ಮತ ಕೇಳಲು ನಿಮ್ಮ ತಂದೆಯ ಫೋಟೊ ಬಳಸಿ: ಏಕನಾಥ್ ಶಿಂಧೆಗೆ ಉದ್ಧವ್ ಠಾಕ್ರೆ ಸವಾಲು
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಂಡಾಯ ಶಾಸಕರಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿ ಆಗಿತ್ತು. ಇದರಿಂದಾಗಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮತ ಕೇಳಲು ನಿಮ್ಮ ಸ್ವಂತ ಪೋಷಕರ ಚಿತ್ರಗಳನ್ನು ಬಳಸಿ ನಮ್ಮ ಅಪ್ಪನದ್ದಲ್ಲ ಎಂದು ಏಕನಾಥ್ ಶಿಂಧೆಗೆ ಠಾಕ್ರೆ ಹೇಳಿದ್ದಾರೆ.

ಮುಂಬೈ: ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಎದ್ದಿದ್ದ ಬಂಡಾಯದಿಂದಾಗಿ ಮುಖ್ಯಮಂತ್ರಿ ಸ್ಥಾನದಿಂದ ಉದ್ಧವ್ ಠಾಕ್ರೆ ಅವರು ಕೆಳಗಿಳಿಯಬೇಕಾಯಿತು ಮತ್ತು ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅವರು ಅಧಿಕಾರ ವಹಿಸಿಕೊಂಡರು. ಇದೀಗ ಶಿಂಧೆ ವಿರುದ್ಧ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.
ನಾನು ಅಸ್ವಸ್ಥವಾಗಿ ಆಸ್ಪತ್ರೆಯಲ್ಲಿದ್ದಾಗ ಮತ್ತು ನಡೆಯಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ವೇಳೆ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಶಿಂಧೆ ಪ್ರಯತ್ನಿಸಿದರು. ಬಂಡಾಯಕಾರರನ್ನು 'ಕೊಳೆತ ಎಲೆ'ಗಳಿಗೆ ಹೋಲಿಸಿರುವ ಠಾಕ್ರೆ, ಹೊಸ ಎಲೆಗಳಿಗೆ ಅವರು ದಾರಿ ಮಾಡಿಕೊಡಲೇಬೇಕು ಎಂದು ಶಿವಸೇನೆಯ ಮುಖವಾಣಿ ಸಾಮ್ನಾಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
'ಶಿಂಧೆ ಬಣ ಮಾಡಿದ ಬಂಡಾಯದಿಂದಾಗಿ ಸರ್ಕಾರ ಉರುಳಿತು, ನನ್ನ ಮುಖ್ಯಮಂತ್ರಿ ಸ್ಥಾನ ಹೋಯಿತು. ಇದಕ್ಕಾಗಿ ನನಗೆ ಪಶ್ಚಾತ್ತಾಪವಿಲ್ಲ. ಆದರೆ, ನನ್ನದೇ ಜನರು ಈಗ ದೇಶದ್ರೋಹಿಗಳಾಗಿ ಹೊರಹೊಮ್ಮಿದ್ದಾರೆ. ನಾನು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವಾಗ ಅವರು ನನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದರು' ಎಂದು ಠಾಕ್ರೆ ಹೇಳಿದ್ದಾರೆ.
'ಇಷ್ಟೇ ಸಾಲದು ಎಂಬಂತೆ, ಈಗ ತನ್ನ ತಂದೆ ಬಾಳ್ ಠಾಕ್ರೆ ಅವರು ಸ್ಥಾಪಿಸಿದ ಪಕ್ಷದ ಮೇಲಿನ ಹಿಡಿತವನ್ನು ಕೂಡ ಕಸಿದುಕೊಳ್ಳುವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಿವಸೇನೆಯು ನ್ಯಾಯಾಲಯದಲ್ಲಿ ಅಥವಾ ಬೀದಿಯಲ್ಲಾದರೂ ಸರಿ ಯುದ್ಧವನ್ನು ಗೆದ್ದೇ ಗೆಲ್ಲುತ್ತದೆ' ಎಂದು ಹೇಳಿದರು.
