ನ್ಯಾ. ವೈವಿ ಚಂದ್ರಚೂಡ್ ಎದುರು ನನ್ನ 'ಸುಪ್ರೀಂ ಕೋರ್ಟ್ʼ ಯಾನ ಆರಂಭ, ಈಗ ಅವರ ಮಗನಿಗೆ ಅಧಿಕಾರ ಹಸ್ತಾಂತರಿಸುತ್ತಿರುವೆ: ಸಿಜೆಐ ಲಲಿತ್
ನ್ಯಾ. ವೈವಿ ಚಂದ್ರಚೂಡ್ ಎದುರು ನನ್ನ ʼಸುಪ್ರೀಂಕೋರ್ಟ್ʼ ಯಾನ ಆರಂಭವಾಗಿತ್ತು. ಇದೀಗ ಅವರ ಮಗನಿಗೆ ಅಧಿಕಾರ ಹಸ್ತಾಂತರಿಸುತ್ತಿರುವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು ಯು ಲಲಿತ್ ಹೇಳಿದ್ದಾರೆ.

ನವದೆಹಲಿ: ನ್ಯಾ. ವೈವಿ ಚಂದ್ರಚೂಡ್ ಎದುರು ನನ್ನ ʼಸುಪ್ರೀಂಕೋರ್ಟ್ʼ ಯಾನ ಆರಂಭವಾಗಿತ್ತು. ಇದೀಗ ಅವರ ಮಗನಿಗೆ ಅಧಿಕಾರ ಹಸ್ತಾಂತರಿಸುತ್ತಿರುವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು ಯು ಲಲಿತ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು ಯು ಲಲಿತ್ ಅವರು ತಮ್ಮ ಕರ್ತವ್ಯದ ಕೊನೆಯ ದಿನವಾದ ಸೋಮವಾರ ವೃತ್ತಿಗೆ ವಿದಾಯ ಹೇಳಿದರು. ಈ ವೇಳೆ ತಮ್ಮ ಸಹೋದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಲಲಿತ್ ಅವರು, ತಮ್ಮ ವಕೀಲ ವೃತ್ತಿಯಲ್ಲಿ ಎದುರಾದ ವಿಶಿಷ್ಟ ಸನ್ನಿವೇಶವೊಂದನ್ನು ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದರು.
ಸುಪ್ರೀಂ ಕೋರ್ಟ್ ವಕೀಲರಾಗಿ ನ್ಯಾ. ಲಲಿತ್ ಅವರ ಯಾನ 1980ರ ದಶಕದಲ್ಲಿ ಅಂದಿನ ಸಿಜೆಐ ವೈ ವಿ ಚಂದ್ರಚೂಡ್ ಅವರೆದುರು ಪ್ರಕರಣವೊಂದನ್ನು ಪ್ರಸ್ತಾಪಿಸುವ ಮೂಲಕ ಆರಂಭವಾಯಿತು. ಈಗ ಅದೇ ನ್ಯಾ. ವೈ ವಿ ಚಂದ್ರಚೂಡ್ ಅವರ ಪುತ್ರ ನ್ಯಾ. ಡಿ ವೈ ಚಂದ್ರಚೂಡ್ ಅವರಿಗೆ ಅಧಿಕಾರವನ್ನು ಅವರು ವರ್ಗಾಯಿಸುತ್ತಿದ್ದಾರೆ.

"ಈ ನ್ಯಾಯಾಲಯದಲ್ಲಿ ನನ್ನ ಯಾನ ಕೋರ್ಟ್ ನಂ. 1 ರಲ್ಲಿ ವಾದಿಸುವ ಮೂಲಕ ಪ್ರಾರಂಭವಾಯಿತು. ನಾನು ಬಾಂಬೆಯಲ್ಲಿ ಪ್ರಕರಣವೊಂದರ ವಾದದಲ್ಲಿ ತೊಡಗಿದ್ದೆ, ತರುವಾಯ ಅದೇ ಪ್ರಕರಣವನ್ನು ಇಲ್ಲಿ ಸಿಜೆಐ ವೈ ವಿ ಚಂದ್ರಚೂಡ್ ಅವರ ಮುಂದೆ ಪ್ರಸ್ತಾಪಿಸಲು ಬಂದೆ. ಇಲ್ಲಿಗೆ ನನ್ನ ಯಾನ ಕೊನೆಗೊಳ್ಳುತ್ತಿದೆ. ನಾನು ಈಗ ಅವರ ಮಗ ಮತ್ತು ಪ್ರಖ್ಯಾತ ನ್ಯಾಯಶಾಸ್ತ್ರಜ್ಞ (ನ್ಯಾ. ಡಿ ವೈ ಚಂದ್ರಚೂಡ್) ಅವರಿಗೆ ಅಧಿಕಾರ ಹಸ್ತಾಂತರಿಸುತ್ತಿದ್ದೇನೆ" ಎಂದು ಸಿಜೆಐ ಲಲಿತ್ ಹೇಳಿದರು.
ಸಿಜೆಐ ಲಲಿತ್ ಅವರು ನಾಳೆ ನಿವೃತ್ತರಾಗಲಿದ್ದಾರೆ. ಆದರೆ ಗುರುನಾನಕ್ ಜಯಂತಿಯ ನಿಮಿತ್ತ ನ್ಯಾಯಾಲಯ ತೆರೆಯುವುದಿಲ್ಲ. ಹೀಗಾಗಿ ಭಾವಿ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾ. ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಔಪಚಾರಿಕ ಪೀಠದ ಕಲಾಪದ ವೇಳೆ ಕಾನೂನು ಅಧಿಕಾರಿಗಳು, ಹಿರಿಯ ನ್ಯಾಯವಾದಿಗಳು ಹಾಗೂ ವಕೀಲರು ಅವರನ್ನು ಬೀಳ್ಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


