ್ಲಿ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಯಮುನಾ ನದಿ ನೀರಿನ ಮಟ್ಟ 206.24 ಮೀಟರ್‌ಗೆ ಏರಿಕೆಯಾಗಿದ್ದು, ಯಮುನಾ ನದಿ ನೀರಿನ ಗರಿಷ್ಠ ಮಟ್ಟ 207.49 ಮೀಟರ್ ಆಗಿದೆ. ಅಪಾಯಕಾರಿ ಮಟ್ಟ ತಲುಪಿದೆ. ಹೀಗಾಗಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಳೆ ರೈಲ್ವೆ ಸೇತುವೆ ಮೇಲೆ ರೈಲು ಸಂಚಾರ ಮತ್ತು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ತಿಳಿಸಿದೆ.
ಕೇಂದ್ರ ಜಲ ಆಯೋಗದ ಪ್ರವಾಹ ಮೇಲ್ವಿಚಾರಣಾ ಪೋರ್ಟಲ್ ಪ್ರಕಾರ, ಹರ್ಯಾಣವು ಯಮುನಾನಗರದ ಹತ್ನಿಕುಂಡ್ ಬ್ಯಾರೇಜ್‌ನಿಂದ ನದಿಗೆ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವುದರೊಂದಿಗೆ ಹಳೆಯ ರೈಲ್ವೆ ಸೇತುವೆಯಲ್ಲಿ ನೀರಿನ ಮಟ್ಟ ಏರಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ನದಿಯು 206.65 ಮೀಟರ್‌ಗೆ ಏರುವ ನಿರೀಕ್ಷೆಯಿದೆ, ನಂತರ ಕ್ರಮೇಣ ಕಡಿಮೆಯಾಗುತ್ತದೆ. ಅಪಾಯಕಾರಿ ಮಟ್ಟ 205.33 ಮೀಟರ್ ಆಗಿದ್ದು ಹರಿಯಾಣದ ಯಮುನಾ ನಗರ್ ಜಿಲ್ಲೆಯಲ್ಲಿರುವ ಹಥಿನಿಕುಂಡ್ ಬ್ಯಾರೇಜ್‌ನಿಂದ ಮಂಗಳವಾರ (ಇಂದು) ಬೆಳಗ್ಗೆ 8ರ ಹೊತ್ತಿಗೆ 3.21 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ ಎಂದು ಹೇಳಲಾಗಿದೆ.
ಪ್ರವಾಹ ಪರಿಸ್ಥಿತಿ ಇಲ್ಲ: ಸಿಎಂ ಕೇಜ್ರಿವಾಲ್ ಸ್ಪಷ್ಟನೆ
ಇನ್ನು ದೆಹಲಿಯಲ್ಲಿ ಸದ್ಯದ ಮಟ್ಟಿಗೆ ಪ್ರವಾಹ ಪರಿಸ್ಥಿತಿ ಇಲ್ಲ ಎಂದು ಹೇಳಿರುವ ಸಿಎಂ ಕೇಜ್ರಿವಾಲ್ ಅವರು, 'ತಜ್ಞರ ಪ್ರಕಾರ ಪ್ರವಾಹ ಪರಿಸ್ಥಿತಿ ಇಲ್ಲ. ಒಂದು ವೇಳೆ ಅಂತಹ ಸ್ಥಿತಿ ಎದುರಾದರೆ ಸನ್ನದ್ಧರಾಗಿದ್ದೇವೆ. ನೀರಿನ ಮಟ್ಟ 206 ಮೀಟರ್‌ಗೆ ಏರಿಕೆಯಾದರೆ, ಜನರನ್ನು ಸ್ಥಳಾಂತರಿಸುವ ಕಾರ್ಯ ಆರಂಭಿಸುತ್ತೇವೆ. ನದಿ ತೀರದಲ್ಲಿ ವಾಸಿಸುವ 41 ಸಾವಿರ ಜನರನ್ನು ಗುರುತಿಸಲಾಗಿದ್ದು, ಅವರಿಗಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಅಂತೆಯೇ ಸಿಡಬ್ಲ್ಯುಸಿ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ' ಹೇಳಿದ್ದಾರೆ.
ಯಮುನಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ
ಜುಲೈ 9ರಂದು 45 ಸಾವಿರ ಕ್ಯುಸೆಕ್ ನೀರನ್ನು ಹಥಿನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿಗೆ ಹರಿಬಿಡಲಾಗಿತ್ತು. ಕಳೆದ (ಜು.10 ಸೋಮವಾರ) ರಾತ್ರಿ ಹೆಚ್ಚುವರಿಯಾಗಿ 3 ಲಕ್ಷ ಮತ್ತು ಇಂದು ಬೆಳಗ್ಗೆ 2.5 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದೇ ಬ್ಯಾರೇಜ್‌ನಿಂದ 1978ರಲ್ಲಿ 3.21 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟ ಪರಿಣಾಮ ಯಮುನಾ ನದಿ ನೀರಿನ ಮಟ್ಟ 207.49ಕ್ಕೆ ತಲುಪಿತ್ತು. ಅದರಿಂದ ಉಂಟಾಗಿದ್ದ ಪ್ರವಾಹಕ್ಕೆ ದೆಹಲಿ ಸಾಕ್ಷಿಯಾಗಿತ್ತು.
2013ರಲ್ಲಿ 8 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಟ್ಟದ್ದರಿಂದ ಯಮುನಾ ಮಟ್ಟ 207.32ಕ್ಕೆ ತಲುಪಿತ್ತು. 2019ರಲ್ಲಿ 8.28 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿ ನೀರಿನ ಮಟ್ಟ 206.6ಕ್ಕೆ ತಲುಪಿತ್ತು. ಆದರೆ ಈ ಎರಡೂ ಸಂದರ್ಭದಲ್ಲಿ ಪ್ರವಾಹ ಸ್ಥಿತಿ ಎದುರಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