'ಅವರೆಲ್ಲ ನನಗೆ ದ್ರೋಹ ಬಗೆದಿದ್ದಾರೆ, ಪಕ್ಷವನ್ನು ಒಡೆದಿದ್ದಾರೆ. ಹೀಗಿರುವಾಗ ಅವರು ಅವರ ಸ್ವಂತ ತಂದೆಯ ಚಿತ್ರಗಳನ್ನು ಬಳಸಿ ಮತ ಕೇಳಬೇಕು ಹೊರತು ಶಿವಸೇನೆಯ ಸ್ಥಾಪಕರಾದ ನಮ್ಮ ತಂದೆಯ ಚಿತ್ರಗಳನ್ನು ಬಳಸಿಕೊಂಡು ಮತ ಭಿಕ್ಷೆ ಬೇಡುವುದನ್ನು ನಿಲ್ಲಿಸಲಿ' ಎಂದು ಅವರು ಹೇಳಿದರು.
'ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ಕೆಲವರು ನನಗಾಗಿ ಪ್ರಾರ್ಥಿಸುತ್ತಿದ್ದರೆ, ಇನ್ನು ಕೆಲವರು ನಾನು ಇದೇ ಸ್ಥಿತಿಯಲ್ಲಿರಲಿ ಎಂದು ಬೇಡಿದ್ದು ನನಗೆ ತಿಳಿಯಿತು. ನಾನು ನಡೆಯಲೂ ಸಾಧ್ಯವಾಗದ ಸ್ಥಿತಿಯಲ್ಲಿರುವಾಗಲೇ ಕೆಲವರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದರು. ಈ ನೋವಿವ ವಾಸ್ತವದಲ್ಲೇ ನಾನು ಯಾವಾಗಲು ಬದುಕುತ್ತೇನೆ. ಈ ವೇಳೆ ನಾನು ಪಕ್ಷದಲ್ಲಿ ಎರಡನೇ ಸ್ಥಾನದಲ್ಲಿದ್ದವರಿಗೆ ಪಕ್ಷವನ್ನು ವಹಿಸಿಕೊಟ್ಟಿದ್ದೆ. ಆದರೆ, ಅವರು ನನ್ನ ನಂಬಿಕೆಯನ್ನು ಮುರಿದರು' ಎಂದು ಶಿಂಧೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಡಾಯವೆದ್ದಿದ್ದವರು ಶಿವಸೇನೆಯನ್ನು ಠಾಕ್ರೆ ಕುಟುಂಬದಿಂದ ಬೇರ್ಪಡಿಸಲು ಬಯಸಿದ್ದರು. ಅದು ಹೇಗೆಂದರೆ ಕಾಂಗ್ರೆಸ್ ಪಕ್ಷವನ್ನು ಗಾಂಧಿ ಕುಟುಂಬದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿರುವಂತೆ ಎಂದು ಆರೋಪಿಸಿದ ಅವರು, ಇತರ ಪಕ್ಷಗಳಿಂದ ಮಹಾನ್ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ನಿಂದ ಸರ್ದಾರ್ ಪಟೇಲ್‌ರನ್ನು ಆಯ್ಕೆ ಮಾಡಿಕೊಂಡಿದ್ದರೆ, ಶಿವಸೇನೆಯಿಂದ ನನ್ನ ತಂದೆಯನ್ನು ಆಯ್ಕೆ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.
ಬಂಡಾಯ ಶಾಸಕರ ಅನರ್ಹತೆ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ಶಿವಸೇನೆ ಪಕ್ಷದ ಮೇಲೆ ಯಾರ ಹಿಡಿತವಿದೆ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸುವುದನ್ನು ತಡೆಯುವಂತೆ ಠಾಕ್ರೆ ತಂಡ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಬಿಜೆಪಿಯ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ ನಂತರ ಏಕನಾಥ್ ಶಿಂಧೆ ಅವರ ತಂಡವು ಇದುವೇ "ನಿಜವಾದ ಶಿವಸೇನೆ" ಎಂದು ಹೇಳಿಕೊಂಡಿದೆ.
ಮಹಾರಾಷ್ಟ್ರದ ಶಿವಸೇನೆ ಪಕ್ಷವನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ಸಾಬೀತುಪಡಿಸಲು ಆಗಸ್ಟ್ 8 ರೊಳಗೆ ದಾಖಲೆಗಳನ್ನು ಒದಗಿಸುವಂತೆ ಚುನಾವಣಾ ಆಯೋಗವು ಎರಡೂ ಸೇನಾ ಬಣಗಳಿಗೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


