ಪ್ರತಿಭಟನೆ, ರೈತರ ಮಾರಣ ಹೋಮದಿಂದ ಸುದ್ದಿಯಾಗಿದ್ದ ಲಖೀಂಪುರ್ ಖೇರಿಯಲ್ಲಿ ಕಮಲ ಕಮಾಲ್; ಎಲ್ಲ ಕ್ಷೇತ್ರಗಳೂ ಕ್ಲೀನ್ ಸ್ವೀಪ್!!
ಕೃಷಿ ಕಾಯ್ದೆ ಪ್ರತಿಭಟನೆಯಿಂದ ವಿಶ್ವದ ಗಮನ ಸೆಳೆದಿದ್ದ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಿಜಕ್ಕೂ ಬಿಜೆಪಿ ಕಮಾಲ್ ಮಾಡಿದ್ದು ಕ್ಷೇತ್ರದ ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಲಖೀಂಪುರ ಖೇರಿ (ಉತ್ತರ ಪ್ರದೇಶ): ಕೃಷಿ ಕಾಯ್ದೆ ಪ್ರತಿಭಟನೆಯಿಂದ ವಿಶ್ವದ ಗಮನ ಸೆಳೆದಿದ್ದ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಿಜಕ್ಕೂ ಬಿಜೆಪಿ ಕಮಾಲ್ ಮಾಡಿದ್ದು ಕ್ಷೇತ್ರದ ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಹೌದು.. ಉತ್ತರ ಪ್ರದೇಶದ ಲಖೀಂಪುರ ಖೇರಿಯ ಎಂಟೂ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಇಲ್ಲಿನ ಪಾಲಿಯಾ, ನಿಗಾಸನ್, ಗೋಲಾ ಖೋರಾನಾಥ್, ಶ್ರೀನಗರ, ಧೌರಾಹ್ರಾ, ಲಖಿಂಪುರ, ಕಸ್ತಾ ಮತ್ತು ಮೊಹಮ್ಮದಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆದು, ವಿಶ್ವವ್ಯಾಪಿ ಲಖೀಂಪುರ ಖೇರಿ ಗಮನ ಸೆಳೆದಿತ್ತು. ಅಲ್ಲದೆ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿದ್ದ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆಯ ಬಳಿಕ ದೊಡ್ಡ ಮಟ್ಟದ ಹಿಂಸಾಚಾರ ಉಂಟಾಗಿ ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದಾರೆ.
ರೈತರ ಹೆಸರಿನಲ್ಲಿ ನಡೆದಿದ್ದ ಪ್ರತಿಭಟನೆ ಆ ನಂತರ ನಡೆದ ಹಿಂಸಾಚಾರಗಳಿಂದ ವಿದೇಶದಲ್ಲಿಯೂ ಭಾರತದ ವಿರುದ್ಧ ದನಿ ಎತ್ತುವ ಸ್ಥಿತಿ ನಿರ್ಮಾಣವಾಗಿತ್ತು. ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿಕೊಂಡು ನಡೆದಿದ್ದ ಈ ಪ್ರತಿಭಟನೆಯ ನಂತರ ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲಲಾರದು ಎಂದು ಕಾಂಗ್ರೆಸ್ ಸೇರಿದಂತೆ ಬಹುತೇಕ ಎಲ್ಲಾ ಪಕ್ಷಗಳೂ ಅಂದುಕೊಂಡಿದ್ದವು. ಇವೆಲ್ಲಾ ನಡೆದ ಬಳಿಕ ಬಿಜೆಪಿ ವಿರುದ್ಧ ಮತದಾರರು ಭಾರಿ ಅಸಮಾಧಾನಗೊಂಡಿದ್ದಾರೆ ಎಂದೇ ಹೇಳಲಾಗಿತ್ತು.
ಇದನ್ನೂ ಓದಿ: 'ಸಾಹೇಬರ ಬುದ್ದಿವಂತಿಕೆಯ ಪ್ರಯತ್ನ: 2024ರ ಲೋಕಸಭಾ ಚುನಾವಣೆ ಕುರಿತ ಪ್ರಧಾನಿ ಹೇಳಿಕೆ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ
ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದ್ದು, ಅಚ್ಚರಿ ಎಂದರೆ ಇಲ್ಲಿರುವ ಎಂಟೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ. ಹಿಂಸಾಚಾರ ನಡೆದ ನಿಘಾಸನ್ ಕ್ಷೇತ್ರದಲ್ಲಿ ಬಿಜೆಪಿಯ ಶಶಾಂಕ್ ವರ್ಮಾ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.
ಅಂದಹಾಗೆ,. 2017 ರಲ್ಲಿ ಕೂಡ ಲಖೀಂಪುರ್ನ ಪಾಲಿಯಾ, ನಿಗಾಸನ್, ಗೋಲಾ ಖೋರಾನಾಥ್, ಶ್ರೀನಗರ, ಧೌರಾಹ್ರಾ, ಲಖಿಂಪುರ, ಕಸ್ತಾ ಮತ್ತು ಮೊಹಮ್ಮದಿಯಲ್ಲಿ ಬಿಜೆಪಿ ಗೆದ್ದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


