ದೇಶ

ಸಂಸತ್ತಿನಲ್ಲಿ 'ನಾಯಿ' ವಿವಾದ ನಡುವೆ ಖರ್ಗೆ ಮತ್ತಿತರರೊಂದಿಗೆ ಸಿರಿಧಾನ್ಯ ಖಾದ್ಯ ಸವಿದ ಪ್ರಧಾನಿ ಮೋದಿ!

2023 ಸಿರಿ ಧಾನ್ಯ ವರ್ಷದ ಅಂಗವಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಮಂಗಳವಾರ ಆಯೋಜಿಸಿದ್ದ ಭೋಜನಕೂಟದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮತ್ತಿತರರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಿರಿಧಾನ್ಯಗಳಿಂದ ಮಾಡಿದ ಆಹಾರವನ್ನು ಸವಿದರು.

ಸಂಸತ್ತಿನಲ್ಲಿ 'ನಾಯಿ' ವಿವಾದ ನಡುವೆ ಖರ್ಗೆ ಮತ್ತಿತರರೊಂದಿಗೆ ಸಿರಿಧಾನ್ಯ ಖಾದ್ಯ ಸವಿದ ಪ್ರಧಾನಿ ಮೋದಿ!
ಭೋಜನಕೂಟದಲ್ಲಿ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು
Published On :

ನವದೆಹಲಿ: 2023 ಸಿರಿ ಧಾನ್ಯ ವರ್ಷದ ಅಂಗವಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ  ತೋಮರ್ ಮಂಗಳವಾರ ಆಯೋಜಿಸಿದ್ದ ಭೋಜನಕೂಟದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮತ್ತಿತರರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಿರಿಧಾನ್ಯಗಳಿಂದ ಮಾಡಿದ ಆಹಾರವನ್ನು ಸವಿದರು.

ಮೋದಿ ಸುಮಾರು 40 ನಿಮಿಷಗಳ ಕಾಲ ಭೋಜನ ಕೂಟದಲ್ಲಿ ಪಾಲ್ಗೊಂಡರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಸಭಾಪತಿ ಜಗದೀಪ್ ಧಂಕರ್ ಮತ್ತಿತರ ಸಂಸದರು ವಿಶೇಷವಾಗಿ ರಾಗಿ, ಸಜ್ಜೆ ಮತ್ತಿತರ ಸಿರಿಧಾನ್ಯಗಳಿಂದ ತಯಾರಿಸಲಾದ ವಿವಿಧ ಖಾದ್ಯಗಳ ರುಚಿಯನ್ನು ಆನಂದಿಸಿದರು.

ಈ ಕುರಿತ ಫೋಟೋಗಳನ್ನು  ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, 2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು  ಗುರುತಿಸಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನಲ್ಲಿ ಸಿರಿಧಾನ್ಯಗಳಿಂದ ಮಾಡಿದ ಭೋಜನಕೂಟದಲ್ಲಿ ಭಾಗವಹಿಸಿದ್ದೇವೆ. ಪಕ್ಷಾತೀತವಾಗಿ ಇಂತಹ ಕೂಟದಲ್ಲಿ ಭಾಗವಹಿಸಿದ್ದಕ್ಕೆ ತುಂಬಾ  ಸಂತೋಷವಾಗಿದೆ ಎಂದು ಹೇಳಿದ್ದಾರೆ. 

ರಾಜಸ್ಥಾನದ ಅಲ್ವಾರ್ ನಲ್ಲಿ ಖರ್ಗೆ ಮಾಡಿದ ಟೀಕೆಗಳ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪರಸ್ಪರ ಕಿಡಿಕಾರಿದ ನಂತರ ನಡೆದ ಭೋಜನಕೂಟ ತೀವ್ರ ಕುತೂಹಲ ಮೂಡಿಸಿತು.

ಕಾಂಗ್ರೆಸ್ ದೇಶಕ್ಕಾಗಿ ಕೆಲಸ ಮಾಡಿದೆ. ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದೆ. ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು ದೇಶಕ್ಕಾಗಿ ಒಂದು "ನಾಯಿಯನ್ನು ಸಹ ಕಳೆದುಕೊಂಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಸತ್ತಿನಲ್ಲಿ ಮಂಗಳವಾರ ತೀವ್ರ ಗದ್ದಲವನ್ನು ಸೃಷ್ಟಿಸಿತು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.